ಮಂಗಳವಾರ, ಆಗಸ್ಟ್ 3, 2021
26 °C
ಗ್ರಾಹಕರಿಂದ ಬಾದಾಮಿ ಹಣ್ಣಿಗೆ ಬೇಡಿಕೆ ಹೆಚ್ಚು; ಸ್ಥಿರವಾದ ತರಕಾರಿ ಬೆಲೆ

ತುಮಕೂರು: ಮಾವು ದುಬಾರಿ; ಇಳಿದ ಕೋಳಿ ಬೆಲೆ

ವಿಠಲ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಮಾವಿನ ಹಣ್ಣಿನ ಸೀಜನ್ ಆರಂಭವಾಗಿದ್ದರೂ ಬೇಡಿಕೆಗೆ ತಕ್ಕಷ್ಟು ಹಣ್ಣು ಬಾರದೆ ಬೆಲೆ ಹೆಚ್ಚುತ್ತಲೇ ಸಾಗಿದೆ.

ವಾರಕ್ಕೊಮ್ಮೆ ಟೆಂಪೊದಲ್ಲಿ ಬರುತ್ತಿದ್ದ ಮಾವು ಇದೀಗ ಚಿಕ್ಕ ವ್ಯಾನ್‌ನಲ್ಲಿ ಬರುತ್ತಿದೆ. ಲಾಕ್‌ಡೌನ್‌ ಸಡಿಲಿಕೆ ಆಗಿರುವುದರಿಂದ ಮುಂಬೈ, ಪೂನಾ, ಇತರೆಡೆಗಳಿಂದಲೂ ಬೇಡಿಕೆ ಹೆಚ್ಚಿದ್ದು, ಸ್ಥಳೀಯವಾಗಿ ಆವಕ ಕಡಿಮೆಯಾಗಿದೆ. ಕಳೆದ ವಾರ ಕೆ.ಜಿ.ಗೆ ₹60– ₹70ಕ್ಕೆ ಸಿಗುತ್ತಿದ್ದ ಬಾದಾಮಿ ಹಣ್ಣಿನ ಬೆಲೆ ಈಗ ₹100 ಕೊಟ್ಟರೂ ಸಿಗುತ್ತಿಲ್ಲ.

ಮಲಗೋಬಾ, ಬೇನಿಷಾ, ಮಲ್ಲಿಕಾ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿದೆ. ಹಣ್ಣುಗಳ ಗಾತ್ರದ ಆಧಾರದಲ್ಲಿಯೂ ಬೆಲೆ ನಿಗದಿಯಾಗುತ್ತದೆ. ಈ ಬಾರಿ ಮಾವಿನ ಇಳುವರಿ ತಗ್ಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ. ಚೇಳೂರು ಮಾರುಕಟ್ಟೆಯಲ್ಲೂ ಬಾದಾಮಿ ಹಣ್ಣು ಸಿಗುತ್ತಿಲ್ಲ ಎನ್ನುತ್ತಾರೆ ಎಸ್‌.ಎಸ್‌.ಪುರಂ ಹಾಪ್‌ಕಾಮ್ಸ್‌ ಸೇಲ್ಸ್‌ಮ್ಯಾನ್‌ ಟಿ.ಆರ್‌.ನಾಗರಾಜು.

ಲಾಕ್‌ಡೌನ್‌ ಸಮಯದಲ್ಲಿ ಹಾಪ್‌ಕಾಮ್ಸ್‌ನಲ್ಲಿ ವ್ಯಾಪಾರ ಹೆಚ್ಚಿತ್ತು. ಆ ಸಮಯಕ್ಕೆ ಹೋಲಿಸಿದರೆ ಈಗ ವ್ಯಾಪಾರ ಕಡಿಮೆ. ಲಾಕ್‌ಡೌನ್‌ ಸಮಯದಲ್ಲಿ ಬೇರೆ ವ್ಯವಹಾರ ಮಾಡುತ್ತಿದ್ದವರು ಇದೀಗ ತರಕಾರಿ, ಹಣ್ಣುಗಳ ವ್ಯಾಪಾರಕ್ಕೆ ಮುಂದಾಗಿದ್ದಾರೆ. ಈಗ ತಳ್ಳುಗಾಡಿಯವರು, ಬುಟ್ಟಿಯಲ್ಲಿ ವ್ಯಾಪಾರ ಮಾಡುವವರೂ ಹೆಚ್ಚಾಗಿದ್ದಾರೆ.

ತಗ್ಗಿದ ಕೋಳಿ ಬೆಲೆ

ಕಳೆದ ವಾರಕ್ಕೆ ಹೋಲಿಸಿದರೆ ಕೋಳಿ ಮಾಂಸದ ಬೆಲೆ ಕಡಿಮೆಯಾಗಿರುವುದು ಮಾಂಸ ಪ್ರಿಯರಿಗೆ ಖುಷಿ ನೀಡಿದೆ. ಕೆ.ಜಿ ಬೆಲೆ ₹240–₹250ರಿಂದ ₹200ಕ್ಕೆ ಇಳಿದಿದೆ. ಎಳೆಯ ಕುರಿ ಮಟನ್‌ ಕೆ.ಜಿ ₹ 600 ಹಾಗೂ ಸಾಧಾರಣ ಮಟನ್‌ಗೆ ₹ 500 ಇದೆ ಎನ್ನುತ್ತಾರೆ ನಿಮ್ರಾ ಚಿಕನ್‌, ಮಟನ್‌ ಸ್ಟಾಲ್‌ನ ಶಾಹಿದ್‌.

ತರಕಾರಿ ಬೆಲೆ ಸ್ಥಿರ

ಲಾಕ್‍ಡೌನ್ ಸಮಯದಲ್ಲಿ ತರಕಾರಿ ಬೆಲೆ ನೆಲಕಚ್ಚಿತ್ತು. ಈಗ ಲಾಕ್‍ಡೌನ್ ಸಡಿಲಗೊಂಡರೂ ಮಾರುಕಟ್ಟೆ ಚಟುವಟಿಕೆ ಮಂದಗತಿಯಲ್ಲಿ ಸಾಗಿದೆ. ಹೆಚ್ಚು ಮಳೆಯಾದರೆ ತರಕಾರಿ ದರದಲ್ಲಿ ಏರಿಕೆಯಾಗಬಹುದು. ಹೋಟೆಲ್‍ ತೆರೆಯಲು ಅನುಮತಿ ನೀಡಿರುವುದರಿಂದ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಬೆಲೆಯೂ ಏರಲಿದೆ ಎನ್ನುವುದು ತರಕಾರಿ ವ್ಯಾಪಾರಿ ಗಿರೀಶ್‌ ಅಭಿಪ್ರಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು