ತುಮಕೂರು: ‘ಸಹಬಾಳ್ವೆ, ಆದರ್ಶ ಮರೆತರೆ ಏನು ಅನಾಹುತ ಆಗುತ್ತದೆ ಎಂಬುವುದು ಕೃತಿಯಿಂದ ತಿಳಿಯುತ್ತದೆ. ಸಮಕಾಲೀನ ಭಾರತಕ್ಕೆ ಬಹಳ ಪ್ರಸ್ತುತವಾಗಿದೆ’ ಎಂದು ಸಾಹಿತಿ ಪ್ರೊ.ಎಚ್.ಎಸ್.ಶಿವಪ್ರಕಾಶ್ ಅಭಿಪ್ರಾಯಪಟ್ಟರು.
ನಗರದಲ್ಲಿ ಭಾನುವಾರ ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ ಅವರು ಅನುವಾದಿಸಿರುವ ‘ಆ ಲಯ ಈ ಲಯ’ ನಾಟಕ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಎಲ್ಲ ಕನ್ನಡಿಗರು ಓದಬೇಕಾದ ಕೃತಿ. ನಾಟಕದಲ್ಲಿನ ಪಾತ್ರಗಳ ಹೆಸರು ಬದಲಾಯಿಸಿ ಭಾರತಕ್ಕೆ ಅನ್ವಯಿಸಿದರೆ ನಮ್ಮದೇ ನಾಟಕ ಎನಿಸುತ್ತದೆ. ನಮ್ಮ ಯಾವ ಮುಖ್ಯ ಲೇಖಕರು, ಕವಿಗಳು ಇಂಗ್ಲಿಷೇತರ ಯುರೋಪಿಯನ್ ಭಾಷೆ ಕಲಿಯಲಿಲ್ಲ. ಇಂಗ್ಲಿಷ್ ಮೂಲಕ ನಾವು ಬಹುಮಟ್ಟಿನ ಜ್ಞಾನ ಪಡೆದುಕೊಂಡಿದ್ದೇವೆ ಎಂದರು.
ಜಾತಿ ಪದ್ಧತಿ ಕಾನೂನು ಪ್ರಕಾರ ನಿಷೇಧವಾದರೂ ಇಂದಿಗೂ ಪ್ರತೀತಿಯಲ್ಲಿದೆ. ಭೌತಿಕ ಬದಲಾವಣೆಗಿಂತ ಮಾನಸಿಕ ಬದಲಾವಣೆ ಮುಖ್ಯ. ಇದು ಸಾಹಿತ್ಯದ, ಸೃಜನಶೀಲತೆಯ, ರಂಗಭೂಮಿಯ ಪ್ರಧಾನ ಕರ್ತವ್ಯ. ಇದು ಗೊತ್ತಿಲ್ಲದಿರುವ ‘ಯಬಡಾ’ಗಳೆಲ್ಲ ಏನೇನೋ ಹೇಳಿಕೆ ಕೊಡುತ್ತಿದ್ದಾರೆ. ‘ಎಲ್ಲರು ಧ್ವನಿ ಎತ್ತಬೇಕು’ ಎನ್ನುತ್ತಿದ್ದಾರೆ. ನಾವು ಪಕ್ಷದ ಪರವಾಗಿ ಮಾತನಾಡಬೇಕಾ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನಾಂಗವಾದ ಕೊನೆಗೊಳ್ಳುತ್ತಿದೆ, ಆದರೆ ಅದರ ಸಮರ್ಥಕರು ಇನ್ನೂ ಇದ್ದಾರೆ. ಈ ಹಿಂದೆ ಜನಾಂಗವಾದದ ವಿರುದ್ಧ ಹೋರಾಟ ಮಾಡಿದವರು ಈಗ ಶೋಷಕ ವರ್ಗಕ್ಕೆ ಸೇರಿದ್ದಾರೆ. ಈ ಪರಿಸ್ಥಿತಿ ಚಲನಶೀಲವಾಗಿದೆ. ಚಲನಶೀಲತೆಯಲ್ಲಿ ಆದರ್ಶವಾದಿ ಯುವ ಸಮೂಹ ಯಾವ ರೀತಿ ತ್ಯಾಗ ಮಾಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ, ‘ನಮ್ಮ ದೇಶದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ. ಅಂಬೇಡ್ಕರ್ ಮತ್ತು ಗಾಂಧೀಜಿ ಮಾರ್ಗಗಳನ್ನು ಮುಖಾಮುಖಿಯಾಗಿಸಿ, ಅವರನ್ನು ಪರಸ್ಪರ ವಿರೋಧಿಗಳನ್ನಾಗಿ ಮಾಡಲಾಗುತ್ತಿದೆ. ಇದು ರಾಜಕಾರಣದ ಬಿಕ್ಕಟ್ಟು. ನಮಗೆ ಗೊತ್ತಿಲ್ಲದೆ ಪುರೋಹಿತ ಶಾಹಿಯ, ಪಾಳೆಗಾರಿಕೆ ಪದ್ಧತಿಯ ಸೆಂಗೋಲ್ (ರಾಜದಂಡ) ಸಂಸತ್ತಿನಲ್ಲಿ ಕೂತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ವಿಶ್ವವಿದ್ಯಾಲಯದ ಪ್ರಾಧ್ಯಾಪಕ ನಿತ್ಯಾನಂದ ಬಿ.ಶೆಟ್ಟಿ, ‘ಕನ್ನಡದ್ದೇ ಸಂದರ್ಭದ ನಾಟಕದಂತೆ ಭಾಸವಾಗುತ್ತದೆ. ನಾಟಕಕ್ಕೆ ರಾಜಕೀಯವಾದ ಸಮಕಾಲೀನತೆ ಒದಗಿದೆ. ವರ್ಣಭೇದ ನೀತಿಯ ಕ್ರೌರ್ಯವನ್ನು ಹಿನ್ನೆಲೆಯಾಗಿಸಿಕೊಂಡು ರೂಪುಗೊಂಡಿದೆ’ ಎಂದು ತಿಳಿಸಿದರು.
ರಂಗ ನಿರ್ದೇಶಕಿ ಎಚ್.ಕೆ.ಶ್ವೇತಾರಾಣಿ, ಕೃತಿಕಾರ ನಟರಾಜ್ ಹೊನ್ನವಳ್ಳಿ, ವೈದ್ಯ ಬಸವರಾಜು ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.