ತುಮಕೂರು: ದಂಪತಿಯ ಮಧ್ಯೆ ಮೂರನೇ ವ್ಯಕ್ತಿಯ ಪ್ರವೇಶದಿಂದ ಕುಟುಂಬಗಳ ನೆಮ್ಮದಿ ಕೆಡುತ್ತಿದೆ. ಮಹಿಳೆಯರು ಎಚ್ಚರದಿಂದ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಸಲಹೆ ನೀಡಿದರು.
ನಗರ ಹೊರವಲಯದ ಭೀಮಸಂದ್ರದ ಜಗನ್ಮಾಥ ವಿದ್ಯಾಪೀಠದಲ್ಲಿ ಭಾನುವಾರ ಕಾನೂನು ಸೇವಾ ಪ್ರಾಧಿಕಾರ, ಮುನ್ನಡೆ ಸಾಮಾಜಿಕ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಮಹಿಳೆಯರಿಗೆ ಕಾನೂನು ಅರಿವು– ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಬದುಕಿನಲ್ಲಿ ಅಪರಿಚಿತ ವ್ಯಕ್ತಿಗಳು ಚೆಲ್ಲಾಟವಾಡುತ್ತಾರೆ. ಸಾಮಾಜಿಕ ಜಾಲ ತಾಣಗಳು ಹೆಚ್ಚು ಸಕ್ರಿಯವಾಗಿರುವ ಈ ಕಾಲಘಟ್ಟದಲ್ಲಿ ಮಹಿಳೆಯರು ಎಚ್ಚರಿಕೆಯಿಂದ ಇರಬೇಕು. ಅಪರಿಚಿತ ವ್ಯಕ್ತಿಗಳಿಂದ ನೆಮ್ಮದಿ ಇಲ್ಲದಂತಾಗುತ್ತದೆ. ಎಲ್ಲರ ಜತೆ ಗೆಳೆತನ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಮನೆ, ಕೆಲಸದ ಸ್ಥಳ, ಉದ್ಯೋಗದ ಸ್ಥಳಕ್ಕೆ ಹೋಗಿ ಬರುವ ವಾಹನ ಹೀಗೆ ಎಲ್ಲ ಕಡೆ ಮಹಿಳೆಗೆ ಕಿರುಕುಳ ನೀಡಲಾಗುತ್ತಿದೆ. ದೌರ್ಜನ್ಯ, ಕಿರುಕುಳ ತಡೆಗೆ ಉದ್ಯೋಗಸ್ಥ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆ ಜಾರಿಗೊಳಿಸಲಾಗಿದೆ. ಹೆಣ್ಣು ಮಕ್ಕಳು ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗಬೇಕು ಎಂದರು.
ಲೇಖಕಿ ಬಾ.ಹ.ರಮಾಕುಮಾರಿ, ‘ಮಹಿಳೆಯರ ಮೇಲೆ ಮೌಢ್ಯ, ಸಂಪ್ರದಾಯ ಹೇರಲಾಗುತ್ತಿದೆ. ಇದರ ವಿರುದ್ಧ ಜಾಗೃತಿ ಮೂಡಿಸಬೇಕು. ದೌರ್ಜನ್ಯದ ವಿರುದ್ಧ ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಮಹಿಳೆಯರಿಗೆ ಸಂಘಟನೆ, ಕಾನೂನು ಬೆನ್ನೆಲುಬಾಗಿ ನಿಲ್ಲಬೇಕು. ಬದುಕಿನ ಕಷ್ಟಗಳನ್ನು ಸವಾಲಾಗಿ ಧೈರ್ಯದಿಂದ ಎದುರಿಸಬೇಕು’ ಎಂದು ಹೇಳಿದರು.
ಮುನ್ನಡೆ ಸಾಮಾಜಿಕ ಸಂಸ್ಥೆ ಕಾರ್ಯದರ್ಶಿ ಯಶೋದ, ಜಗನ್ಮಾಥ ವಿದ್ಯಾಪೀಠದ ಕಾರ್ಯದರ್ಶಿ ನಂಜುಂಡರಾರ್, ಸಂಸ್ಥೆಯ ಭವ್ಯಾ, ಜ್ಯೋತಿ, ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಇತರರು ಹಾಜರಿದ್ದರು.