ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ಸಿಲ್ಲ; ಊರಿಗೆ ಹೇಗೆ ಹೋಗಲಿ?

ಕುಟುಂಬದವರ ಜತೆ ಹಬ್ಬ ಆಚರಿಸಲಾಗುತ್ತಿಲ್ಲ, ಏನು ಮಾಡಲಿ?
Last Updated 11 ಏಪ್ರಿಲ್ 2021, 5:17 IST
ಅಕ್ಷರ ಗಾತ್ರ

ತುಮಕೂರು: ಯುಗಾದಿ ಹಬ್ಬದ ಸಮಯದಲ್ಲೇ ಸಾರಿಗೆ ಸಿಬ್ಬಂದಿ ಮುಷ್ಕರ ನಡೆಸುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನೌಕರರು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಬೇರೆ ಸಮಯದಲ್ಲಿ ಪ್ರತಿಭಟನೆ, ಮುಷ್ಕರ ಮಾಡಲಿ. ಆದರೆ ಹಬ್ಬದ ಸಮಯದಲ್ಲಿ ಈ ರೀತಿ ಮಾಡಿದರೆ ನಾವು ಊರಿಗೆ ಹೋಗುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. ವರ್ಷಕ್ಕೊಮ್ಮೆ ಬರುವ ಯುಗಾದಿ ಹಬ್ಬ ಆಚರಣೆ
ಮಾಡದಂತೆ ಮಾಡಿದ್ದಾರೆ
ಎನ್ನುತ್ತಿದ್ದಾರೆ.

ಜಿಲ್ಲೆಯ ವ್ಯಾಪ್ತಿಯಲ್ಲಿ ಸಂಚರಿಸಲು ಹೆಚ್ಚಿನ ಸಮಸ್ಯೆ ಆಗಿಲ್ಲ. ಖಾಸಗಿ ಬಸ್‌ಗಳು, ಮ್ಯಾಕ್ಸಿಕ್ಯಾಬ್‌ಗಳು ಜಿಲ್ಲೆಯ ಪ್ರಮುಖ ಸ್ಥಳಗಳಿಗೆ ತೆರಳುತ್ತಿವೆ. ಆದರೆ ದೂರದ ಪ್ರದೇಶಗಳು, ಹೊರ ಜಿಲ್ಲೆಗಳಿಗೆ ಬಸ್ ಸಂಚಾರ ಇಲ್ಲವಾಗಿದ್ದು, ಪ್ರಯಾಣಿಕರು ಹೈರಾಣಾಗಿದ್ದಾರೆ. ಮುಷ್ಕರ ಶನಿವಾರಕ್ಕೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರು, ತುರ್ತಾಗಿ ದೂರದ ಊರಿಗೆ ಹೋಗಬೇಕಾದವರು, ಕಾರ್ಯನಿಮಿತ್ತ ತೆರಳಬೇಕಾದವರಿಗೆ ದಿಕ್ಕು ತೋಚದಂತಾಗಿದೆ.

ಸಕಲೇಶಪುರಕ್ಕೆ ತೆರಳಲು ಬಸ್‌ಗಾಗಿ ನಿಲ್ದಾಣದಲ್ಲಿ ಸಾಕಷ್ಟು ಸಮಯದಿಂದ ಕಾದು ಕುಳಿತಿದ್ದ ದಿಲೀಪ್ ಎಂಬುವರ ಸಹನೆ ಮೀರಿತ್ತು. ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಸಾಲು ಸಾಲು ರಜೆಯಿಂದಾಗಿ ಊರಿಗೆ ತೆರಳಲು ಲೆಗೇಜ್ ಹೊತ್ತುಕೊಂಡು ಬಂದಿದ್ದರು. ‘ಮಂಗಳವಾರ ಯುಗಾದಿ ಹಬ್ಬ. ಬುಧವಾರ ರಜೆ ಇದೆ. ಸೋಮವಾರ ರಜೆ ಹಾಕಿಕೊಂಡಿದ್ದೇನೆ. ಊರಿಗೆ ಹಬ್ಬಕ್ಕೆ ಹೋಗಬೇಕು. ಇಲ್ಲಿ ನೋಡಿದರೆ ಬಸ್ ಇಲ್ಲ. ಊರಿಗೆ ಹೇಗೆ ಹೋಗಲಿ, ರಜೆ ಸಮಯದಲ್ಲಿ ಇಲ್ಲಿದ್ದುಕೊಂಡು ಏನು ಮಾಡಲಿ. ಮನೆಯವರ ಜತೆ ಹಬ್ಬ ಆಚರಿಸಬಾರದೆ?’ ಎಂದು ಸಿಟ್ಟು ವ್ಯಕ್ತಪಡಿಸಿದರು.

‘ಬಳ್ಳಾರಿಯಲ್ಲಿ ನನ್ನ ಮಗಳು ಇದ್ದಾಳೆ. ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅವಳನ್ನು ನೋಡಿಕೊಳ್ಳಲು ತುರ್ತಾಗಿ ಹೋಗಬೇಕಿತ್ತು. ಯಾವುದಾದರೂ ಬಸ್ ಸಿಗಬಹುದು ಎಂದು ಇಲ್ಲಿಗೆ ಬಂದು ಮೂರು ಗಂಟೆ ಕಾಲ ಕಾದಿದ್ದೇನೆ. ಯಾವ ಬಸ್ಸೂ ಇಲ್ಲ. ಮನೆಗೆ ವಾಪಸ್ ಹೋಗುತ್ತಿದ್ದೇನೆ. ನಾಳೆ ಮತ್ತೆ ನಿಲ್ದಾಣಕ್ಕೆ ಬರುತ್ತೇನೆ. ಬಸ್ ಸಿಕ್ಕರೆ ಹೋಗುತ್ತೇನೆ’ ಎಂದು ಮನೆಯತ್ತ ಹೊರಟಿದ್ದ ನಾಗರತ್ನಮ್ಮ ನಿಟ್ಟುಸಿರು ಬಿಟ್ಟರು.

ಇದು ಒಬ್ಬಿಬ್ಬರ ಸಮಸ್ಯೆಯಲ್ಲ. ಬಸ್ ಇಲ್ಲದೆ ಹಲವರು ಇಂತಹುದೇ ಹತ್ತಾರು ಸಮಸ್ಯೆಗಳಿಗೆ ಸಿಲುಕಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ಕಾರಣ, ಸಮಸ್ಯೆ ಇರುತ್ತದೆ. ಬೇಗ ಸಮಸ್ಯೆ ಇತ್ಯರ್ಥಪಡಿಸಿ ಯುಗಾದಿ ಹಬ್ಬಕ್ಕೆ ಮುಂಚೆ ಬಸ್ ಸಂಚಾರ ಆರಂಭಿಸಬೇಕು ಎಂದು ಮನೋಜ್ ಕುಮಾರ್ ಒತ್ತಾಯಿಸಿದರು.

ಹೆಚ್ಚುತ್ತಿದೆ ನಷ್ಟ: ಜಿಲ್ಲೆಯಲ್ಲಿ ಪ್ರತಿ ದಿನ 580 ಬಸ್‌ಗಳು ಸಂಚರಿಸಬೇಕಿದ್ದು, ಕೆಲವೇ ಕೆಲವು ಬಸ್‌ಗಳು ಪ್ರಯಾಣಿಸಿವೆ. ಇದರಿಂದಾಗಿ ಪ್ರತಿ ದಿನವೂ ಸರಾಸರಿ ₹60 ಲಕ್ಷ ನಷ್ಟವಾಗುತ್ತಿದೆ. ಕಳೆದ ನಾಲ್ಕು ದಿನಗಳಿಂದ ಮುಷ್ಕರ ಮುಂದುವರಿದಿದ್ದು, ಸುಮಾರು ₹2.40 ಕೋಟಿ ನಷ್ಟ ಸಂಭವಿಸಿದೆ ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT