ಕುಣಿಗಲ್: ಪ್ರೀತಿಸಿದ ಯುವತಿಯ ಆತ್ಮಹತ್ಯೆ ಸುದ್ದಿ ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಿಯಕರನ ಅಸ್ತಿಪಂಜರ ಆರು ತಿಂಗಳ ನಂತರ ತಾಲ್ಲೂಕಿನ ಹುಲಿಯೂರು ದುರ್ಗದಿಂದ ಮಾಗಡಿಗೆ ಹೋಗುವ ಮಾರ್ಗ ಮದ್ಯದ ಕಾಡಿನಲ್ಲಿ ಶುಕ್ರವಾರ ಸಂಜೆ ಪತ್ತೆಯಾಗಿದೆ.
ಕಾಡುಶನೇಶ್ವರಸ್ವಾಮಿ ದೇವಾಲಯ ಹಿಂಭಾಗದ ಕಾಡಿನ ಬಂಡೆ ಬಳಿ ಶುಕ್ರವಾರ ಬೈಕ್ ಪತ್ತೆಯಾಗಿದ್ದು, ಅರಣ್ಯ ಇಲಾಖೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪರಿಶೀಲಿಸಿದಾಗ ಬೈಕ್ ಪಕ್ಕದಲ್ಲಿ ವಿಷದ ಬಾಟಲಿ ಮತ್ತು ಅಸ್ತಿಪಂಜರ ಸಿಕ್ಕಿದೆ. ಬೈಕ್ ಸಂಖ್ಯೆ ಆಧರಿಸಿ ಮೃತನ ವಿಳಾಸ ಪತ್ತೆಮಾಡಲಾಗಿದೆ.
ಮೃತರನ್ನು ತಾಲ್ಲೂಕಿನ ಅರಮನೆ ಹೊನ್ನಮಾಚನಹಳ್ಳಿಯ ಸಂತೋಷ (30) ಎಂದು ಗುರುತಿಸಲಾಗಿದ್ದು, ಇವರು ಬೆಂಗಳೂರು ಹೊಯ್ಸಳ ನಗರದಲ್ಲಿ ವಾಸವಿದ್ದರು.
ಸಂತೋಷ, ತಾಲ್ಲೂಕಿನ ಕೆಬ್ಬಳಿಯ ಶಾಲಿನಿಯನ್ನು ಪ್ರೀತಿಸುತ್ತಿದ್ದರು. ವಿವಾಹಕ್ಕೆ ಪೋಷಕರು ನಿರಾಕರಿಸಿದ ಕಾರಣ ಶಾಲಿನಿ ಕಳೆದ ನವೆಂಬರ್ 25ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥರಾಗಿದ್ದ ಶಾಲಿನಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ನವೆಂಬರ್ 27ರಂದು ಮೃತಪಟ್ಟಿದ್ದರು.
ಶಾಲಿನಿಯ ಸಾವಿನ ಸುದ್ದಿ ತಿಳಿದು ಸಂತೋಷ ಸಹ ಆತ್ಮಹತ್ಯೆಗೆ ಯತ್ನಿಸಿದ್ದು, ಪೋಷಕರು ಚಿಕಿತ್ಸೆ ಕೊಡಿಸಿದ್ದರು. ನಂತರ ನವೆಂಬರ್ 28ರಂದು ಬೆಂಗಳೂರಿನಿಂದ ಬಂದಿದ್ದ ಸಂತೋಷ, ಕಾಡಿನ ಬಂಡೆ ಬಳಿ ಬೈಕ್ ನಿಲ್ಲಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶುಕ್ರವಾರ ಸಂಜೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹುಲಿಯೂರುದುರ್ಗ ಪೊಲೀಸರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.