‘ನೀವು ₹8 ಲಕ್ಷ ಕೇರಳ ಲಾಟರಿ ಬಹುಮಾನ ಗೆದ್ದಿದ್ದೀರಿ’ ಎಂದು ನಂಬಿಸಿ ನಗರ ಹೊರವಲಯ ಕುಂದೂರು ಗ್ರಾಮದ ಕೆ.ಮಂಜುನಾಥ್ ಎಂಬುವರಿಗೆ ₹87183 ಹಣ ವಂಚಿಸಲಾಗಿದೆ. ಡಿ. 1ರಂದು ಕರೆ ಮಾಡಿದ ಆರೋಪಿಗಳು ಲಾಟರಿ ಬಗ್ಗೆ ತಿಳಿಸಿದ್ದಾರೆ. ಮೊದಲಿಗೆ ಕಮಿಷನ್ ಎಂದು ₹8 ಸಾವಿರ ಪಡೆದಿದ್ದಾರೆ. ನಂತರ ಜಿಎಸ್‌ಟಿ ಕಟ್ಟಬೇಕು ಎಂದು ₹24785 ವರ್ಗಾಯಿಸಿಕೊಂಡಿದ್ದಾರೆ. ಇದಾದ ಬಳಿಕ ನಿಮ್ಮ ಖಾತೆಗೆ ₹8 ಲಕ್ಷ ಹಣ ಸಂದಾಯವಾಗಿದೆ ಪರಿಶೀಲಿಸುವಂತೆ ಸೂಚಿಸಿದ್ದಾರೆ. ಮಂಜುನಾಥ್ ಖಾತೆ ನೋಡಿದಾಗ ಹಣ ಪಾವತಿಯಾಗಿಲ್ಲ. ವಂಚಕರು ಹಣ ವರ್ಗಾವಣೆಗೆ ಎನ್‌ಒಸಿ ಪಡೆಯಬೇಕು ಎಂದು ನಂಬಿಸಿ ₹54398 ಹಾಕಿಸಿಕೊಂಡಿದ್ದಾರೆ. ಎಲ್ಲ ಪ್ರಕ್ರಿಯೆ ಮುಗಿದ ಮೇಲೆ ಮಂಜುನಾಥ್ ಆರೋಪಿಗಳಿಗೆ ಕರೆ ಮಾಡಿದ್ದು ಸರಿಯಾಗಿ ಸ್ಪಂದಿಸಿಲ್ಲ. ಮೋಸ ಹೋದ ವಿಷಯ ಅರಿವಿಗೆ ಬಂದ ನಂತರ ಕ್ಯಾತ್ಸಂದ್ರ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ.