ಬುಧವಾರ, ಆಗಸ್ಟ್ 17, 2022
27 °C
ಕನ್ನಡ ಸಂಘಟನೆಗಳ ಕಾರ್ಯಕರ್ತರಿಂದ ಪ್ರತಿಭಟನೆ; ಮರಾಠಾ ಅಭಿವೃದ್ಧಿ ನಿಗಮ ಕೈ ಬಿಡಲು ಆಗ್ರಹ

ಬಂದ್‌ಗೆ ನೀರಸ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಮರಾಠಾ ಅಭಿವೃದ್ಧಿ ನಿಗಮ ವಿರೋಧಿಸಿ ವಿವಿಧ ಕನ್ನಡ ಸಂಘಟನೆಗಳು ಕರೆ ನೀಡಿದ್ದ ರಾಜ್ಯ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲಾ ಕೇಂದ್ರ ತುಮಕೂರಿನಲ್ಲಿ ಜನಜೀವನ, ವ್ಯಾಪಾರ ವಹಿವಾಟು, ವಾಹನಗಳ ಸಂಚಾರ ಸೇರಿದಂತೆ ನಿತ್ಯದ ಚಟುವಟಿಕೆಗಳ ಮೇಲೆ ಸ್ವಲ್ಪ ಮಟ್ಟಿನ ಪರಿಣಾಮವೂ ಬೀರಲಿಲ್ಲ. ತಾಲ್ಲೂಕು ಕೇಂದ್ರಗಳಲ್ಲಿಯೂ ಇದೇ ಸ್ಥಿತಿ ಇತ್ತು.

ವಿವಿಧ ಕನ್ನಡ ಸಂಘಟನೆಗಳ ಮುಖಂಡರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬೆಳಿಗ್ಗೆ 10 ಗಂಟೆ ವೇಳೆಗೆ ನಗರದ ಎಂ.ಜಿ.ರಸ್ತೆ, ಹೊರಪೇಟೆ, ಮಂಡಿಪೇಟೆ, ಬಿ.ಎಚ್‌.ರಸ್ತೆ, ಎಸ್‌.ಎಸ್‌.ಪುರಂ, ಶೆಟ್ಟಿಹಳ್ಳಿ ರಸ್ತೆ, ಕುಣಿಗಲ್ ರಸ್ತೆ ಸೇರಿದಂತೆ ಎಲ್ಲ ಕಡೆಯೂ ಅಂಗಡಿಗಳು ಒಂದೊಂದಾಗಿ ತೆರೆಯುತ್ತಿದ್ದವು. ಆಟೊ, ಬಸ್ ಸಂಚಾರ ಎಂದಿನ ರೀತಿಯಲ್ಲಿಯೇ ಇತ್ತು. ತಳ್ಳುಗಾಡಿ ವ್ಯಾಪಾರಿಗಳು ತಮ್ಮ ಕೆಲಸದಲ್ಲಿ ತೊಡಗಿದ್ದರು. ಹೋಟೆಲ್‌ಗಳ ಬಳಿಯೂ ಅಪಾರವಾದ ಜನಸಂದಣಿ ಇತ್ತು. ಯಾವುದೇ ಅಂಗಡಿಗಳು ಸಹ ಬಂದ್‌ ಬೆಂಬಲಿಸಿ ಬೀಗ ಹಾಕಲಿಲ್ಲ.

ಅಶೋಕ ರಸ್ತೆ, ಟೌನ್‌ಹಾಲ್, ಕಾರ್ಟೆಕ್ಸ್ ಸೇರಿದಂತೆ ನಗರದ ಆಯ್ದ ಸ್ಥಳಗಳಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬಂದೋಬಸ್ತ್ ಕೈಗೊಂಡಿದ್ದರು.

ರಕ್ಷಣಾ ವೇದಿಕೆ ಪ್ರತಿಭಟನೆ: ನಗರದ ಟೌನ್‍ಹಾಲ್ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥಗೌಡ ನೇತೃತ್ವದಲ್ಲಿ ಜಮಾಯಿಸಿ ಮರಾಠಾ ಅಭಿವೃದ್ಧಿ ನಿಗಮ ರಚನೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಮಂಜುನಾಥಗೌಡ ಮಾತನಾಡಿ, ರಾಜ್ಯ ಸರ್ಕಾರ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿದೆ. ಮರಾಠಾ ಅಭಿವೃದ್ಧಿ ನಿಗಮ ರಚಿಸಿ ₹ 50 ಕೋಟಿ ಮೀಸಲಿಟ್ಟು ಕನ್ನಡಿಗರಿಗೆ ಅವಮಾನ ಮಾಡಿದೆ ಎಂದು ದೂರಿದರು. ವೋಟಿಗಾಗಿ ರಾಜಕಾರಣ ಮಾಡುತ್ತ ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಸುವ ಕೆಲಸ ಮಾಡಬಾರದು. ಕೂಡಲೇ ಮರಾಠಾ ಅಭಿವೃದ್ಧಿ ನಿಗಮವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.

ನಂತರ ಜಿಲ್ಲಾಧಿಕಾರಿ ಕಚೇರಿಗೆ ತಲುಪಿದ ಪ್ರತಿಭಟನಕಾರರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಯುವ ಘಟಕದ ಆನಂದ್, ಬಾಲರಾಜು, ಸುನೀತಾ ಮೂರ್ತಿ, ಕುಮಾರ್, ಜ್ಞಾನೇಶ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಜಯಕರ್ನಾಟಕ: ಕನ್ನಡಿಗರ ಸಾರ್ವಭೌಮತ್ವವನ್ನು ಕೆಣಕುವ ಮರಾಠಿಗರಿಗೆ ಸರ್ಕಾರ ನಿಗಮ ರಚಿಸಿ ಅನುದಾನ ನೀಡಿರುವುದು ಕನ್ನಡಿಗ ಮತ್ತು ಮರಾಠರ ನಡುವೆ ವೈಷಮ್ಯ ಉಂಟು ಮಾಡುವಂತಾಗಿದೆ. ಸರ್ಕಾರ ಕೂಡಲೇ ನಿಗಮ ರದ್ದುಗೊಳಿಸಬೇಕು ಎಂದು ಜಯಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಅರುಣ್‍ಕುಮಾರ್ ಒತ್ತಾಯಿಸಿದರು.

ಕೋಟೆ ಆಂಜನೇಯಸ್ವಾಮಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಮಹಾರಾಷ್ಟ್ರ ಗಡಿಯಲ್ಲಿ ಕನ್ನಡಿಗರಿಗೆ ಕಿರುಕುಳ ನೀಡುವ ಮರಾಠಿಗರ ಅಭಿವೃದ್ಧಿಗಾಗಿ ಸರ್ಕಾರ ನಿಗಮ ರಚಿಸಿ, ಅನುದಾನ ನೀಡಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರ ನೌಕರರಿಗೆ ಸಂಬಳ ನೀಡುತ್ತಿಲ್ಲ ಎಂಬ ಆರೋಪವಿದೆ. ಕೋವಿಡ್‍ನಿಂದಾಗಿ ಸರ್ಕಾರದ ಬೊಕ್ಕಸ ಬರಿದಾಗಿದೆ. ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಇಂತಹ ಸಂದರ್ಭದಲ್ಲಿಯೂ ನಿಗಮ ರಚಿಸುವ ಮೂಲಕ ವಿಶೇಷ ಅನುದಾನವನ್ನು ನೀಡುತ್ತ ಹೋದರೆ ಸಚಿವಾಲಯಗಳು ಕೆಲಸವಿಲ್ಲದೆ ಕುಳಿತುಕೊಳ್ಳಬೇಕಾದ ಸಂದರ್ಭ ಸೃಷ್ಟಿಯಾಗುತ್ತದೆ ಎಂದರು. 

ಸಂಘಟನೆ ಪ್ರಧಾನ ಕಾರ್ಯದರ್ಶಿ ಪ್ರತಾಪ್, ಸಂಘಟನಾ ಕಾರ್ಯದರ್ಶಿ ಸಂಜಯ್, ನಗರ ಘಟಕದ ಅಧ್ಯಕ್ಷ ರಮೇಶ್‍ಕುಮಾರ್, ತನ್ವೀರ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು