ಮಂಗಳವಾರ, ಡಿಸೆಂಬರ್ 1, 2020
24 °C
ತುಮಕೂರು; ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಚಿರತೆಗಳು ಸೆರೆ

ತುಮಕೂರು ಜಿಲ್ಲೆಯಲ್ಲಿ ಬೋನಿಗೆ ಬೀಳುತ್ತಲೇ ಇರುವ ಚಿರತೆಗಳು

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ತುಮಕೂರು: 2019ರ ನವೆಂಬರ್‌ನಿಂದ 2020ರ ನವೆಂಬರ್ 19ರವರೆಗೆ ತುಮಕೂರು ಜಿಲ್ಲೆಯಲ್ಲಿ ಒಟ್ಟು 37 ಚಿರತೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಈ ಅವಧಿಯಲ್ಲಿ ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಚಿರತೆಗಳು ಕಲ್ಪತರು ನಾಡಿನಲ್ಲಿ ಸೆರೆ ಸಿಕ್ಕಿವೆ! ನವೆಂಬರ್‌ ತಿಂಗಳ ಈ 20 ದಿನಗಳಲ್ಲಿಯೇ ಐದು ಚಿರತೆಗಳು ಸೆರೆಯಾಗಿವೆ.

ಇದನ್ನು ಓದಿ: ಸಂಪಾದಕರ ಮಾತು | ಪ್ರಜಾವಾಣಿ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಲೋಕಾರ್ಪಣೆ

ಗುಡ್ಡಗಳು, ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆಗಳು ಈಗ ತುಮಕೂರು ಮಹಾನಗರ ಸೇರಿದಂತೆ ತಾಲ್ಲೂಕು ಕೇಂದ್ರಗಳ ಹೊರವಲಯಗಳಲ್ಲಿ ಹಾಡಹಗಲೇ ಕಾಣಿಸಿಕೊಳ್ಳುತ್ತಿವೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ವಾರಕ್ಕೆ ಕನಿಷ್ಠ ಎರಡಾದರೂ ಚಿರತೆ ದಾಳಿ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗುತ್ತಿವೆ. ಸಾಕು ಪ್ರಾಣಿಗಳ ಜತೆಗೆ ಮನುಷ್ಯರ ಮೇಲೂ ಹೆಚ್ಚಿನದಾಗಿಯೇ ದಾಳಿ ನಡೆಸುತ್ತಿವೆ. ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ಅವರು ನಡೆಸಿದ ಅಧ್ಯಯನ ಪ್ರಕಾರ ಜಿಲ್ಲೆಯ 93 ಗ್ರಾಮಗಳಲ್ಲಿ ಮಾನವ ಮತ್ತು ಚಿರತೆ ನಡುವೆ ಸಂಘರ್ಷ ಇದೆ. ಈ ದಾಳಿಗಳನ್ನು ಗಮನಿಸಿದರೆ ಈಗ ಗ್ರಾಮಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.

‘ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಚಿರತೆಗಳನ್ನು ಸೆರೆ ಹಿಡಿದಿರುವುದು ರಾಜ್ಯದಲ್ಲಿ ಇದೇ ಮೊದಲು ಎನಿಸುತ್ತದೆ. ಆದರೂ ಚಿರತೆಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಲೇ ಇದೆ. ಸೆರೆ ಸಿಕ್ಕ ಚಿರತೆಯನ್ನು ಬಂಡೀಪುರ, ನಾಗರಹೊಳೆ ಸೇರಿದಂತೆ ಜಿಲ್ಲೆಯಿಂದ 300 ಕಿಲೋಮೀಟರ್ ದೂರದ ಪ್ರದೇಶಗಳಿಗೆ ಬಿಟ್ಟು ಬರುತ್ತಿದ್ದೇವೆ. ಸೆರೆಯಾದ ಚಿರತೆಗಳ ಮೈ ಮೇಲಿನ ಚುಕ್ಕಿ ಗುರುತು, ಪಟ್ಟೆಗಳು ಇತ್ಯಾದಿ ಮಾಹಿತಿಯನ್ನು ದಾಖಲೀಕರಣ ಮಾಡಿಕೊಂಡಿದ್ದೇವೆ. ಯಾವು ಸಹ ಮತ್ತೆ ವಾಪಸ್ ಬಂದಿಲ್ಲ’ ಎಂದು ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಗಿರೀಶ್ ಮಾಹಿತಿ ನೀಡುವರು.

‘ಗ್ರಾಮೀಣ ಭಾಗಗಳಲ್ಲಿ ಬಹಳಷ್ಟು ಮಂದಿ ಹಳ್ಳಿಗಳನ್ನು ತೊರೆದು ಪಟ್ಟಣಗಳನ್ನು ಸೇರಿದ್ದಾರೆ. ಇವರು ಜಮೀನುಗಳನ್ನು ಬೀಳುಬಿಟ್ಟಿದ್ದು ಬೃಹತ್ ಪೊದೆಗಳು ಬೆಳೆದಿವೆ. ಈ ಪೊದೆಗಳು ಚಿರತೆಗಳ ಸಂತಾನೋತ್ಪತ್ತಿ, ಮರಿಗಳ ರಕ್ಷಣೆಗೆ ಸೂಕ್ತ ಸ್ಥಳಗಳಾಗಿವೆ. ಈ ಅಡಗುತಾಣಗಳು ಗ್ರಾಮಗಳ ಸಮೀಪವೇ ಇರುವುದರಿಂದ ಆಹಾರವೂ ಉತ್ತಮವಾಗಿ ಸಿಗುತ್ತಿದೆ. ಆದ್ದರಿಂದ ಚಿರತೆಗಳಿಗೆ ಮರಿಗಳ ಪೋಷಣೆ ಸುಲಭವಾಗಿದೆ’ ಎನ್ನುವರು.

‘ಗ್ರಾಮಗಳ ಬಳಿ ಚಿರತೆ ಕಾಣಿಸಿಕೊಳ್ಳುತ್ತಿದೆ ಎಂದು ತಿಳಿಸಿದ ಕಡೆಗಳಲ್ಲಿ ಬೋನ್ ಇಡುತ್ತಿದ್ದೇವೆ. 34 ಚಿರತೆಗಳು ಬೋನಿಗೆ ಬಿದ್ದಿದ್ದರೆ ಕಾಲುವೆಯಲ್ಲಿದ್ದ, ಬಾವಿಗೆ ಬಿದ್ದ ಮೂರು ಚಿರತೆಗಳನ್ನು ರಕ್ಷಿಸಿದ್ದೇವೆ’ ಎಂದರು.

5 ಮಂದಿ ಬಲಿ; 15 ಸೆರೆ

ತುಮಕೂರು, ಗುಬ್ಬಿ ಮತ್ತು ಕುಣಿಗಲ್ ತಾಲ್ಲೂಕುಗಳು ಕೂಡುವ ಹೆಬ್ಬೂರು ಹೋಬಳಿ ಸುತ್ತಮುತ್ತ ಪ್ರಸಕ್ತ ವರ್ಷ ಚಿರತೆ ದಾಳಿಗೆ ಐದು ಮಂದಿ ಬಲಿಯಾಗಿದ್ದಾರೆ. ಈ ವ್ಯಾಪ್ತಿಯ ಐದಾರು ಕಿ.ಮೀನಲ್ಲಿ 30ಕ್ಕೂ ಹೆಚ್ಚು ಬೋನ್‌ಗಳು, 45 ಕಡೆಗಳಲ್ಲಿ ಕ್ಯಾಮೆರಾ ಟ್ರ್ಯಾಪ್ ಅಳವಡಿಸಿ ಚಿರತೆಗಳ ಚಲನವಲನಗಳ ಬಗ್ಗೆ ನಿಗಾ ಇಡಲಾಗಿತ್ತು. ಈ ಕ್ಯಾಮೆರಾಗಳಲ್ಲಿ 26ಕ್ಕೂ ಹೆಚ್ಚು ಚಿರತೆಗಳು ಟ್ರಾಪ್ ಆಗಿದ್ದವು. ಹೆಬ್ಬೂರು ಹೋಬಳಿ ವ್ಯಾಪ್ತಿಯಲ್ಲಿಯೇ 15 ಚಿರತೆಗಳು ಬೋನಿಗೆ ಬಿದ್ದಿವೆ. ಇಂದಿಗೂ ಈ ವಲಯ ಚಿರತೆ ದಾಳಿಯ ಹಾಟ್ ಸ್ಪಾಟ್ ಆಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು