ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ವಿತರಣೆ: ರಾಜಕಾರಣಕ್ಕೆ ಬಳಕೆ

ಜಿಲ್ಲೆಯ ಕೆಲವು ಕಡೆಗಳಲ್ಲಿ ಹಂಚಿಕೆಯಲ್ಲಿ ಲೋಪ; ಬುಗಿಲೇಳುತ್ತಿದೆ ಅಸಮಾಧಾನ
Last Updated 6 ಏಪ್ರಿಲ್ 2020, 16:35 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ಹಾಲು ಒಕ್ಕೂಟ (ತುಮುಲ್) ಬಡವರು, ಕೊಳೆಗೇರಿ ನಿವಾಸಿಗಳಿಗೆ ನಿತ್ಯ 95 ಸಾವಿರ ಲೀಟರ್‌ ಹಾಲನ್ನು ಉಚಿತವಾಗಿ ತಲುಪಿಸುತ್ತಿದೆ.

ಹಾಲಿಗೆ ಬೇಡಿಕೆ ಕುಸಿದಿರುವ ಈ ದಿನಗಳಲ್ಲಿ ರೈತರಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಸಮರ್ಪಕ ವಿತರಣೆಗಾಗಿ ಪ್ರತಿ ವಾರ್ಡ್‌ಗೂ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತುಮಕೂರು ನಗರದಲ್ಲಿಯೇ 27 ಮಂದಿ ನೋಡಲ್ ಅಧಿಕಾರಿಗಳು ಇದ್ದಾರೆ.

ಆದರೆ ವಿತರಣೆಯ ವ್ಯವಸ್ಥೆ ನೋಡಿದರೆ ರಾಜಕೀಯಕ್ಕೂ ಇದು ವೇದಿಕೆ ಆಗುತ್ತಿದೆಯೇ ಎನಿಸುತ್ತದೆ. ‘ಇದು ನಮ್ಮ ಸಾಧನೆ’ ಎನ್ನುವ ಕ್ರೆಡಿಟ್‌ಗಾಗಿ ಸ್ಥಳೀಯ ಮುಖಂಡರ ನಡುವೆ ಪೈಪೋಟಿಯೂ ಉಂಟಾಗುತ್ತಿದೆ.

ಜಿಲ್ಲೆಯಲ್ಲಿ ಸರ್ಕಾರ ಘೋಷಿಸಿರುವ 109, ಅಘೋಷಿತ 77 ಕೊಳೆಗೇರಿಗಳು ಇವೆ. ನಗರದಲ್ಲಿಯೇ 26 ಘೋಷಿತ, 16 ಅಘೋಷಿತ ಕೊಳೆಗೇರಿಗಳಿವೆ. ಈ 109 ಕೊಳೆಗೇರಿಗಳಲ್ಲಿ 22,769 ಮನೆ, ಗುಡಿಸಲುಗಳು ಇವೆ.

ಇವಿಷ್ಟೇ ಅಲ್ಲದೆ ಬಡವರು ವಾಸಿಸುತ್ತಿರುವ ‍ಪ್ರದೇಶಗಳಿಗೂ ಹಾಲು ವಿತರಿಸಲಾಗುತ್ತಿದೆ. ಪ್ರತಿ ಫಲಾನುಭವಿಗೆ 1 ಲೀಟರ್ ಹಾಲು ವಿತರಿಸಬೇಕು. ಫಲಾನುಭವಿಗಳನ್ನು ಸ್ಥಳೀಯಾಡಳಿತ ಗುರುತಿಸಲಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಸದಸ್ಯರೇ ಈ ಹಾಲು ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಹುಳಿಯಾರು ಸೇರಿದಂತೆ ಕೆಲವು ಪಟ್ಟಣಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ನೌಕರರು, ಸ್ವಯಂ ಸೇವಕರು ವಿತರಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎನ್ನುವುದು ನಾಗರಿಕರ ಅಭಿಮತ.

ಹಾಲು ಹಂಚಿಕೆಯಲ್ಲಿ ಬಹುತೇಕ ಕಡೆ ರಾಜಕೀಯ ನುಸುಳುತ್ತಿರುವುದು ಬಹಿರಂಗ ಸತ್ಯ. ಆಯಾ ವಾರ್ಡ್‌ಗಳ ಕಾರ್ಪೊರೇಟರ್‌ಗಳು ಈ ಹಂಚಿಕೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದು ‘ನಮ್ಮ ಸರ್ಕಾರದ ಸಾಧನೆ’ ಎನ್ನುವ ಪ್ರತಿಬಿಂಬಿಸುತ್ತಿದ್ದಾರೆ. ಹಾಲು ವಿತರಣೆ ಭವಿಷ್ಯದ ರಾಜಕೀಯ ನೆಲೆ ಗಟ್ಟಿಗೊಳಿಸಿಕೊಳ್ಳುವ ಪ್ರಹಸನವಾಗಿಯೂ ಕೆಲವು ಕಡೆ ಬಳಕೆ ಆಗುತ್ತಿದೆ.

ಮತ್ತೊಂದಿಷ್ಟು ಭಾಗಗಳಲ್ಲಿ ‘ಪ್ರಭಾವಿಗಳು’ ಮತ್ತು ಭವಿಷ್ಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರಾಗಿ ಆಯ್ಕೆಯಾಗುವ ಆಕಾಂಕ್ಷೆ ಇಟ್ಟುಕೊಂಡವರು ಹಂಚಿಕೆ ಜವಾಬ್ದಾರಿ ತೆಗೆದುಕೊಂಡಿದ್ದಾರೆ.

‘ನಗರದ ಕೆಲವು ಕಡೆಗಳಲ್ಲಿ ಈ ಬೆಳವಣಿಗೆ ನಡೆಯುತ್ತಿದೆ. ಪಾಲಿಕೆ ಸದಸ್ಯರು ತಮಗೆ ಬೇಕಾದವರಿಗೆ ಹಾಲು ಹಂಚುತ್ತಿದ್ದಾರೆ’ ಎಂದು ಮಾಜಿ ಉಪಮೇಯರ್ ಒಬ್ಬರು ದೂರಿದರು.

‘ಒಂದು ರಸ್ತೆಯಲ್ಲಿ 40 ಮನೆಗಳು ಇದ್ದರೆ, ಒಂದು ಕಡೆ 40 ಲೀಟರ್ ಹಾಲು ಇಟ್ಟು ತೆಗೆದುಕೊಂಡು ಹೋಗಿ ಎಂದು ಹೇಳಬಹುದು. ಆದರೆ ಇಲ್ಲಿ ನಿಸ್ವಾರ್ಥ ಸೇವೆಗಿಂತ ಸ್ವಾರ್ಥವೇ ಹೆಚ್ಚಾಗಿದೆ. ಕೆಲವರು ಈ ಹಾಲು ವಿತರಣೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಭಾವಚಿತ್ರಗಳನ್ನು ಪ್ರಕಟಿಸುತ್ತಿದ್ದಾರೆ’ ಎಂದರು.

ಗುಬ್ಬಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯೆಯ ಪತಿಯೊಬ್ಬರು ಹಂಚಲು ಬಹಳಷ್ಟು ಹಾಲು ತೆಗೆದುಕೊಂಡು ಹೋದರೂ ವಿತರಿಸಿದ್ದು ಮಾತ್ರ ಕಡಿಮೆ. ಇದು ಅಲ್ಲಿನ ನಿವಾಸಿಗಳ ಆಕ್ರೋಶಕ್ಕೂ ಕಾರಣವಾಗಿತ್ತು.

ಕೊಳೆಗೇರಿಗಳಲ್ಲಿ ಬಡವರಿಗೆ ಹಾಲು ವಿತರಣೆಯಾಗುತ್ತಿಲ್ಲ. ಶಾಸಕರು ಕಾಂಗ್ರೆಸ್ ಪಕ್ಷದವರಾಗಿದ್ದು, ತುಮುಲ್ ನಿರ್ದೇಶಕ ಬಿಜೆಪಿಯವರಾದ ಕಾರಣ ಹಾಲು ವಿತರಣೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರು ಇರುವಸ್ಥಳಗಳಿಗೆ ಹಾಲಿನ ಪ್ಯಾಕೆಟ್‌ಗಳನ್ನು ಸರಬರಾಜು ಮಾಡಿಸುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡರು ಕುಣಿಗಲ್ ತಹಶೀಲ್ದಾರ್‌ಗೆ ದೂರು ನೀಡಿದ್ದಾರೆ.

***

ಮತ ಬ್ಯಾಂಕ್ ಗಟ್ಟಿ?

‘1975–76ನೇ ಸಾಲಿನಲ್ಲಿ ತುಮಕೂರಿನ ಎನ್‌.ಆರ್.ಕಾಲೊನಿಯನ್ನು ಸರ್ಕಾರವು ಕೊಳೆಗೇರಿ ಎಂದು ಅಧಿಸೂಚನೆ ಹೊರಡಿಸಿತು. ಆಗ 687 ಕುಟುಂಬಗಳು ಇದ್ದವು. ಆ ಪ್ರಕಾರ 687 ಲೀಟರ್ ಹಾಲು ನಿಗದಿಯಾಗಿದೆ. ಆದರೆ ಈಗ ಒಂದು ಸಾವಿರಕ್ಕೂ ಹೆಚ್ಚು ಕುಟುಂಬಗಳಿವೆ’ ಎಂದು ಮಾಹಿತಿ ನೀಡಿದವರು ಜಿಲ್ಲಾ ಕೊಳೆಗೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ.

ಕುಟುಂಬಗಳ ಸಂಖ್ಯೆ ಹೆಚ್ಚಿರುವ ಕಾರಣ ಅರ್ಧ ಲೀಟರ್‌ನಂತೆ 1,050 ಪ್ಯಾಕೇಟ್ ಹಂಚಿಕೆ ಮಾಡಲಾಗುತ್ತಿದೆ. ಉಳಿದ ಸುಮಾರು 250 ಪ್ಯಾಕೇಟ್‌ಗಳನ್ನು ಕಾರ್ಪೊರೇಟರ್‌ಗಳು ತಮ್ಮ ಮತಬ್ಯಾಂಕ್ ಎನಿಸಿಕೊಂಡವರಿಗೆ ಹಂಚುತ್ತಿದ್ದಾರೆ ಎಂದು ಮಾಹಿತಿ ನೀಡುವರು.

ಈ ಕೆಲಸವನ್ನು ಎಲ್ಲ ಪಕ್ಷದವರೂ ಮಾಡುತ್ತಿದ್ದಾರೆ. ನೋಡಲ್ ಅಧಿಕಾರಿಗಳು ನಾಮಕಾವಸ್ತೆ ಎನ್ನುವಂತೆ ಆಗಿದೆ. ಮರಳೂರು ದಿಣ್ಣೆಯ ಕೊಳೆಗೇರಿಗೆ 1,512 ಲೀಟರ್ ಹಾಲು ನಿಗದಿಯಾಗಿದೆ. 2,500 ಮನೆಗಳಿದ್ದು, ಅರ್ಧ ಲೀಟರ್‌ನಂತೆ ಹಂಚಿಕೆ ಮಾಡಲಾಗುತ್ತಿದೆ. ಉಳಿದ ಹಾಲನ್ನು ಪಾಲಿಕೆ ಸದಸ್ಯರು ತಮ್ಮ ಬೆಂಬಲಿಗರು ಇಲ್ಲವೆ ಮತದಾರರಿಗೆ ಹಂಚುತ್ತಿದ್ದಾರೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT