ಭಾನುವಾರ, ಮೇ 22, 2022
21 °C
ಇಂಧನ ಬೆಲೆ ಹೆಚ್ಚಳ, ಕೃಷಿ ಕಾಯ್ದೆ ವಾಪಸ್‌ಗೆ ಕಾಂಗ್ರೆಸ್ ಆಗ್ರಹ

ಪೆಟ್ರೋಲ್ ದುಬಾರಿ: ಕಾಂಗ್ರೆಸ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಇಂಧನ ಬೆಲೆ ಹೆಚ್ಚಳ ಖಂಡಿಸಿ ಹಾಗೂ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಾಪಸ್‍ಗೆ ಒತ್ತಾಯಿಸಿ ಬುಧವಾರ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ, ‘ಪ್ರಧಾನಿ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ಗಡಿಗಳಲ್ಲಿ ನಿರ್ಮಿಸಬೇಕಾದ ಮುಳ್ಳುತಂತಿ ಬೇಲಿಯನ್ನು ರೈತರು ದೆಹಲಿಗೆ ಬರದಂತೆ ತಡೆಯಲು ನಿರ್ಮಿಸಿದ್ದಾರೆ. ಇದನ್ನು ನೋಡಿದರೆ, ರೈತರ ಬಗ್ಗೆ ಇವರ ನಿಲುವು ಏನು ಎನ್ನುವುದು ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಕಣ್ಣೀರು ನಿಮಗೆ ಶಾಪವಾಗಲಿದೆ. ಇಂಧನ ಬೆಲೆ ಹೆಚ್ಚಳದಿಂದ ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದೆ. ಕೊರೊನಾದಿಂದ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ನೊಂದಿರುವ ಜನರ ಮೇಲೆ ಇಂಧನ ಬೆಲೆ ಹೆಚ್ಚಳ ಮಾಡಿ ಮತ್ತಷ್ಟು ಹೊರೆ ಹೇರಲಾಗಿದೆ ಎಂದರು.

ಮುಖಂಡ ರಫೀಕ್ ಅಹಮದ್ ಮಾತನಾಡಿ, ‘ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳಿಂದ ರೈತರು ಮತ್ತು ಜನಸಾಮಾನ್ಯರಿಗೆ ಸಾಕಷ್ಟು ತೊಂದರೆ ಆಗಲಿದೆ. ಶಾಂತಿಯುತ ಪ್ರತಿಭಟನೆಗೆ ಸಂವಿಧಾನದಲ್ಲೇ ಅವಕಾಶ ನೀಡಿದ್ದರೂ ಪ್ರತಿಭಟನನಿರತ ರೈತರು ದೆಹಲಿ ಪ್ರವೇಶಿಸದಂತೆ ತಡೆಗೋಡೆ ನಿರ್ಮಿಸಲಾಗಿದೆ’ ಎಂದರು.

ಈಗ ಮಾತುಕತೆಯ ಪ್ರಸ್ತಾಪ ಮುಂದಿಟ್ಟಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ರೈತರನ್ನು ಕಾರ್ಪೊರೇಟ್ ಧಣಿಗಳ ಕಪಿಮುಷ್ಠಿಗೆ ಸೇರಿಸುವ ಕೆಲಸವನ್ನು ಪ್ರಧಾನಿ ಮಾಡುತ್ತಿದ್ದಾರೆ. ಇದರ ವಿರುದ್ಧ ಪಕ್ಷವು ತಾಲ್ಲೂಕು, ಹೋಬಳಿ ಮಟ್ಟದಲ್ಲಿಯೂ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಹೇಳಿದರು.

ಮಹಾನಗರಪಾಲಿಕೆ ಸದಸ್ಯ ಜೆ.ಕುಮಾರ್, ತುಮಕೂರು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಮುಖಂಡ ಎಸ್‌.ಷಫಿ ಅಹಮದ್ ಮಾತನಾಡಿದರು.

ಮೇಯರ್ ಫರೀದಾಬೇಗಂ, ಪಾಲಿಕೆ ಸದಸ್ಯರಾದ ಪ್ರಭಾವತಿ ಸುಧೀಶ್ವರ್, ಮಹೇಶ್, ರೂಪಶ್ರೀ ಶೆಟ್ಟಾಳಯ್ಯ, ನೂರುನ್ನಿಸಾ ಭಾನು, ಷಿರಾಜ್ ಅಹಮದ್, ಷರೀಫ್, ನಯಾಜ್, ನಾಸಿರ್ ಭಾನು, ಮುಖಂಡರಾದ ಗೀತಮ್ಮ, ಚಿಕ್ಕವೆಂಕಟಯ್ಯ, ಜ್ವಾಲಮಾಲಾ ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಹಬೂಬ್ ಪಾಷ, ಆಟೊರಾಜು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು