ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಆರೋಪ: ಗ್ರಾಮ ಪಂಚಾಯಿತಿ ಸದಸ್ಯತ್ವ ರದ್ದತಿಗೆ ನಿರ್ದೇಶನ

ಕಾರ್ಯದರ್ಶಿ, ಪಿಡಿಒಗೆ ದಂಡ; ಶಿಸ್ತು ಕ್ರಮ
Published 5 ಡಿಸೆಂಬರ್ 2023, 6:43 IST
Last Updated 5 ಡಿಸೆಂಬರ್ 2023, 6:43 IST
ಅಕ್ಷರ ಗಾತ್ರ

ತುಮಕೂರು: ಖರೀದಿ ಹೆಸರಿನಲ್ಲಿ ಅಕ್ರಮವೆಸಗಿರುವ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕೊರಗೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಅಭಿವೃದ್ಧಿ ಅಧಿಕಾರಿಗೆ ದಂಡ ಹಾಗೂ ಗ್ರಾ.ಪಂ ಸದಸ್ಯನ ಸದಸ್ಯತ್ವ ರದ್ದುಪಡಿಸಲು ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಕುಂದುಕೊರತೆ ನಿವಾರಣಾ ಪ್ರಾಧಿಕಾರ ಆದೇಶಿಸಿದೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಕೊರಗೆರೆ ಗ್ರಾ.ಪಂ ಕಾರ್ಯದರ್ಶಿ (ಹಿಂದಿನ ಪ್ರಭಾರಿ ಅಭಿವೃದ್ಧಿ ಅಧಿಕಾರಿ) ಟಿ.ಕೆಂಚಪ್ಪ ಅವರಿಂದ ₹32 ಸಾವಿರ ವಸೂಲಿ ಮಾಡಬೇಕು. ಜತೆಗೆ ಖರೀದಿ ಹೆಸರಿನಲ್ಲಿ ಅಕ್ರಮ, ನಿರ್ಲಕ್ಷ್ಯ, ಕರ್ತವ್ಯಲೋಪಕ್ಕಾಗಿ ₹5 ಸಾವಿರ ದಂಡ ವಿಧಿಸಿದ್ದು, ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಪ್ರಾಧಿಕಾರ ನಿರ್ದೇಶನ ನೀಡಿದೆ.

ವಿಚಾರಣಾ ಪ್ರಾಧಿಕಾರಕ್ಕೆ ತಪ್ಪು ವಿವರ, ವಿಭಿನ್ನ ಮಾಹಿತಿ ನೀಡಿ ವಿಚಾರಣೆ ದಿಕ್ಕು ತಪ್ಪಿಸಲು ಯತ್ನಿಸಿ ಕರ್ತವ್ಯಲೋ‍ಪ ಎಸಗಿರುವ ಕೊರಗೆರೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಎನ್.ನವೀನ್ ಕುಮಾರ್ ಅವರಿಗೆ ₹5 ಸಾವಿರ ದಂಡ ವಿಧಿಸಿದ್ದು, ಒಂದು ತಿಂಗಳಲ್ಲಿ ವಸೂಲಿ ಮಾಡುವಂತೆ ನಿರ್ದೇಶಿಸಲಾಗಿದೆ.

ಗ್ರಾ.ಪಂ ಸದಸ್ಯರಾಗಿದ್ದುಕೊಂಡು ಖರೀದಿ ಹೆಸರಿನಲ್ಲಿ ₹32 ಸಾವಿರ ಹಣವನ್ನು ಚೆಕ್ ಮೂಲಕ ಪಡೆದುಕೊಂಡು ಅಕ್ರಮದಲ್ಲಿ ಭಾಗಿಯಾಗಿದ್ದ ಬಿ.ಎಸ್.ದಿನೇಶ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಸದಸ್ಯತ್ವ ರದ್ದುಪಡಿಸಲು ಕ್ರಮ ವಹಿಸಲು ಶಿಫಾರಸಿನಲ್ಲಿ ತಿಳಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಕೊರಗೆರೆ ಗ್ರಾ.ಪಂನಲ್ಲಿ ಸಾಮಗ್ರಿ ಖರೀದಿ ಹೆಸರಿನಲ್ಲಿ ಅಕ್ರಮ ನಡೆದಿದ್ದು, ವಿಚಾರಣೆ ನಡೆಸುವಂತೆ ಕೋರಿ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಎಸ್.ಎಲ್.ಮಣಿಕಂಠ ಎಂಬುದು ಜಿ.ಪಂ ಸಾರ್ವಜನಿಕ ಕುಂದುಕೊರತೆ ನಿವಾರಣಾ ಪ್ರಾಧಿಕಾರಕ್ಕೆ 2022 ಜೂನ್ 21ರಂದು ದೂರು ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ಪ್ರಾಧಿಕಾರವು ಪ್ರತಿವಾದಿಗಳಿಗೆ ನೋಟಿಸ್ ಜಾರಿಮಾಡಿ ವಿಚಾರಣೆ ನಡೆಸಿತು.

ಗ್ರಾ.ಪಂ ಪಿಡಿಒ (ಪ್ರಭಾರ) ಆಗಿದ್ದ ಸಮಯದಲ್ಲಿ ಟಿ.ಕೆಂಚಪ್ಪ ಅವರು ಗ್ರಾ.ಪಂ ಸಭೆಯಲ್ಲೂ ಚರ್ಚಿಸದೆ, ಅನುಮೋದನೆಯನ್ನೂ ಪಡೆಯದೆ ಕರ್ತವ್ಯ ಲೋಪವೆಸಗಿ ಗ್ರಾ.ಪಂ ಸದಸ್ಯರಿಗೆ ಚೆಕ್ ಮೂಲಕ ₹32 ಸಾವಿರ ಹಣ ಪಾವತಿ ಮಾಡಿರುವುದು ಖಚಿತವಾಗಿದೆ. ಈಗಿನ ಗ್ರಾ.ಪಂ ಪಿಡಿಒ ಎನ್.ನವೀನ್ ಕುಮಾರ್ ವಿಚಾರಣಾ ಪ್ರಾಧಿಕಾರಕ್ಕೆ ತಪ್ಪು ಮಾಹಿತಿ ನೀಡಿದ್ದರು. ಗ್ರಾ.ಪಂ ಸದಸ್ಯರಿಗೆ ನೀಡಿರುವ ಚೆಕ್ಅನ್ನು ನಗದೀಕರಿಸಿಲ್ಲ ಎಂದು ಮಾಹಿತಿ ಒದಗಿಸಿದ್ದರು. ದೂರುದಾರರು ಹಣ ಪಾವತಿಯಾಗಿರುವ ಬಗ್ಗೆ ಮಾಹಿತಿ ನೀಡಿದ ನಂತರ ಮತ್ತೊಮ್ಮೆ ವಿವರಣೆ ಸಲ್ಲಿಸಿದ್ದರು. ಪ್ರಾಧಿಕಾರಕ್ಕೆ ವಿಭಿನ್ನವಾದ ಹಾಗೂ ತಪ್ಪು ಮಾಹಿತಿ ನೀಡಿರುವುದು ವಿಚಾರಣೆ ಸ್ಪಷ್ಟವಾಗಿದೆ.

ಗ್ರಾ.ಪಂ ಸದಸ್ಯರಿಗೆ ಗೌರವ ಧನವನ್ನು ಹೊರತುಪಡಿಸಿದರೆ ಬೇರೆ ಯಾವುದೇ ರೀತಿಯಲ್ಲೂ ಹಣ ಪಾವತಿಸುವಂತಿಲ್ಲ. ಸದಸ್ಯರಾದವರು ನಿಯಮದ ಪ್ರಕಾರ ಸಾಮಗ್ರಿ ಸರಬರಾಜು, ಗುತ್ತಿಗೆ ಸೇರಿದಂತೆ ಇತರೆ ಕಾಮಗಾರಿ ನಿರ್ವಹಿಸುವಂತಿಲ್ಲ. ಆದರೂ ಸಾಮಗ್ರಿ ಸರಬರಾಜಿನ ಹೆಸರಿನಲ್ಲಿ ಹಣ ಪಡೆದುಕೊಂಡಿರುವುದು ದೃಢಪಟ್ಟಿದೆ.

ಕುಂದುಕೊರತೆ ನಿವಾರಣಾ ಪ್ರಾಧಿಕಾರಿ ಕೆ.ಕರಿಯಪ್ಪ ಅವರು ಅವರು ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿ ಅಧಿಕಾರಿಗಳಿಂದ ದಂಡ ವಸೂಲಿಯ ಜತೆಗೆ ಶಿಸ್ತು ಕ್ರಮ ಕೈಗೊಳ್ಳಬೇಕು. ಗ್ರಾ.ಪಂ ಸದಸ್ಯ ಬಿ.ಎಸ್.ದಿನೇಶ್ ಸದಸ್ಯತ್ವ ರದ್ದುಪಡಿಸಲು ಕ್ರಮ ವಹಿಸುವುದು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಕ್ ಅಧಿನಿಯಮ 1993 ಪ್ರಕರಣ– 43–ಎ(4) ಅನ್ವಯ ಮುಂದಿನ ಕ್ರಮ ಜರುಗಿಸಬಹುದು ಎಂದು ಅವರು ಜಿ.ಪಂ ಸಿಇಗೆ ಶಿಫಾರಸು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT