ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಎಂ ವಿಶ್ವಕರ್ಮ ಯೋಜನೆ: ಅನುಷ್ಠಾನಕ್ಕೆ ಸೂಚನೆ

Published : 18 ಸೆಪ್ಟೆಂಬರ್ 2024, 2:40 IST
Last Updated : 18 ಸೆಪ್ಟೆಂಬರ್ 2024, 2:40 IST
ಫಾಲೋ ಮಾಡಿ
Comments

ತುಮಕೂರು: ಸಮಾಜದಲ್ಲಿ ಧ್ವನಿ ಇಲ್ಲದ ವಿಶ್ವಕರ್ಮ ಸಮುದಾಯವನ್ನು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಆದ್ಯತೆ ಮೇರೆಗೆ ಪರಿಗಣಿಸುವಂತೆ ಕೇಂದ್ರ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸಲಹೆ ಮಾಡಿದರು.

ನಗರದಲ್ಲಿ ಮಂಗಳವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಯೋಜನೆ ಅನುಷ್ಠಾನದಲ್ಲಿ ಲೋಪ ಕಂಡುಬಂದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಶ್ವಕರ್ಮ ಸಮುದಾಯವು ಹಿಂದೂ ಧರ್ಮಕ್ಕೆ ನೀಡಿರುವ ಕೊಡುಗೆ ಸ್ಮರಣೀಯ. ವಿಶ್ವದ ಯಾವುದೇ ಕೆತ್ತನೆ, ಕುಸುರಿ, ಆಭರಣಗಳಲ್ಲಿ ವಿಶ್ವಕರ್ಮ ಸಮುದಾಯದವರ ಸ್ಪರ್ಶ ಕಾಣಬಹುದಾಗಿದೆ. ವಿಶ್ವಕರ್ಮರ ಸ್ಪರ್ಶವಿಲ್ಲದ ಗುಡಿ-ಗೋಪುರಗಳಿಲ್ಲ, ಮಠ-ಮಂದಿರಗಳಿಲ್ಲ, ಕೃಷಿ ಸಲಕರಣೆಗಳಿಲ್ಲ, ಜೀವಕಳೆ ಕೊಡುವ ದೇವತಾ ಮೂರ್ತಿಗಳಿಲ್ಲ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ವಿಶ್ವಕರ್ಮ ಸಮುದಾಯದಲ್ಲಿರುವ ಸಮಸ್ಯೆಗಳನ್ನು ಪರಿಶೀಲಿಸಿ ನ್ಯಾಯ ಒದಗಿಸುವ ಆಶ್ವಾಸನೆಯನ್ನು ಸಂಸದರು ನೀಡಿದ್ದಾರೆ. ವಿಶ್ವಕರ್ಮ ಸಮುದಾಯದ ಅಭಿವೃದ್ಧಿಯ ಚಿಂತನೆಗಳು ನಡೆಯಬೇಕು. ಸಮುದಾಯದ ಪ್ರಗತಿಗಾಗಿ ಕೈಜೋಡಿಸಲು ನಾವಿದ್ದೇವೆ’ ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್, ‘ಜಿಲ್ಲೆಯಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿ 1,74,831 ಜನರನ್ನು ನೋಂದಣಿ ಮಾಡಲಾಗಿದೆ. ಅತಿ ಹೆಚ್ಚು ನೋಂದಣಿ ಮಾಡಿಕೊಳ್ಳುವ ಮೂಲಕ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಈವರೆಗೆ 8,025 ಮಂದಿಗೆ ತರಬೇತಿ, 18,812 ಫಲಾನುಭವಿಗಳಿಗೆ ಟೂಲ್ ಕಿಟ್ ವಿತರಿಸಲಾಗಿದೆ’ ಎಂದು ತಿಳಿಸಿದರು.

ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷ ಟಿ.ಮುರಳಿಕೃಷ್ಣಪ್ಪ, ‘ವಿಶ್ವಕರ್ಮ ಸಮುದಾಯದ ಕೊಡುಗೆಗಳ ಬಗ್ಗೆ ಉಲ್ಲೇಖಿಸಿರುವ ಸ್ವಾಮಿ ಶಿವಾತ್ಮಾನಂದ ಸರಸ್ವತೀ ಅವರ ‘ವಿರಚಿತ’ ಹಾಗೂ ವೃಷಭೇಂದ್ರಾಚಾರ್ ಅಕ್ಕಸಾಲಿ ಕನ್ನಡಕ್ಕೆ ಅನುವಾದಿಸಿರುವ ‘ಪಂಚವೇದ ಸಂಹಿತಾ ವೇದ ಭಗವಾನ್’ ಗ್ರಂಥ ಕುರಿತು ಉಪನ್ಯಾಸ ನೀಡಿದರು.

ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ, ತಹಶೀಲ್ದಾರ್ ರಾಜೇಶ್ವರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಎಚ್.ಪಿ.ನಾಗರಾಜು, ಚಿನ್ನ- ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಕೆ.ಬಿ.ಗಜೇಂದ್ರಾಚಾರ್, ಚಿಕ್ಕಪೇಟೆ ಕಾಳಿಕಾಂಬ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ವಿ.ಗಂಗರಾಜಾಚಾರ್, ವಿಶ್ವಕರ್ಮ ಯಜ್ಞ ಮಹೋತ್ಸವ ಸಮಿತಿ ಕಾರ್ಯದರ್ಶಿ ಜೆ.ಎನ್.ಗೋಪಾಲಕೃಷ್ಣಚಾರ್, ಕಾಳಿಕಾಂಬ ವಿಶ್ವಕರ್ಮ ಗಾಯತ್ರಿ, ವೀರಬ್ರಹ್ಮೇಂದ್ರ ಸ್ವಾಮಿ ದೇವಾಲಯದ ಅಧ್ಯಕ್ಷ ಎಚ್.ಆರ್.ಚಂದ್ರಶೇಖರಾಚಾರ್, ಎಸ್.ಹರೀಶ್ ಆಚಾರ್ಯ ಇತರರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿಶ್ವಕರ್ಮ ಸಮುದಾಯದ ಎನ್.ವಿಶ್ವಮೂರ್ತಿ, ಎನ್.ಎಸ್.ರವಿ, ಎಲ್.ರವಿ, ವಿ.ಎ.ವಿನಯ್‍ಕುಮಾರ್, ಜಿ.ಲೀಲಾ, ಎಲ್.ಎನ್.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಸಮುದಾಯದ ಪ್ರತಿಭಾವಂತ 16 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT