ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರಂ ಕೊರತೆ: ತುಮಕೂರು ಜಿ.ಪಂ ವಿಶೇಷ ಸಭೆ ಮುಂದಕ್ಕೆ

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ವಿರುದ್ಧ ಅವಿಶ್ವಾಸ ಮುಂದುವರಿಸಿದ ಸದಸ್ಯರು
Last Updated 26 ಸೆಪ್ಟೆಂಬರ್ 2020, 2:28 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ಶುಕ್ರವಾರ ಕರೆದಿದ್ದ ವಿಶೇಷ ಸಭೆಗೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯ ಬಹುತೇಕ ಸದಸ್ಯರು ಪಾಲ್ಗೊಳ್ಳಲಿಲ್ಲ. ಕೋರಂ ಕೊರತೆಯ ಕಾರಣ ಸಭೆಯನ್ನು ಮುಂದೂಡಲಾಯಿತು.

ಲತಾ ಅವರ ವಿರುದ್ಧ ಮೂರು ಪಕ್ಷಗಳ 49 ಸದಸ್ಯರು ಅವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅ. 7ರಂದು ಪ್ರಾದೇಶಿಕ ಆಯುಕ್ತರು ಅವಿಶ್ವಾಸ ಮಂಡನೆಯ ಸಭೆ ನಿಗದಿಗೊಳಿಸಿದ್ದಾರೆ. ಈ ನಡುವೆಯೇ ಅನುದಾನ ಹಂಚಿಕೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಲತಾ ಅವರು ವಿಶೇಷ ಸಭೆ
ಕರೆದಿದ್ದರು.

ಬೆಳಿಗ್ಗೆ 11ಕ್ಕೆ ಸಭೆ ಆರಂಭವಾಯಿತು. ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. 11.15ಕ್ಕೆ ಕಾಂಗ್ರೆಸ್‌ ಸದಸ್ಯರಾದ ಕೆಂಚಮಾರಯ್ಯ, ಜಿ.ಜೆ.ರಾಜಣ್ಣ, ಚನ್ನಮಲ್ಲ‍ಯ್ಯ, ಶಾಂತಲಾ ರಾಜಣ್ಣ ಸಭೆಗೆ ಬಂದರು. ಆ ನಂತರ ಬಿಜೆಪಿಯ
ವೈ.ಎಚ್.ಹುಚ್ಚಯ್ಯ, ಜೆಡಿಎಸ್‌ನ ತಿಮ್ಮಣ್ಣ ಹೀಗೆ ಒಟ್ಟು 14 ಮಂದಿ ಸದಸ್ಯರು ಹಾಜರಾದರು. ಆದರೆ ಸಭೆ ನಡೆಸಲು ಅಗತ್ಯವಾದ ಸದಸ್ಯ ಬಲ ಇಲ್ಲದ ಕಾರಣ ಸಭೆ ಮುಂದೂಡಲಾಗುವುದು ಎಂದು ಅಧ್ಯಕ್ಷರು ಪ್ರಕಟಿಸಿದರು.

ವೇದಿಕೆಯಿಂದ ಇಳಿದ ಅಧ್ಯಕ್ಷೆ ತಮ್ಮ ಕೊಠಡಿಗೂ ತೆರಳದೆ ನೇರವಾಗಿ ಶಿರಾದತ್ತ ಮುಖ ಮಾಡಿದರು.

ಎರಡೂ ಸ್ಥಾನಕ್ಕೆ ರಾಜೀನಾಮೆ ನೀಡಲಿ:

‘ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧದ ಅವಿಶ್ವಾಸಕ್ಕೆ ನಾನು ಸಹಿ ಹಾಕಿದ್ದೆ. ಆದರೆ ಈಗ ನೋಡಿದರೆ ಬಿಜೆಪಿಯವರು ಅಧ್ಯಕ್ಷರ ವಿರುದ್ಧ ಮಾತ್ರ ಅವಿಶ್ವಾಸ ಮಂಡಿಸಲು ಮುಂದಾಗಿದ್ದಾರೆ. ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ಇಬ್ಬರ ವಿರುದ್ಧವೂ ಅವಿಶ್ವಾಸ ಮಂಡನೆ ಆಗಬೇಕು’ ಎಂದು ಕಾಂಗ್ರೆಸ್‌ನ ಹಿರಿಯ ಸದಸ್ಯ ಕೆಂಚಮಾರಯ್ಯ ತಿಳಿಸಿದರು.

ಹೈಕಮಾಂಡ್ ಮಾತು ಮೀರಿದ ಅಧ್ಯಕ್ಷೆ:

ಈ ಹಿಂದೆಯೇ ನಮ್ಮ ನಾಯಕರಾದ ಎಚ್‌.ಡಿ.ಕುಮಾರಸ್ವಾಮಿ ಅವರು ರಾಜೀನಾಮೆ ನೀಡುವಂತೆ ಲತಾ ಅವರಿಗೆ ಸೂಚಿಸಿದ್ದರು.
ಆದರೆ ಅವರು ವರಿಷ್ಠರ ಮಾತನ್ನು ಮೀರಿದ್ದಾರೆ. ಇವರ ಆಡಳಿತದಲ್ಲಿ ವಿಶ್ವಾಸವಿಲ್ಲ. ಆದ್ದರಿಂದ ಎಲ್ಲ ಸದಸ್ಯರು ಪಕ್ಷಾತೀತವಾಗಿ ರಾಜೀನಾಮೆಗೆ ಆಗ್ರಹಿಸಿದ್ದೇವೆ ಎಂದು ಜೆಡಿಎಸ್ ಸದಸ್ಯ ತಿಮ್ಮಯ್ಯ ಮಾಹಿತಿ
ನೀಡಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಪ್ಪಂದ ಮಾಡಿಕೊಂಡು ಅಧಿಕಾರ ಹಿಡಿದಿವೆ. ಜೆಡಿಎಸ್‌ನ ಲತಾ ರವಿಕುಮಾರ್ ಅಧ್ಯಕ್ಷರಾಗಿ ಮತ್ತು ಬಿಜೆಪಿಯ ಶಾರದಾ ನರಸಿಂಹಮೂರ್ತಿ ಉಪಾಧ್ಯಕ್ಷರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT