ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ‘ಹಿಂದಿ ದಿವಸ’ ವಿರೋಧಿಸಿ ಪ್ರತಿಭಟನೆ

Last Updated 15 ಸೆಪ್ಟೆಂಬರ್ 2021, 5:07 IST
ಅಕ್ಷರ ಗಾತ್ರ

ತುಮಕೂರು: ಹಿಂದಿ ದಿವಸ ಆಚರಣೆ ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಸೆ. 14ರಂದು ಹಿಂದಿ ದಿವಸವನ್ನಾಗಿ ದೇಶದಾದ್ಯಂತ ಕೇಂದ್ರ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ರಾಷ್ಟ್ರದ ಹಲವು ಭಾಷೆಗಳನ್ನು ಕಡೆಗಣಿಸಿ ಹಿಂದಿ ಭಾಷೆ ಮೆರೆಸುತ್ತಿರುವುದನ್ನು ಖಂಡಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಅಂಜಿನಪ್ಪ, ‘ಕೇಂದ್ರ ಸರ್ಕಾರ ರಾಜ್ಯದ ಮಾತೃಭಾಷೆ ಕನ್ನಡವನ್ನು ಕಗ್ಗೊಲೆ ಮಾಡುತ್ತಿದೆ. ನಮ್ಮ ತಾಯಿ ನಮಗೆ ಮುಖ್ಯ, ನಮ್ಮ ಮಾತೃಭಾಷೆ ಮುಖ್ಯ. ಕನ್ನಡ ನಮಗೆ ಮುಖ್ಯ. ಈಗಿನ ಬಿಜೆಪಿ ಸರ್ಕಾರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಏಕಪಕ್ಷೀಯವಾಗಿ ಒಕ್ಕೂಟದ ವ್ಯವಸ್ಥೆ ಇದೆ ಎಂಬುದನ್ನೂ ಮರೆತು ನಡೆದುಕೊಳ್ಳುತ್ತಿದೆ’ ಎಂದು ಟೀಕಿಸಿದರು.

ಕೇವಲ ಹಿಂದಿ ಭಾಷೆ ಮಾತನಾಡುವ ರಾಜ್ಯಗಳು ಸೇರಿ ಭಾರತ ರಾಷ್ಟ್ರ ರಚನೆಯಾಗಿಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳು ಇವೆ. ಆಯಾ ರಾಜ್ಯಗಳು ತಮ್ಮ ಭಾಷೆಯನ್ನು ಮಾತೃಭಾಷೆಯಾಗಿ ಬಳಸುತ್ತಿವೆ. ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ಹಕ್ಕುಗಳನ್ನು ಕಸಿದುಕೊಂಡು ಹಿಂದಿ ಭಾಷೆಗೆ ಪ್ರಾಧಾನ್ಯತೆ ಕೊಟ್ಟು, ಕತ್ತಲಿನಲ್ಲಿಡುವ ಪ್ರಯತ್ನ ನಡೆದಿದೆ. ಹಿಂದಿ ದಿವಸ ಆಚರಣೆಯನ್ನು ಕೂಡಲೇ ವಾಪಸ್ ಪಡೆಯಬೇಕು. ಕನ್ನಡ ಭಾಷೆಗೆ ಆದ್ಯತೆ ಕೊಡಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ‘ರಾಜ್ಯದಲ್ಲಿ ಅನಗತ್ಯವಾಗಿ ಹಿಂದಿ ಏರಿಕೆ ಮಾಡುತ್ತಿರುವುದು ಖಂಡನೀಯ. ಕನ್ನಡದ ಬದಲು ಹಿಂದಿಗೆ ಒಲವು ತೋರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದ್ದು, ರಾಜ್ಯದಲ್ಲಿ ಹಿಂದಿ ಭಾಷೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗುವುದು’ ಎಂದರು.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಬೆಳ್ಳಿ ಲೋಕೇಶ್, ‘ಅಖಂಡ ಭಾರತವನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಬೇಕು ಎಂಬ ಒಂದೇ ಒಂದು ದೃಷ್ಟಿಯಿಂದ ಬಿಜೆಪಿಯು ಒಕ್ಕೂಟ ವ್ಯವಸ್ಥೆಯನ್ನು ಹಾಳುಮಾಡುತ್ತಿದೆ’ ಎಂದು ದೂರಿದರು.

ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಹಾಲನೂರು ಅನಂತಕುಮಾರ್, ರಾಜ್ಯ ಹಿರಿಯ ಉಪಾಧ್ಯಕ್ಷ ಗಂಗಣ್ಣ, ಮುಖಂಡರಾದ ಸೋಲಾರ್ ಕೃಷ್ಣಮೂರ್ತಿ, ರಾಮಚಂದ್ರಪ್ಪ, ಪಾಲಿಕೆ ಸದಸ್ಯ ಮಂಜುನಾಥ್, ಚಲುವರಾಜು, ರಾಮಾಂಜಿನಪ್ಪ, ಸುಲ್ತಾನ್ ಮೊಹಮ್ಮದ್, ಪ್ರಸನ್ನಕುಮಾರ್, ಉಮಾಶಂಕರ್, ಕೆಂಪರಾಜು, ಉಪ್ಪಾರಹಳ್ಳಿ ಕುಮಾರ್, ಸೊಗಡು ವೆಂಕಟೇಶ್, ಜಯಶ್ರೀ, ಲೀಲಾವತಿ, ಲಕ್ಷ್ಮಮ್ಮ ವೀರಣ್ಣಗೌಡ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT