ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾರದ ಮಳೆ: ಒಣಗುತ್ತಿದೆ ಬೆಳೆ

Published 15 ಆಗಸ್ಟ್ 2024, 7:08 IST
Last Updated 15 ಆಗಸ್ಟ್ 2024, 7:08 IST
ಅಕ್ಷರ ಗಾತ್ರ

ಕೊರಟಗೆರೆ: ಕಳೆದ ತಿಂಗಳು ಬಿದ್ದ ಅಲ್ಪಸ್ವಲ್ಪ ಮಳೆಗೆ ಇಟ್ಟ ಬೆಳೆ ಕಣ್ಣೆದುರಲ್ಲೇ ಒಣಗಲಾರಂಭಿಸಿದೆ. ಇದರಿಂದ ಕಂಗಾಲಾಗಿರುವ ರೈತರು ಮಳೆಗಾಗಿ ಮುಗಿಲು ನೋಡುವ ಪರಿಸ್ಥಿತಿ ಎದುರಾಗಿದೆ.

ತಾಲ್ಲೂಕಿನಾದ್ಯಂತ ಈ ವರ್ಷ ಮಳೆ ಕೊರತೆ ಉಂಟಾಗಿದೆ. ಜುಲೈನಲ್ಲಿ ಅಲ್ಪಸ್ವಲ್ಪ ಮಳೆಯಾಗಿತ್ತು. ಇದರಿಂದ ರೈತರು ತಮ್ಮ ಜಮೀನು ಉಳುಮೆ ಮಾಡಿ ರಾಗಿ, ಜೋಳ, ಶೇಂಗ ಇತರೆ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಬೀಜ ಚಿಗುರೊಡೆದು ಬೆಳೆ ಹಸಿರಾಗಿ ಹೂ ಕಟ್ಟುವ ಮೊದಲೇ ಮಳೆಯಿಲ್ಲದೆ ಬೆಳೆ ಒಣಗುತ್ತಿದೆ. ಇನ್ನರೆಡು ದಿನದಲ್ಲಿ ಮಳೆ ಬಾರದೇ ಇದ್ದರೆ ಇಟ್ಟಿರುವ ಅಷ್ಟೂ ಬೆಳೆಯೂ ಸಂಪೂರ್ಣ ಒಣಗಿ ನೆಲಕಚ್ಚಲಿದೆ.

ತಾಲ್ಲೂಕಿನಾದ್ಯಂತ ಶೇ 72 ರಿಂದ 75ರಷ್ಟು ಈಗಾಗಲೇ ಬಿತ್ತನೆ ಕಾರ್ಯ ಮುಗಿದಂತಾಗಿದೆ. ಬಿತ್ತನೆಯಾದ ಬೆಳೆಗಳು ಸುಮಾರು ನಾಲ್ಕರಿಂದ ಐದು ವಾರ ಕಳೆದಿದೆ. ಹೂ, ಕಾಯಿ ಕಟ್ಟುವ ಹಂತದಲ್ಲಿರುವ ಬೆಳೆಗಳಿಗೆ ಈಗ ಮಳೆಯ ಅವಶ್ಯಕತೆ ಹೆಚ್ಚಾಗಿದೆ. ಮಳೆ ಇಲ್ಲದ ಕಾರಣಕ್ಕೆ ಬೆಳೆದು ನಿಂತ ಶೇಂಗಾ, ಮುಸುಕಿನ ಜೋಳ, ರಾಗಿ ಪೈರು ಒಣಗುತ್ತಿವೆ. ಕೆಲವೆಡೆ ರೈತರು ಕೊಳವೆ ಬಾವಿಗಳಿಂದ ನೀರು ಹಾಯಿಸುವ ಕೆಲಸ ಮಾಡುತ್ತಿದ್ದಾರೆ.

ರೈತರ ಸಂಕಷ್ಟಕ್ಕೆ ಸರ್ಕಾರ ನಿಲ್ಲಬೇಕು. ತಾಲ್ಲೂಕನ್ನು ಕೂಡಲೇ ಬರಪೀಡಿತ ಪ್ರದೇಶ ಎಂದು ಘೋಷಿಸಿ ರೈತರಿಗೆ ಸಿಗಬೇಕಾದ ಸವಲತ್ತು ನೀಡಲು ಕ್ರಮ ಜರುಗಿಸಬೇಕು.
–ಸಿದ್ದರಾಜು, ರೈತ ಸಂಘದ ಅಧ್ಯಕ್ಷ

ಕೈಯಲ್ಲಿದ್ದ ಅಷ್ಟಿಷ್ಟು ಹಣ ಖರ್ಚು ಮಾಡಿ ಬಿತ್ತನೆ ಬೀಜ ಖರೀದಿಸಿ ಬಿತ್ತನೆ ಮಾಡಿದ್ದೇವೆ. ಆರಂಭದಲ್ಲಿ ಬೆಳೆ ಚೆನ್ನಾಗಿ ಬಂತಾದರೂ ಈಗ ಮಳೆಯಿಲ್ಲದೆ ಒಣಗಿ ನೆಲ ಕಚ್ಚುತ್ತಿದೆ. ಈ ವರ್ಷ ಇಟ್ಟ ಬೆಳೆ ಕೈ ಸೇರುವುದೇ ಅನುಮಾನವಾಗಿದೆ. ಈಗಾಗಲೇ ದನಕರುಗಳಿಗೆ ಮೇವಿಲ್ಲ. ಬೆಳೆಯಾಗದಿದ್ದರೆ ಮುಂದೆಯೂ ಕಷ್ಟವಾಗಲಿದೆ ಎನ್ನುತ್ತಾರೆ ರೈತ ರಾಮಣ್ಣ.

ಮಳೆ ತಡವಾದ ಕಾರಣದಿಂದ ಉಳಿಕೆ ಭೂಮಿಗೆ ರೈತರು ಕೊರಲೆ ನವಣೆ, ಸಾಮೆ ಹಾಗೂ ಉರುಳಿ, ಅಲಸಂಡಿ ಅಲ್ಪಾವಧಿ ರಾಗಿ ತಳಿಗಳಾದ ಜಿಪಿಯು ಸೀರೀಸ್ ಬೀಜಗಳನ್ನು ಬಿತ್ತನೆ ಮಾಡಬಹುದಾಗಿದೆ. ಮಳೆ ಬಂದಲ್ಲಿ ಮೇಲು ಗೊಬ್ಬರವಾಗಿ ಯೂರಿಯಾ ಕೊಡಬಹುದು ಎಂದು ಕೃಷಿ ಇಲಾಖೆ ಎಡಿಎ ನಾಗರಾಜ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT