ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ | ಬಾರದ ಮಳೆ: ಒಣಗುತ್ತಿದೆ ಬೆಳೆ

Published 19 ಆಗಸ್ಟ್ 2023, 6:51 IST
Last Updated 19 ಆಗಸ್ಟ್ 2023, 6:51 IST
ಅಕ್ಷರ ಗಾತ್ರ

ಜಯಸಿಂಹ ಕೆ.ಆರ್

ಪಾವಗಡ: ತಾಲ್ಲೂಕಿನಲ್ಲಿ ಮಳೆ ಇಲ್ಲದೆ ಶೇಂಗಾ ಬೆಳೆ ಒಣಗುತ್ತಿದೆ. ನಿರೀಕ್ಷಿತ ಬೆಳೆ ಕೈಗೆಟುಕದೆ ಈ ಭಾಗದ ರೈತರು ಕಂಗಾಲಾಗಿದ್ದಾರೆ.

ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲಿಯೂ ಶೇಂಗಾ ಬೆಳೆಗಾರರ ಸ್ಥಿತಿ ಸಂಕಷ್ಟದಲ್ಲಿದೆ. ಕೃಷಿ ಇಲಾಖೆ 44,780 ಹೆಕ್ಟೇರ್ ಬಿತ್ತನೆ ಗುರಿ ಇಟ್ಟುಕೊಂಡಿತ್ತು. ಆದರೆ ಮಳೆ ಅಭಾವದಿಂದಾಗಿ 27,127 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತೆನೆಯಾಗಿದೆ. ಇದರಲ್ಲಿ 20,101 ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ.

ಸದ್ಯ ಮೇ ತಿಂಗಳಲ್ಲಿ ಬಿತ್ತನೆಯಾದ ಬೆಳೆ ಕಟಾವು ಹಂತದಲ್ಲಿದ್ದರೆ, ಮೇ-ಜುಲೈ ಆರಂಭದಲ್ಲಿ ಬಿತ್ತನೆಯಾದ ಶೇಂಗಾ ಕಾಯಿ ಕಟ್ಟುವ ಹಂತದಲ್ಲಿದೆ. ಜುಲೈ ಅಂತಿಮ ವಾರದಿಂದ ಆಗಸ್ಟ್ ತಿಂಗಳಲ್ಲಿ ಬಿತ್ತನೆಯಾದ ಶೇಂಗಾ ಬೆಳೆ ಹೂವಿನ ಹಂತದಲ್ಲಿದೆ. ಕಳೆದ 20 ದಿನಗಳಿಂದ ಮಳೆ ಬೀಳದ ಕಾರಣ ವಿವಿಧ ಹಂತದಲ್ಲಿರುವ ಬೆಳೆ ಬಾಡುತ್ತಿದೆ. ಇನ್ನು ವಾರದಲ್ಲಿ ಮಳೆಯಾಗದಿದ್ದರೆ ಬೆಳೆ ಸಂಪೂರ್ಣ ಹಾನಿಯಾಗಲಿದೆ.

20 ದಿನಗಳಿಂದ ಮಳೆ ಬಾರದ ಕಾರಣ ಬೆಳೆಗಳು ಬಾಡುತ್ತಿವೆ. ಶೀಘ್ರ ಮಳೆ ಬಂದರೆ ಹೂ ಕಾಯಿಕಟ್ಟುವ ಹಂತದಲ್ಲಿರುವ ಬೆಳೆಗೆ ಅನುಕೂಲವಾಗಲಿದೆ.
ಆರ್.ಅಜಯ್ ಕುಮಾರ್, ಸಹಾಯಕ ಕೃಷಿ ನಿರ್ದೇಶಕ

ಕಳೆದ ವರ್ಷ ಅತಿವೃಷ್ಟಿಯಿಂದ ಇಳುವರಿ ಕುಂಠಿತವಾಗಿತ್ತು. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಶೇಂಗಾದಿಂದ ಬಿಡಿಗಾಸು ಸಹ ರೈತರ ಕೈ ಸೇರಿರಲಿಲ್ಲ. ಈ ಬಾರಿ ಮಳೆ ಅಭಾವ ರೈತರ ನಿದ್ದೆಗೆಡಿಸಿದೆ. ಶೇ 60ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದ್ದರೂ ಸಕಾಲದಲ್ಲಿ ಮಳೆ ಬೀಳದ ಕಾರಣ ಈ ವರ್ಷವೂ ಬೆಳೆಗಾಗಿ ಮಾಡಿದ ಸಾಲ ತೀರಿಸಲಾಗದು ಎಂಬ ಆತಂಕದಲ್ಲಿ ತಾಲ್ಲೂಕಿನ ರೈತರಿದ್ದಾರೆ.

ತಾಲ್ಲೂಕಿನಲ್ಲಿ ಕೆಂಪು ಮಿಶ್ರಿತ ಮಣ್ಣು ಒಣ ಭೂಮಿ ಇರುವುದರಿಂದ ಮಳೆ ಬೀಳದಿದ್ದರೆ ಅಲ್ಪಕಾಲಿಕ ಬೆಳೆಗಳು ಬೇಗನ ಬಾಡುತ್ತವೆ. ಕಾಲ ಕಾಲಕ್ಕೆ ಮಳೆ ಬಿದ್ದರೆ ಮಾತ್ರ ಉತ್ತಮ ಬೆಳೆ ಬೆಳೆಯುತ್ತದೆ.
ರಾಮನಾಯ್ಕ, ರೈತ, ಕಣಿವೇನಹಳ್ಳಿ

ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವ ರೈತರು ಮಳೆಗಾಗಿ ಆಗಸದತ್ತ ಮುಖಮಾಡಿದ್ದಾರೆ. ಮಳೆರಾಯ ಈಗ ಕರುಣಿಸಿದರೂ ಹಾಕಿರುವ ಬಂಡವಾಳ ಮರಳುತ್ತದೆ. ಇಲ್ಲವಾದಲ್ಲಿ ಈಗಿರುವ ಸಾಲದ ಜೊತೆ ಬೆಳೆಗಾಗಿ ಮಾಡಿರುವ ಸಾಲವೂ ಹೊರೆಯಾಗಿ ಪರಿಣಮಿಸಲಿದೆ ಎಂದು ರೈತ ಹನುಮಂತರಾಯಪ್ಪ ಅಳಲು ತೋಡಿಕೊಂಡರು.

ಪಾವಗಡ ತಾಲ್ಲೂಕು ಜೆ.ಅಚ್ಚಮ್ಮನಹಳ್ಳಿ ಬಳಿ ಮಳೆ ಅಭಾವದಿಂದ ಒಣಗಿರುವ ಶೇಂಗಾ ಬೆಳೆ
ಪಾವಗಡ ತಾಲ್ಲೂಕು ಜೆ.ಅಚ್ಚಮ್ಮನಹಳ್ಳಿ ಬಳಿ ಮಳೆ ಅಭಾವದಿಂದ ಒಣಗಿರುವ ಶೇಂಗಾ ಬೆಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT