ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ಸಾಹಿತಿ ಕವಿತಾ ಕೃಷ್ಣ ನಿಧನ

Published 11 ಫೆಬ್ರುವರಿ 2024, 15:30 IST
Last Updated 11 ಫೆಬ್ರುವರಿ 2024, 15:30 IST
ಅಕ್ಷರ ಗಾತ್ರ

ತುಮಕೂರು: ಹಿರಿಯ ಸಾಹಿತಿ, ಜಿಲ್ಲೆಯ ಸಾಂಸ್ಕೃತಿಕ ಕ್ಷೇತ್ರದ ಧ್ವನಿಯಾಗಿದ್ದ ಕವಿತಾಕೃಷ್ಣ (80) ಅವರು ನಗರದ ಕ್ಯಾತ್ಸಂದ್ರದ ತಮ್ಮ ಮನೆಯಲ್ಲಿ ಭಾನುವಾರ ಸಂಜೆ ನಿಧನರಾದರು.

ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಕ್ಷೇತ್ರದತ್ತ ಆಸಕ್ತಿ ತೋರಿದ ಕವಿತಾ ಕೃಷ್ಣ ಈ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯಲ್ಲಿ ಲೇಖಕಿಯರ ಸಂಘದ ರಚನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಕೆಲ ಕಾಲ ಸಂಘದ ಗೌರವಾಧ್ಯಕ್ಷರಾಗಿದ್ದರು.

ಶಿಕ್ಷಕರಾಗಿ ಕೆಲಸ ಮಾಡುತ್ತಾ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅಂತಿಮವಾಗಿ ನೆಲಮಂಗಲ ತಾಲ್ಲೂಕಿನ ಮಣ್ಣೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ನಿವೃತ್ತಿ ಹೊಂದಿದ್ದರು. ನಂತರ ಸಂಪೂರ್ಣವಾಗಿ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಜೀವನ ಮೀಸಲಿಟ್ಟಿದ್ದರು.

ಕವನ ಸಂಕಲನ, ನಾಟಕ, ಶೈಕ್ಷಣಿಕ, ಸಂಶೋಧನೆ, ಮಕ್ಕಳ ಸಾಹಿತ್ಯ ಒಳಗೊಂಡಂತೆ 125ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ‘ವಾಲ್ಮೀಕಿ ವಚನ ರಾಮಾಯಣ, ಮಹಾತ್ಮ ಬುದ್ಧ, ಭಕ್ತಿ ತರಂಗಿಣಿ ಕನಕದಾಸರು, ಸಿದ್ಧಗಂಗೆಯ ಸಿದ್ಧಿಪುರುಷ, ದೇವರ ದಾಸಿಮಯ್ಯ, ರಾಮಕೃಷ್ಣ ಪರಮಹಂಸ, ನಾದಯೋಗಿ ನಾರೇಯಣ, ಬದುಕುವ ದಾರಿ’ ಕವಿತಾ ಕೃಷ್ಣರವರ ಪ್ರಮುಖ ಕೃತಿಗಳು.

‘ಕವಿತಾ’ ಪ್ರಕಾಶದ ಮೂಲಕ ಪ್ರಕಾಶಕರಾಗಿ ಹಲವಾರು ಯುವ ಲೇಖಕರನ್ನು ಪ್ರೋತ್ಸಾಹಿಸುತ್ತಿದ್ದರು. ತಮ್ಮ ಮನೆಯಲ್ಲಿಯೇ ‘ಸಾಹಿತ್ಯ ಮಂದಿರ’ ನಿರ್ಮಿಸಿ ಕೃತಿಗಳ ಲೋಕಾರ್ಪಣೆಗೆ ವೇದಿಕೆ ಕಲ್ಪಿಸುತ್ತಿದ್ದರು. ಜೀವನದುದ್ದಕ್ಕೂ ಸಾಹಿತ್ಯ ಕ್ಷೇತ್ರಕ್ಕಾಗಿ ದುಡಿದಿದ್ದರು.

ಕವಿತಾ ಕೃಷ್ಣ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ನಗರದ ಸಾಹಿತ್ಯ ಮಂದಿರದಲ್ಲಿ ಸೋಮವಾರ ಬೆಳಗ್ಗೆ 9 ಗಂಟೆಯಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 1 ಗಂಟೆಯ ನಂತರ ಗಾರ್ಡನ್‌ ರಸ್ತೆಯಲ್ಲಿರುವ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಕವಿತಾಕೃಷ್ಣ
ಕವಿತಾಕೃಷ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT