ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮುಲ್: ಹಾಲು ಖರೀದಿ ದರ ₹1.50 ಕಡಿತ

ಪ್ರತಿದಿನ ಮಾರಾಟವಾಗದೆ ಉಳಿಯುತ್ತಿದೆ 2.50 ಲಕ್ಷ ಲೀಟರ್‌ ಹಾಲು
Last Updated 3 ಜೂನ್ 2020, 11:01 IST
ಅಕ್ಷರ ಗಾತ್ರ

ತುಮಕೂರು: ರೈತರಿಂದ ಖರೀದಿಸುವ ಹಾಲಿನ ದರವನ್ನು ತುಮುಲ್ ಲೀಟರ್‌ಗೆ ₹1.50 ಕಡಿತಗೊಳಿದ್ದು, ಇದು ಜೂನ್ 1ರಿಂದಲೇ ಜಾರಿಗೆ ಬಂದಿದೆ. ಈ ಹಿಂದೆ ರೈತರಿಗೆ ಪ್ರತಿ ಲೀಟರ್‌ ಹಾಲಿಗೆ ₹28.50 ನೀಡಲಾಗುತಿತ್ತು. ಇದೀಗ ₹1.50 ಕಡಿತಗೊಳಿಸಿ ₹27ಕ್ಕೆ ಖರೀದಿಸಲಾಗುತ್ತಿದೆ.

ತುಮುಲ್‌ನಲ್ಲಿ ಪ್ರತಿದಿನ 2.50 ಲಕ್ಷ ಲೀಟರ್‌ ಹಾಲು ಮಾರಾಟವಾಗದೆ ಉಳಿಯುತ್ತಿದೆ. ಕಳೆದ ಮೂರು ತಿಂಗಳಿನಿಂದಲೂ ಹಾಲು ಉಳಿಕೆಯಾಗುತ್ತಿದ್ದರೂ ರೈತರ ಹಿತದೃಷ್ಟಿಯಿಂದ ಹಾಲು ಖರೀದಿ ನಿಲ್ಲಿಸಿರಲಿಲ್ಲ. ಖರೀದಿ ದರವನ್ನೂ ಕಡಿತಗೊಳಿಸಿರಲಿಲ್ಲ. ಉಳಿದ ಹಾಲನ್ನು ಫೌಡರ್‌, ಬೆಣ್ಣೆ, ಚಾಕಲೇಟ್‌ಮತ್ತಿತರೆ ಉತ್ಪನ್ನಗಳ ತಯಾರಿಕೆಗೆ ಬಳಸಿಕೊಳ್ಳಲಾಗುತಿತ್ತು.

ಆದರೆ, ಇದೀಗ ಫೌಡರ್ ತಯಾರಿಕಾ ಘಟಕದಿಂದಲೂ ಹಾಲಿಗೆ ಬೇಡಿಕೆ ಬರುತ್ತಿಲ್ಲ. 750 ಮೆಟ್ರಿಕ್ ಟನ್ ಹಾಲಿನ ಫೌಡರ್, 350 ಟನ್‌ ಬೆಣ್ಣೆ ಮಾರಾಟವಾಗದೆ ಉಳಿದಿದೆ. ಏಪ್ರಿಲ್‌, ಮೇ ತಿಂಗಳಲ್ಲಿ ತುಮುಲ್‌ಗೆ ₹5 ಕೋಟಿಯಷ್ಟು ನಷ್ಟವಾಗಿದೆ. ಹಾಗಾಗಿ ಖರೀದಿ ದರವನ್ನು ಕಡಿತಗೊಳಿಸುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ತುಮುಲ್‌ಗೆ ಪ್ರತಿದಿನ 7.30 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಈ ಹಿಂದೆ ಮುಂಬೈಗೆ 2 ಲಕ್ಷ ಲೀಟರ್ ಸರಬರಾಜು ಆಗುತ್ತಿತ್ತು. ಆದರೆ ಇದೀಗ ಮುಂಬೈಗೆ ಕೇವಲ 73 ಸಾವಿರ ಲೀಟರ್‌ ಸರಬರಾಜು ಆಗುತ್ತಿದೆ. ಬೆಂಗಳೂರಿಗೆ 1.40 ಲಕ್ಷ ಲೀಟರ್‌, ತುಮಕೂರು ಜಿಲ್ಲೆಗೆ 98 ಸಾವಿರ ಲೀಟರ್‌ ಸರಬರಾಜು ಆಗುತ್ತಿದೆ.

ಇನ್ನೂ ಶಾಲೆಗಳಿಗೆಕ್ಷೀರ ಭಾಗ್ಯ ಯೋಜನೆಯಡಿ 100 ಮೆಟ್ರಿಕ್‌ ಟನ್‌ ಹಾಲಿನ ಫೌಡರ್ ನೀಡಲಾಗುತಿತ್ತು. ಆದರೆ ಶಾಲೆಗಳು ಆರಂಭವಾಗಿಲ್ಲ. ಜೂನ್ 8ರಿಂದ ಟೀ ಸ್ಟಾಲ್‌, ಹೋಟೆಲ್‌, ಮಾಲ್, ದೇವಸ್ಥಾನಗಳಿಗೆ ಅವಕಾಶ ನೀಡುವುದರಿಂದ ಹಾಲಿನ ಉಳಿಕೆ ಪ್ರಮಾಣ ತಗ್ಗಬಹುದು ಎಂದು ವ್ಯವಸ್ಥಾಪಕ ನಿರ್ದೇಶಕ ಡಾ.ಸುಬ್ರಾಯ ಭಟ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT