ಮಧುಗಿರಿ: ‘ಮಧುಗಿರಿಯಮನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಬದ್ಧ’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದ ಕಾರ್ಮಿಕ ಇಲಾಖೆ ಕಚೇರಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ 9ರಿಂದ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕಾರ್ಮಿಕರ ಮಕ್ಕಳಿಗೆ ಕಿಟ್ ವಿತರಿಸಿ ಮಾತನಾಡಿದರು.
ಜಿಲ್ಲಾಧಿಕಾರಿ ಕಚೇರಿ ಮತ್ತು ಎಸ್.ಪಿ. ಕಚೇರಿ ಹೊರತುಪಡಿಸಿ, ಮಧುಗಿರಿ ಜಿಲ್ಲೆಯಾಗಲು ಅಗತ್ಯವಿರುವ ಎಲ್ಲ ಕಚೇರಿಗಳೂ ತಾಲ್ಲೂಕಿನಲ್ಲಿವೆ. ಮಧುಗಿರಿ ಜಿಲ್ಲೆಯಾದರೆ ಈ ಭಾಗದ ಬರಪೀಡಿತ ಪ್ರದೇಶಗಳಾದ ಪಾವಗಡ, ಶಿರಾ, ಕೊರಟಗೆರೆ ತಾಲ್ಲೂಕು ವ್ಯಾಪ್ತಿಯ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಕಾರ್ಮಿಕರ ಮಕ್ಕಳು ಕಾರ್ಮಿಕರಾಗದೇ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಉತ್ತಮ ಅಧಿಕಾರಿಗಳಾಗಬೇಕು. ಮಕ್ಕಳಿಗ ಉತ್ತಮ ಶಿಕ್ಷಣ ಕೊಡಿಸಬೇಕು.
ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ರಾಜಣ್ಣ ಸಚಿವರಾದ ತಕ್ಷಣ ಕಾರ್ಮಿಕ ಇಲಾಖೆಗೆ ಸರ್ಕಾರಿ ಕಟ್ಟಡ ಒದಗಿಸಿದ್ದಾರೆ. ಕಾರ್ಮಿಕ ಇಲಾಖೆಯಲ್ಲಿ ₹90 ಕೋಟಿ ಅನುದಾನ ಖರ್ಚಾಗದೇ ಉಳಿದಿದೆ. ಸಹಕಾರ ಸಚಿವರು ಅನುದಾನ ಸದ್ಬಳಕೆ ಕಡೆ ಗಮನಹರಿಸಬೇಕು ಎಂದರು.
ಉಪವಿಭಾಗಾಧಿಕಾರಿ ರಿಷಿ ಆನಂದ್, ತಹಶೀಲ್ದಾರ್ ಸಿಬ್ಗತ್ ಉಲ್ಲಾ, ಕಾರ್ಮಿಕ ಅಧಿಕಾರಿ ತೇಜಾವತಿ, ಕಾರ್ಮಿಕ ನಿರೀಕ್ಷಕರಾದ ಅಬ್ದುಲ್ ರವೂಫ್, ಎಂ.ಎಲ್ ಶ್ರೀಕಾಂತ್, ಕಾರ್ಮಿಕ ಇಲಾಖೆಯ ರವಿಕುಮಾರ್, ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಮಹಮದ್ ಅಯೂಬ್, ಸದಸ್ಯ ಅಲೀಮ್, ಮಾಜಿ ಸದಸ್ಯ ಸಾದಿಕ್, ಮುಖಂಡರಾದ ಟಿ. ರಾಮಣ್ಣ, ಎಸ್‌ಬಿಟಿ ರಾಮು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.