ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಲೆ ಏರಿಕೆ: ಎತ್ತಿನಗಾಡಿ, ಸೈಕಲ್‌ನಲ್ಲಿ ಪ್ರಯಾಣಿಸಿ ಪ್ರತಿಭಟನೆ

Published 17 ಜೂನ್ 2024, 14:07 IST
Last Updated 17 ಜೂನ್ 2024, 14:07 IST
ಅಕ್ಷರ ಗಾತ್ರ

ಕೊರಟಗೆರೆ: ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಎನ್‌ಡಿಎ ಕಾರ್ಯಕರ್ತರು ಎತ್ತಿನ ಗಾಡಿ, ಸೈಕಲ್‌ನಲ್ಲಿ ಪ್ರಯಾಣಿಸಿ ಸೋಮವಾರ ಪ್ರತಿಭಟಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷಕಳೆದರೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಬದಲಾಗಿ ಗ್ಯಾರಂಟಿಗಳ ಗುಂಗಲ್ಲಿ ಕಾಲ ಹರಣ ಮಾಡುತ್ತಿದೆ. ಈಗ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚು ಮಾಡಿ ಜನ ಸಾಮಾನ್ಯರಿಗೆ ಬರೆ ಎಳೆದಿದೆ. ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸರ್ಕಾರದಲ್ಲಿ ಹಣವಿಲ್ಲ. ಗ್ಯಾರಂಟಿ ಯೋಜನೆಗಾಗಿ ಕಾಂಗ್ರೆಸ್ ಪ್ರತಿನಿತ್ಯ ಬೆಲೆ ಏರಿಕೆ ಮಾಡುತ್ತಿದೆ ಎಂದು ಕಾರ್ಯಕರ್ತರು ಆಪಾದಿಸಿದರು.

ಮಧುಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ ಮಾತನಾಡಿ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ರೈತ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಗ್ರಾಹಕರಿಂದ ಲೂಟಿ ಮಾಡಲಾಗುತ್ತಿದೆ. ಎಡಗೈಯಿಂದ ಕೊಟ್ಟು, ಬಲಗೈಯಿಂದ ದುಪ್ಪಟ್ಟು ಹಣ ಕಿತ್ತು ಕೊಳ್ಳುವ ಕೆಲಸ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.

ಮುಖಂಡ ಬಿ.ಎಚ್.ಅನಿಲ್‌ಕುಮಾರ್ ಮಾತನಾಡಿ, ಲೋಕಸಭಾ ಚುನಾವಣೆ ಮಗಿದ ಕೆಲವೇ ದಿನಗಳಲ್ಲಿ ಮದ್ಯದ ಬೆಲೆ, ಸ್ಟಾಂಪ್ ಮತ್ತು ರಿಜಿಸ್ಟರ್ ಪೇಪರ್ ಹೆಚ್ಚಳವಾಯ್ತು. ಪ್ರಸ್ತುತ ಪೆಟ್ರೋಲ್, ಡಿಸೆಲ್ ಬೆಲೆ ಜಾಸ್ತಿಯಿಂದ ಗ್ರಾಹಕರ ಜೀವನವೇ ಸಂಕಷ್ಟಕ್ಕೆ ತಲುಪಿದೆ ಎಂದರು.

ಪ್ರತಿಭಟನೆಯಲ್ಲಿ ಕೊರಟಗೆರೆ ಮಂಡಲ ಅಧ್ಯಕ್ಷ ದರ್ಶನ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜೆ.ಎನ್. ನರಸಿಂಹರಾಜು, ಮಧುಗಿರಿ ಯುವ ಮೋರ್ಚ ಅಧ್ಯಕ್ಷ ಶಿವಕುಮಾರ ಸ್ವಾಮಿ, ರಘು, ದಾಡಿವೆಂಕಟೇಶ್, ರಂಗರಾಜು, ಅರುಣಕುಮಾರ್, ಗೋವಿಂದರೆಡ್ಡಿ, ಚೇತನ್, ಮಂಜುನಾಥ, ಸುರೇಶ್, ಆನಂದ್, ವಕೀಲ ಸಂತೋಷ, ವಿಶ್ವನಾಥ ಅಪ್ಪಾಜಪ್ಪ ಇದ್ದರು.

ಬೆಲೆ ಏರಿಕೆ ಖಂಡಿಸಿ ಕೊರಟಗೆರೆಯಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು 
ಬೆಲೆ ಏರಿಕೆ ಖಂಡಿಸಿ ಕೊರಟಗೆರೆಯಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು 

ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ

ಬಿಜೆಪಿ ಕಾರ್ಯಕ್ರಮ ಮತ್ತು ಸಭೆಗಳಲ್ಲಿ ಕೊರಟಗೆರೆಯ ಮೂಲ ಬಿಜೆಪಿ ಕಾರ್ಯಕರ್ತನನ್ನು ಕಡೆಗಣಿಸಲಾಗುತ್ತಿದೆ ಎಂದು ಕಾರ್ಯಕರ್ತರ ನಡುವೆ ಕ್ಷಣ ಕಾಲ ವಾಗ್ವಾದ ನಡೆಯಿತು. ತಾಲ್ಲೂಕಿನಲ್ಲಿ ಹತ್ತಾರು ವರ್ಷಗಳಿಂದ ಬಿಜೆಪಿ ಬಾವುಟ ಕಟ್ಟಿಬೆಳೆಸಿದವರನ್ನು ಇತ್ತೀಚೆಗೆ ಬಂದವರು ಮೂಲೆಗುಂಪು ಮಾಡುತ್ತಿದ್ದಾರೆ. ಯಾವುದೇ ಸಭೆ ಸಮಾರಂಭಗಳನ್ನು ಗಮನಕ್ಕೆ ತರದೇ ಅವರ ಇಚ್ಚೆಗೆ ಬಂದಂತೆ ಮಾಡಲಾಗುತ್ತಿದೆ. ಕೆಲವರು ಈಚೆಗೆ ಬಿಜೆಪಿ ಕಾರ್ಯಕರ್ತರು ಎಂದು ಹೇಳಿಕೊಂಡು ಬಿಜೆಪಿ ತತ್ವ ಸಿದ್ಧಾಂತವನ್ನೆ ಮರೆತು ನಡೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಮೂಲ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿ ವಾಗ್ವಾದ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT