ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೆಂಕಟಮ್ಮನಹಳ್ಳಿ ಪೊಲೀಸ್ ಹತ್ಯಾಕಾಂಡ: ಮಾಜಿ ನಕ್ಸಲ್‌ ಬಂಧನ

Published 3 ಜುಲೈ 2024, 20:07 IST
Last Updated 3 ಜುಲೈ 2024, 20:07 IST
ಅಕ್ಷರ ಗಾತ್ರ

ಪಾವಗಡ (ತುಮಕೂರು): ತಾಲ್ಲೂಕಿನ ನಾಗಲಮಡಿಕೆ ಹೋಬಳಿ ವೆಂಕಟಮ್ಮನ ಹಳ್ಳಿಯಲ್ಲಿ 2005ರಲ್ಲಿ ನಡೆದ ಏಳು ಪೊಲೀಸರ ಹತ್ಯಾಕಾಂಡದ ಆರೋಪಿ, ಮಾಜಿ ನಕ್ಸಲ್‌ ಚಂದ್ರ ಅಲಿಯಾಸ್‌ ಬಿ.ಮುತ್ಯಾಲು (36) ಎಂಬುವವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

2005ರ ಫೆಬ್ರುವರಿ 10ರಂದು ವೆಂಕಟಮ್ಮನಹಳ್ಳಿಯಲ್ಲಿ ನಕ್ಸಲರು ದಾಳಿ ನಡೆಸಿ ಏಳು ಪೊಲೀಸರನ್ನು ಹತ್ಯೆ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಘಟನೆ ನಡೆದ ನಂತರ ತಲೆ ಮರೆಸಿಕೊಂಡಿದ್ದ ಆರೋಪಿ ವಿರುದ್ಧಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ರಹಿತ ವಾರಂಟ್‌ ಹೊರಡಿಸಿತ್ತು.

ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಘಟನೆ ನಡೆದು ಒಂದೂವರೆ ದಶಕದ ಬಳಿಕ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಯು ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಗಾರಲದಿನ್ನೆ ಮಂಡಲಂ ಕೇಶವಾಪುರಂ ಗ್ರಾಮದ ನಿವಾಸಿ.

ಹಿನ್ನೆಲೆ: ವೆಂಕಟಮ್ಮನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಭದ್ರತಾ ದೃಷ್ಟಿಯಿಂದ ನಿಯೋಜಿಸಿದ್ದ ಕೆಎಸ್‌ಆರ್‌ಪಿ 9ನೇ ಕ್ಯಾಂಪ್‌ನ ಮೇಲೆ ಸುಮಾರು 300ಕ್ಕೂ ಹೆಚ್ಚು ನಕ್ಸಲರ ತಂಡ ಏಕಾಏಕಿ ದಾಳಿ ನಡೆಸಿತ್ತು.

ಲಾರಿಗಳಲ್ಲಿ ಬಂದಿದ್ದ ನಕ್ಸಲರು ಒಮ್ಮೆಲೆ ದಾಳಿ ನಡೆಸಿ ಪೊಲೀಸರ ಬಳಿ ಇದ್ದ ಬಂದೂಕು, ಮದ್ದು ಗುಂಡುಗಳನ್ನು ದೋಚಿದ್ದರು. ನಂತರ ಮನಬಂದಂತೆ ಗುಂಡು ಹಾರಿಸಿದ್ದರು. ಇದರಲ್ಲಿ ಒಬ್ಬ ಸಾರ್ವಜನಿಕ ಹಾಗೂ ಏಳು ಪೊಲೀಸರು ಮೃತಪಟ್ಟಿದ್ದರು. ತಿರುಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT