ತುಮಕೂರು: ಜಮೀನಿನಲ್ಲಿ ಕೊಳೆಯುತ್ತಿದೆ ಶೇಂಗಾ

ಪಾವಗಡ: ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಶೇಂಗಾ ಬೆಳೆ ನೆಲಕಚ್ಚಿದ್ದು, ತಾಲ್ಲೂಕಿನ ಶೇಂಗಾ ಬೆಳೆಗಾರರು ಸಂಕಷ್ಟಕ್ಕೆ ಈಡಾಗಿದ್ದಾರೆ.
ಕೋವಿಡ್– 19 ಸಮಸ್ಯೆಯಿಂದ ಗ್ರಾಮಗಳಿಗೆ ಮರಳಿದ ಯುವಕರು ವ್ಯವಸಾಯದತ್ತ ಆಸಕ್ತಿ ತೋರಿದ ಕಾರಣ ಹೆಚ್ಚಿನ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ.
ಕೃಷಿ ಇಲಾಖೆ 73,030 ಎಕರೆ ವಿಸ್ತೀರ್ಣದಲ್ಲಿ ಶೇಂಗಾ ಬಿತ್ತನೆ ಗುರಿ ಹೊಂದಿತ್ತು. 65,729 ಎಕರೆಯಲ್ಲಿ ಬಿತ್ತನೆಯಾಗಿದೆ. ಪ್ರಸಕ್ತ ವರ್ಷ ಉತ್ತಮ ಮಳೆಯಾಗಿದ್ದು, ನಿರೀಕ್ಷಿತ ಬೆಳೆ ಸಿಗಲಿದೆ ಎಂದು ರೈತರು ಸಮಾಧಾನ ಪಟ್ಟುಕೊಂಡಿದ್ದರು. ಆದರೆ, ಬಿತ್ತನೆ ಮಾಡಿದಂದಿನಿಂದ ನಿರಂತರವಾಗಿ ಮಳೆ ಬೀಳುತ್ತಿರುವುದು ಶೇಂಗಾ ಬೆಳೆಗಾರರಲ್ಲಿ ಆತಂಕದ ಛಾಯೆ ಮೂಡಿಸಿದೆ.
ಕೆಲ ದಿನಗಳಿಂದ ನಿರಂತರವಾಗಿ ಮಳೆ ಬೀಳುತ್ತಿದೆ. ಮೇ ತಿಂಗಳಲ್ಲಿ ಬಿತ್ತನೆ ಮಾಡಿದವರು ಕಟಾವು ಮಾಡಿ ಜಮೀನಿನಲ್ಲಿ ಶೇಂಗಾ ಬಳ್ಳಿ ಹರಡಿದ್ದಾರೆ. ಮಳೆಯಿಂದಾಗಿ ಶೇಂಗಾ ಹಾಗೂ ಶೇಂಗಾ ಬಳ್ಳಿ ಎರಡೂ ಹಾಳಾಗಿದೆ. ಒಂದೆಡೆ ಕಡಲೆಕಾಯಿ ನೆಲಕಚ್ಚಿದರೆ, ಇಡೀ ವರ್ಷ ಜಾನುವಾರುಗಳ ಹೊಟ್ಟೆ ತುಂಬಿಸುತ್ತಿದ್ದ ಶೇಂಗಾ ಬಳ್ಳಿಯೂ ಕೊಳೆಯುತ್ತಿದೆ. ಇದರಿಂದ ರೈತರಿಗೆ ಆಘಾತವಾಗಿದೆ.
ನಿರಂತರವಾಗಿ ಮಳೆ ಬೀಳುತ್ತಿರು ವುದರಿಂದ ಜೂನ್, ಜೂನ್‌ನಲ್ಲಿ ಬಿತ್ತನೆ ಮಾಡಿರುವ ತಾಕುಗಳಲ್ಲಿ ಕಾಯಿ ಕಟ್ಟಿಲ್ಲ. 50ರಿಂದ 60 ಕಾಯಿ ಕಟ್ಟಬೇಕಿದ್ದ ಗಿಡದಲ್ಲಿ ಕೇವಲ 5ರಿಂದ 10 ಕಾಯಿ ಗಳಿವೆ. ಹೀಗಾಗಿ ಇಳುವರಿಯೂ ಕುಂಠಿತವಾಗಿದೆ.
ಈಗಾಗಲೇ ಶೇ 50ರಷ್ಟು ಇಳುವರಿ ಕುಂಠಿತವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಮಳೆ ಮುಂದುವರಿದರೆ ಜಮೀನಿನಲ್ಲಿಯೇ ಶೇಂಗಾ ಮೊಳಕೆಯೊಡೆದು ಬೆಳೆ ಸಂಪೂರ್ಣ ಹಾಳಾಗಲಿದೆ.
ಅಲ್ಲದೆ ಎಲೆ ಚುಕ್ಕಿ ರೋಗ, ಬೆಂಕಿ ಸೀಡೆ ಸಮಸ್ಯೆಗಳಿಂದ ರೈತರು ತತ್ತರಿಸಿದ್ದಾರೆ. ಔಷಧಿ ಸಿಂಪಡಿಸ ಲೂ ಮಳೆ ಬಿಡುವು ನೀಡು ತ್ತಿಲ್ಲ. ಪ್ರಸಕ್ತ ವರ್ಷ ಶೇ 90ರಷ್ಟು ಬಿತ್ತನೆಯಾದರೂ ಕೀಟ, ರೋಗ ಬಾಧೆ, ನಿರಂತರ ಮಳೆಯ ಕಾರಣದಿಂದ ತಾಲ್ಲೂಕಿನ ಮುಖ್ಯ ಬೆಳೆ ಶೇಂಗಾ ಕೈಕೊಟ್ಟಿದೆ.
ಮಾರುಕಟ್ಟೆ ಸಮಸ್ಯೆ: ಕ್ವಿಂಟಲ್‌ಗೆ ₹6 ಸಾವಿರದಿಂದ ₹9 ಸಾವಿರ ತೆತ್ತು ಬೀಜ ಖರೀದಿಸಿ ಉಳುಮೆಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ, ಗುಣಮಟ್ಟದ ಶೇಂಗಾಕ್ಕೆ ಕ್ವಿಂಟಲ್‌ಗೆ ಕೇವಲ ₹4 ಸಾವಿರದಿಂದ ₹5 ಸಾವಿರಕ್ಕೆ ಮಾರಾಟ ವಾಗುತ್ತಿದೆ. ಖರೀದಿ ಮಾಡಿದ ಬಿತ್ತೆನ ಬೀಜ ಕ್ಕಿಂತಲೂ ಕಡಿಮೆ ದರಕ್ಕೆ ರೈತರು ಶೇಂಗಾ ಮಾರಾಟ ಮಾಡಬೇಕಿದೆ. ಇದರಿಂದ ಸಾಲದ ಹೊರೆ ಹೆಚ್ಚಿ ಆರ್ಥಿಕವಾಗಿ ಸಂಕಷ್ಟಕ್ಕೀಡಾಗುತ್ತಿದ್ದಾರೆ.
ಆರಂಭವಾಗದ ಖರೀದಿ ಕೇಂದ್ರಗಳು: ಸರ್ಕಾರ ಬೆಂಬಲ ಬೆಲೆಗೆ ಶೇಂಗಾ ಖರೀದಿಸಲಾಗುವುದು ಎಂದು ಆಶ್ವಾಸನೆ ನೀಡಿತ್ತು. ಆದರೆ ಈವರೆಗೆ ಖರೀದಿ ಕೇಂದ್ರಗಳು ಆರಂಭವಾಗದಿರುವುದು ಸಮಸ್ಯೆಯನ್ನು ಹೆಚ್ಚಿಸಿದೆ.
***
ತಾಲ್ಲೂಕಿನಾದ್ಯಂತ ಶೇ 90ರಷ್ಟು ಶೇಂಗಾ ಬಿತ್ತನೆಯಾಗಿದೆ. ಎಲೆ ಚುಕ್ಕಿ ರೋಗ ನಿಯಂತ್ರಿಸಲು ಇಲಾಖೆಯಿಂದ ಸಲಹೆ, ಮಾರ್ಗದರ್ಶನ ನೀಡಲಾಗಿದೆ
ಪ್ರವೀಣ್, ತಾಂತ್ರಿಕ ಅಧಿಕಾರಿ, ಕೃಷಿ ಇಲಾಖೆ
***
ಸರ್ಕಾರ ಶೀಘ್ರ ಖರೀದಿ ಕೇಂದ್ರ ಆರಂಭಿಸಿ ಬೆಂಬಲ ಬೆಲೆಗೆ ಶೇಂಗಾ ಖರೀದಿಸಬೇಕು. ಈಗಾಗಲೇ ಕೆಲ ರೈತರು ಕಟಾವು ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ
ಮೂಡ್ಲಗಿರಿಯಪ್ಪ, ರೈತ, ಬಿ.ಕೆ.ಹಳ್ಳಿ, ಪಾವಗಡ
***
ಸುಮಾರು 6 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಶೇಂಗಾ ಮಳೆಯಿಂದಾಗಿ ಜಮೀನಿನಲ್ಲಿ ಕೊಳೆತು ಹೋಗಿದೆ. ಸರ್ಕಾರ ಶೇಂಗಾ ಬೆಳೆಗಾರರ ಕೈ ಹಿಡಿಯಬೇಕು
ತಿಲಕ್, ಪಳವಳ್ಳಿ, ಪಾವಗಡ ತಾಲ್ಲೂಕು
***
ಸಾಲ ಸೋಲ ಮಾಡಿ ಬಿತ್ತನೆ ಮಾಡಿದ್ದ ಶೇಂಗಾ ಜಮೀನಿನಲ್ಲಿ ಬಳ್ಳಿಯೊಂದಿಗೆ ಕೊಳೆತಿದೆ. ಏನು ಮಾಡಬೇಂಕೆಂಬುದು ತಿಳಿಯುತ್ತಿಲ್ಲ
ತಿಮ್ಮಪ್ಪ, ರೈತ, ಬಿ.ಕೆ.ಹಳ್ಳಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.