ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿ ಧಾನ್ಯ ಬಿತ್ತನೆಯೇ ಆಗಿಲ್ಲ

Last Updated 13 ಸೆಪ್ಟೆಂಬರ್ 2021, 4:18 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯು ಸಿರಿ ಧಾನ್ಯ ಬೆಳೆಗೆ ಪ್ರಸಿದ್ಧಿಯಾಗಿದ್ದು, ಬೇಡಿಕೆ ಹೆಚ್ಚಿದ್ದರೂ ಈ ವರ್ಷ ಬಿತ್ತನೆಯಿಂದ ರೈತರು ಹಿಂದೆ ಸರಿದಿದ್ದಾರೆ. ಈ ಸಲ ಸಿರಿ ಧಾನ್ಯದ ತೀವ್ರ ಕೊರತೆ ಎದುರಾಗಲಿದೆ.

ಸಿರಿ ಧಾನ್ಯ ಬೆಳೆಯುವ ಜಿಲ್ಲೆಗಳಲ್ಲಿ ತುಮಕೂರು ಜಿಲ್ಲೆ ಸಹ ಮುಂಚೂಣಿಯಲ್ಲಿ ಇತ್ತು. ಆಧುನಿಕ ಜಗತ್ತಿನಮನಸ್ಥಿತಿಗೆ ಒಗ್ಗಿಕೊಂಡ ಜನರು ಸಿರಿ ಧಾನ್ಯ ಬಳಕೆಯಿಂದ ಹಿಂದೆ ಸರಿದ ಪರಿಣಾಮವಾಗಿಬೆಳೆಯುವುದು ಕಡಿಮೆಯಾಗಿತ್ತು. ಮಧುಮೇಹ, ರಕ್ತದ ಒತ್ತಡ ಇತರ ಕಾಯಿಲೆಗಳಿಗೆ ಸಿಲುಕಿದ ಜನರು ಮತ್ತೆ ಸಿರಿ ಧಾನ್ಯ ಸೇವನೆಯತ್ತ ಮುಖಮಾಡಿದ್ದಾರೆ. ಆರೋಗ್ಯ ದೃಷ್ಟಿಯಿಂದ ಬೆಲೆ ಹೆಚ್ಚಿದ್ದರೂ ಕೊಂಡುಕೊಂಡು ಊಟ ಮಾಡುತ್ತಿದ್ದಾರೆ.

ಜನರಿಂದ ಬೇಡಿಕೆ ಹೆಚ್ಚುತ್ತಿದ್ದಂತೆ ರೈತರನ್ನು ಪ್ರೋತ್ಸಾಹಿಸಿ ಬೆಳೆಯುವ ಪ್ರದೇಶ ಹಾಗೂ ಉತ್ಪಾದನೆ ಹೆಚ್ಚಳ ಮಾಡುವ ಸಲುವಾಗಿ ರಾಜ್ಯ ಸರ್ಕಾರ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ‘ರೈತ ಸಿರಿ’ ಯೋಜನೆ ಆರಂಭಿಸಿ ಕೃಷಿ ಇಲಾಖೆ ಮೂಲಕ ಪ್ರತಿ ಹೆಕ್ಟೇರ್‌ಗೆ ₹10 ಸಾವಿರ ಪ್ರೋತ್ಸಾಹ ಧನ ಕೊಡಲಾಗುತ್ತಿದೆ. ಸಿರಿ ಧಾನ್ಯ ಬೆಳೆಸಲು ಪ್ರೋತ್ಸಾಹಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚಿಸುತ್ತಲೇ ಬಂದಿದ್ದಾರೆ.

ಬೇಡಿಕೆ, ಬೆಲೆ– ಎರಡೂ ಹೆಚ್ಚಿದ್ದರಿಂದ ಹಿಂದಿನ ವರ್ಷಗಳಲ್ಲಿ ರೈತರೂ ಬೆಳೆ ಬೆಳೆಯಲು ಮುಂದಾಗಿದ್ದರು. ಪ್ರೋತ್ಸಾಹ ಧನ ಸಿಕ್ಕಿದ್ದರಿಂದ ಮತ್ತಷ್ಟು ಉತ್ತೇಜಿತರಾಗಿ ಸಿರಿ ಧಾನ್ಯಗಳನ್ನು ಬಿತ್ತನೆ ಮಾಡುತ್ತಿದ್ದರು. ಚಿಕ್ಕನಾಯಕನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚು ಬೆಳೆಯುತ್ತಿದ್ದರು. ಆದರೆ ಒಮ್ಮೆಲೆ ಬೆಳೆಯುವುದನ್ನೇ
ನಿಲ್ಲಿಸಿದ್ದಾರೆ.

ಬಿತ್ತನೆ ಹಿನ್ನಡೆ: ಈ ಸಲ ಸಿರಿ ಧಾನ್ಯ ಬಿತ್ತನೆಯೇ ಆಗಿಲ್ಲ. ಕೆಲ ವರ್ಷಗಳ ಹಿಂದೆ ಏಳೆಂಟು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದು, ಈ ಬಾರಿ 5,480 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಅತ್ಯಲ್ಪ 346 ಹೆಕ್ಟೇರ್ ಪ್ರದೇಶದಲ್ಲಷ್ಟೇ ಬಿತ್ತನೆ ಮಾಡಲಾಗಿದೆ. ಇಷ್ಟು ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾದರೆ ಬೆಳೆದವರಿಗೇ ಸಾಕಾಗುವುದಿಲ್ಲ. ಇನ್ನೂ ಜನರಿಗೆ ಮಾರಾಟ ಮಾಡಲು ಸಿರಿ ಧಾನ್ಯ ಸಿಗುವುದಿಲ್ಲ. ಏನಿದ್ದರೂ ಹೊರ ಜಿಲ್ಲೆ ಅಥವಾ ಇತರೆಡೆಗಳಿಂದ ತರಿಸಿಕೊಳ್ಳಬೇಕಿದೆ.

ಕಾಡಿದ ಮಳೆ: ವರುಣನ ಕಣ್ಣಾ ಮುಚ್ಚಾಲೆಯಿಂದಾಗಿ ಸಿರಿ ಧಾನ್ಯಗಳ ಬಿತ್ತನೆ ಸಾಧ್ಯವಾಗಿಲ್ಲ ಎಂಬುದು ಕೃಷಿ ಇಲಾಖೆಯ ವಿವರಣೆ. ಜುಲೈನಲ್ಲಿ ಸರಿಯಾಗಿ ಮಳೆಯಾಗಲಿಲ್ಲ. ಕೆಲವು ದಿನಗಳು ಒಮ್ಮೆಲೆ ಸುರಿದ ಮಳೆ ಮತ್ತೆ ಮರೆಯಾಯಿತು. ಆಗಸ್ಟ್ ತಿಂಗಳಲ್ಲೂ ಸಕಾಲಕ್ಕೆ ಮಳೆಯಾಗಲಿಲ್ಲ. ಹೀಗೆ ಮಳೆಯ ಕೊರತೆಯಿಂದಾಗಿ ಬಿತ್ತನೆಗೆ ಸಮಸ್ಯೆಯಾಗಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಕೃಷಿ ದುಬಾರಿಯಾಗಿದೆ. ಕೃಷಿ ಕ್ಷೇತ್ರ ಕಾರ್ಮಿಕರ ಕೊರತೆ ಎದುರಿಸುತ್ತಿದ್ದು, ಏಕ ದಳ ಧಾನ್ಯಗಳ ಬಿತ್ತನೆ ಹಾಗೂ ಒಕ್ಕಣೆಗೆ ಹೆಚ್ಚು ಜನರನ್ನು ಬೇಡುತ್ತದೆ. ಮನೆ ಮಂದಿಯೆಲ್ಲ ದುಡಿದರೂ ಕೊನೆಗೆ ಬರುವ ಲಾಭ ಅಷ್ಟಕಷ್ಟೇ. ವಾಣಿಜ್ಯ ಬೆಳೆ ಬೆಳೆದರೆ ನಾಲ್ಕು ಕಾಸು ನೋಡಬಹುದು. ಶ್ರಮಪಟ್ಟರೂ ಸ್ವಲ್ಪವಾದರೂ ಪ್ರತಿಫಲ ಸಿಗುತ್ತದೆ. ಹಾಗಾಗಿ ರಾಗಿ ಸೇರಿದಂತೆ ಸಿರಿ ಧಾನ್ಯ ಬೆಳೆಗೆ ಮುಂದಾಗುತ್ತಿಲ್ಲ ಎಂದು ತುರುವೇಕೆರೆ ತಾಲ್ಲೂಕು ದಂಡಿನಶಿವರ ಗ್ರಾಮದ ರೈತ ರಾಮೇಗೌಡ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT