ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಅಲ್ಲಲ್ಲಿ ಸಾಧಾರಣ ಮಳೆ

Published 9 ನವೆಂಬರ್ 2023, 4:51 IST
Last Updated 9 ನವೆಂಬರ್ 2023, 4:51 IST
ಅಕ್ಷರ ಗಾತ್ರ

ತುಮಕೂರು: ನಗರ ಸೇರಿದಂತೆ ಜಿಲ್ಲೆಯಲ್ಲಿ ಬುಧವಾರ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಿದ್ದು, ತೋವಿನಕೆರೆ, ಚೇಳೂರು ಸುತ್ತಮುತ್ತಲಿನ ಕೆಲವು ಭಾಗಗಳಲ್ಲಿ ಉತ್ತಮ ಮಳೆ ಬಿದ್ದಿದೆ.

ನಗರದಲ್ಲಿ ಬೆಳಗ್ಗೆಯಿಂದ ಬಿಸಿಲು ಜೋರಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಮೋಡ ಮುಸುಕಿದ ವಾತಾವರಣ ಕಂಡುಬಂತು. ಮಧ್ಯಾಹ್ನ 1.45 ಗಂಟೆ ವೇಳೆಗೆ ನಗರದಲ್ಲಿ ಕೆಲ ಸಮಯ ಬಿರುಸಾಗಿ ಸುರಿಯಿತು. ನಂತರ ತುಂತುರು ಹನಿಗಳು ಉದುರಿದವು. 3 ಗಂಟೆ ನಂತರ ಮಳೆ ಮಾಯವಾಯಿತು. ಮೋಡ ಮುಸುಕಿದ್ದರೂ, ಸಂಜೆ ವೇಳೆಗೆ ಮಳೆ ವಾತಾವರಣ ಇದ್ದರೂ ಕೈಕೊಟ್ಟಿತು.

ತೋವಿನಕೆರೆ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು, ಸುಮಾರು ಅರ್ಧ ಗಂಟೆ ಕಾಲ ರಭಸದಿಂದ ಸುರಿಯಿತು. ಖಾಸಗಿ ಮಳೆ ಮಾಪನ ಕೇಂದ್ರದಲ್ಲಿ 46 ಮಿ.ಮೀ ದಾಖಲಾಗಿದೆ. ಗುಬ್ಬಿ ತಾಲ್ಲೂಕಿನ ಚೇಳೂರು, ಹೊಸಕೆರೆ ಪ್ರದೇಶದಲ್ಲಿ ವರುಣ ಕೃಪೆ ತೋರಿದ್ದಾನೆ. ತುರುವೇಕೆರೆ ತಾಲ್ಲೂಕಿನ ಬಾಣಸಂದ್ರ ವ್ಯಾಪ್ತಿಯಲ್ಲಿ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಶಿರಾ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಪಾವಗಡ ಸುತ್ತಮುತ್ತ ತುಂತುರು ಮಳೆಯಾಗಿದೆ.

ನಗರ ಸೇರಿದಂತೆ ಕೆಲವು ಕಡೆಗಳಲ್ಲಿ ಸೋಮವಾರ ರಾತ್ರಿ ಉತ್ತಮ ಮಳೆಯಾಗಿತ್ತು. ಮಂಗಳವಾರ ಕೆಲವೆಡೆ ಭೂಮಿ ತೇವ ಮಾಡಿತ್ತು. ಬುಧವಾರವೂ ಹೇಳಿಕೊಳ್ಳುವಂತಹ ಮಳೆ ಬೀಳಲಿಲ್ಲ. ಪೂರ್ವ ಮುಂಗಾರು, ಮುಂಗಾರು ಸಂಪೂರ್ಣ ಕೈಕೊಟ್ಟಿದ್ದು, ಇಡೀ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಹಿಂಗಾರು ಮಳೆ ಬಗ್ಗೆ ಜನರು ಸಾಕಷ್ಟು ಆಶಾ ಭಾವನೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಬಿರುಸಿನ ಮಳೆಯಾಗಲಿದ್ದು, ಹವಾಮಾನ ಇಲಾಖೆಯು ‘ಯೆಲ್ಲೊ ಅಲರ್ಟ್’ ಘೋಷಣೆ ಮಾಡಿತ್ತು. ‘ಯೆಲ್ಲೊ, ರೆಡ್ ಅಲರ್ಟ್’ ಘೋಷಣೆಯಾದರೂ ವರುಣನ ಕೃಪೆ ಮಾತ್ರ ಕಾಣುತ್ತಿಲ್ಲ. ಹಿಂಗಾರು ಮಳೆಗಾಗಿ ಮುಗಿಲಿನತ್ತ ಜನರು ಮುಖ ಮಾಡಿದ್ದಾರೆ.

ಹುಲಿಯೂರುದುರ್ಗದಲ್ಲಿ 24 ಮಿ.ಮೀ ಮಳೆ

ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸಾಧಾರಣ ಮಳೆಯಾಗುತ್ತಿದ್ದು ವಿವಿಧೆಡೆ ಕಳೆದ 24 ಗಂಟೆಗಳಲ್ಲಿ (ಬುಧವಾರ ಬೆಳಿಗ್ಗೆ ವರೆಗೆ) ಬಿದ್ದ ಮಳೆ ವಿವರ (ಮಿ.ಮೀ). ತುಮಕೂರು ತಾಲ್ಲೂಕಿನ ಊರ್ಡಿಗೆರೆ 5 ಮಿ.ಮೀ ಹಿರೇಹಳ್ಳಿ 4 ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ 5 ಕಡಬ 3 ಕುಣಿಗಲ್ 2.8 ಹುಲಿಯೂರುದುರ್ಗ 24 ಕೆ.ಎಚ್‌.ಹಳ್ಳಿ 17 ಮಾರ್ಕೋನಹಳ್ಳಿ 7 ತುರುವೇಕೆರೆ 5 ಮಾಯಸಂದ್ರ 15 ದಬ್ಬೇಘಟ್ಟ 13.9 ಕೊರಟಗೆರೆ ತಾಲ್ಲೂಕಿನ ಕೋಳಾಲ 3 ಮಿ.ಮೀ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT