ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಬಾರದ ವಿಶೇಷ ಅನುದಾನ; ಕಾಗದದಲ್ಲಿ ಉಳಿದ ‘ಆದರ್ಶ ಗ್ರಾಮ’

Published 20 ಸೆಪ್ಟೆಂಬರ್ 2023, 7:35 IST
Last Updated 20 ಸೆಪ್ಟೆಂಬರ್ 2023, 7:35 IST
ಅಕ್ಷರ ಗಾತ್ರ

ತುಮಕೂರು: ಸಂಸದರ ಆದರ್ಶ ಗ್ರಾಮ ಯೋಜನೆ ಹಾಳೆಯಲ್ಲಿಯೇ ಉಳಿದಿದ್ದು, ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ.

ಈ ಯೋಜನೆಯಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಯಾವುದೇ ವಿಶೇಷ ಅನುದಾನ ಕೊಡುತ್ತಿಲ್ಲ. ಬದಲಾಗಿ ನರೇಗಾ, 15ನೇ ಹಣಕಾಸು ಆಯೋಗದಡಿ ಬಂದ ಹಣ ಬಳಕೆ ಮಾಡಿಕೊಂಡು ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ. ಯೋಜನೆ ಕೇವಲ ನಾಮಕಾವಸ್ಥೆಗೆ ಮಾತ್ರ ಜಾರಿಗೆ ತರಲಾಗಿದೆ. ಗ್ರಾಮಗಳ ಆಯ್ಕೆ ಬಿಟ್ಟರೆ ಏನೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಹಲವು ಅಧಿಕಾರಿಗಳಿಗೆ ಈ ಯೋಜನೆ ಜಾರಿಯಲ್ಲಿ ಇರುವುದೇ ಮರೆತು ಹೋಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.

2019ರಿಂದ 2024ರ ಅವಧಿಗೆ ಜಿಲ್ಲೆಯಲ್ಲಿ ಒಟ್ಟು ಐದು ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಗುಬ್ಬಿ ತಾಲ್ಲೂಕಿನ ಮಾರಶೆಟ್ಟಿಹಳ್ಳಿ, ಕೊರಟಗೆರೆಯ ಕುರಂಕೋಟೆ, ಮಧುಗಿರಿಯ ಗಂಜಲಗುಂಟೆ, ತಿಪಟೂರಿನ ಅರಳಗುಪ್ಪೆ, ಚಿಕ್ಕನಾಯಕನಹಳ್ಳಿಯ ಗೋಡೆಕೆರೆ ಪಂಚಾಯಿತಿಗಳು ‘ಆದರ್ಶ’ ಯೋಜನೆಗೆ ಆಯ್ಕೆಯಾಗಿವೆ.

ಸಂಸದರು ಆಯ್ಕೆ ಮಾಡಿಕೊಂಡ ಗ್ರಾಮಗಳಲ್ಲಿ ಉದ್ಯೋಗ ಸೃಷ್ಟಿಗೆ ಕ್ರಮ ವಹಿಸುವುದು, ಸಾಮಾಜಿಕ ಸಮಸ್ಯೆಗಳ ನಿವಾರಣೆ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶ ಹೊಂದಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಳ್ಳಿಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.

ಈ ಯೋಜನೆ ಅನುಷ್ಠಾನ ಮಾಡಬೇಕಾದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಂದು ಉದ್ದೇಶ ಇಟ್ಟುಕೊಂಡು ಕೆಲಸ ನಿರ್ವಹಿಸಬೇಕಿದೆ. ಆದರೆ, ಆದರ್ಶ ಗ್ರಾಮ ಯೋಜನೆಗೆ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ತೋರಿಸದಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೂ ಪ್ರಮುಖ ಕಾರಣವಾಗಿದೆ.

ಯೋಜನೆ ಕೇವಲ ಗ್ರಾಮಗಳ ಆಯ್ಕೆಗೆ ಮಾತ್ರ ಸೀಮಿತವಾಗಿದೆ. ಇದುವರೆಗೆ ಆಯ್ಕೆಯಾದ ಗ್ರಾಮಗಳಲ್ಲಿ ಸಭೆ, ಸಮಾರಂಭಗಳು ಮಾತ್ರ ನಡೆದಿವೆ. ಇದನ್ನು ಹೊರೆತು ಪಡಿಸಿದರೆ ಬೇರೆ ಯಾವುದೇ ಕಾರ್ಯಗಳು ನಡೆದಿಲ್ಲ. ಈ ಐದು ಹಳ್ಳಿಗಳ ನಿವಾಸಿಗಳು ಗ್ರಾಮದ ಸಮಗ್ರ ಅಭಿವೃದ್ಧಿಯ ಕನಸು ಕಂಡಿದ್ದರು. ಆದರೆ ಅದು ಈಡೇರುವ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ.

ಆದರ್ಶ ಗ್ರಾಮಗಳ ಸರ್ವತೋಮುಖ ಬೆಳವಣಿಗೆಗಾಗಿ ಕೇಂದ್ರದಿಂದ ಪ್ರತ್ಯೇಕವಾದ ಅನುದಾನ ಬಿಡುಗಡೆಯಾದರೆ ಒಂದಿಷ್ಟು ಕೆಲಸಗಳು ನಡೆಯುತ್ತಿದ್ದವು. ಈ ಯೋಜನೆಯಡಿ ವಿಶೇಷ ಅನುದಾನ ತರುವಲ್ಲಿ ಸಂಸದರೂ ಆಸಕ್ತಿ ವಹಿಸಿದಂತೆ ಕಾಣುತ್ತಿಲ್ಲ. ನಿಗದಿತ ಅವಧಿ ಮುಗಿಯಲು ಇನ್ನೊಂದು ವರ್ಷ ಬಾಕಿಯಿದೆ. ಈ ಸಮಯದಲ್ಲಿ ಆಯ್ಕೆಯಾದ ಐದು ಗ್ರಾಮ ಪಂಚಾಯಿತಿಗಳಲ್ಲಿ ಯಾವೆಲ್ಲಾ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂಬುವುದನ್ನು ಕಾದು ನೋಡಬೇಕಿದೆ.

ಆದರ್ಶ ಗ್ರಾಮ ಯೋಜನೆಯಡಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಅನೇಕ ಯೋಜನೆಗಳ ಮೂಲಕ ಗ್ರಾಮಗಳಲ್ಲಿ ಜನರಿಗೆ ಕೆಲಸ ನೀಡಲಾಗುತ್ತಿದೆ. ವಿಶೇಷ ಅನುದಾನ ತರಲು ಕ್ರಮ ವಹಿಸಲಾಗುವುದು.
ಜಿ.ಎಸ್‌.ಬಸವರಾಜು ಸಂಸದರು

ಸಮಗ್ರ ಪ್ರಗತಿ ಸಾಧ್ಯವೆ

ಒಂದು ಹಳ್ಳಿಯನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ‘ಆದರ್ಶ ಗ್ರಾಮ’ ಯೋಜನೆ ರೂಪಿಸಲಾಗಿದ್ದು ಸಂಸದರ ಉಸ್ತುವಾರಿ ಇದ್ದರೆ ಒಂದು ಹಳ್ಳಿ ಸಮಗ್ರವಾಗಿ ಅಭಿವೃದ್ಧಿಯಾಗಿ ‘ಆದರ್ಶ’ವಾಗಲಿದೆ ಎಂದು ಉದ್ದೇಶ ಇಟ್ಟುಕೊಳ್ಳಲಾಗಿತ್ತು.

ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವುದು ಯೋಜನೆ ಮೂಲ ಉದ್ದೇಶ. ಕ್ಷೇತ್ರದ ವ್ಯಾಪ್ತಿಗೆ 8 ವಿಧಾನಸಭೆ ಕ್ಷೇತ್ರಗಳು ಇದ್ದು ತುಮಕೂರು ನಗರ ಗ್ರಾಮಾಂತರ ಹಾಗೂ ತುರುವೇಕೆರೆ ಕ್ಷೇತ್ರದಲ್ಲಿ ಯಾವುದೇ ಹಳ್ಳಿಯನ್ನೂ ಇನ್ನೂ ಆಯ್ಕೆ ಮಾಡಿಕೊಂಡಿಲ್ಲ. ಉಳಿದಂತೆ ಐದು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದರೂ ‘ಆದರ್ಶ’ದ ಪ್ರಗತಿ ಗೋಚರಿಸುತ್ತಿಲ್ಲ.

ಯೋಜನೆ ಆರಂಭದ ಸಮಯದಲ್ಲಿ ಪ್ರಗತಿ ಸಭೆಗಳು ನಡೆದ ಸಂದರ್ಭಗಳಲ್ಲಿ ಆದರ್ಶ ಗ್ರಾಮದ ಬಗ್ಗೆ ಚರ್ಚೆಗಳು ನಡೆದಿದ್ದವು.

‘ದಿಶಾ’ ಸಮಿತಿ ಸಭೆಯಲ್ಲೂ ಕೆಲವೊಮ್ಮೆ ಈ ವಿಚಾರ ಚರ್ಚೆಗೆ ಬಂದಿತ್ತು. ದಿನಗಳು ಕಳೆದಂತೆ ಆ ಬಗ್ಗೆ ಪ್ರಸ್ತಾಪವೇ ನಿಂತು ಹೋಗಿದೆ. ಸಾಕಷ್ಟು ಅಧಿಕಾರಿಗಳಿಗೆ ಅಂತಹದೊಂದು ಯೋಜನೆ ಇರುವುದೇ ಮರೆತು ಹೋಗಿದೆ. ನಿಧಾನವಾಗಿ ಈ ಯೋಜನೆ ಬಗ್ಗೆ ಚರ್ಚಿಸುವುದು ನಿಂತಿದ್ದು ಅಭಿವೃದ್ಧಿ ಚಟುವಟಿಕೆ ಕೈಗೊಳ್ಳುವುದು ಬಹುತೇಕ ಸ್ಥಗಿತಗೊಂಡಂತೆ ಕಾಣುತ್ತಿದೆ.

‘ಆದರ್ಶ ಗ್ರಾಮ’ಕ್ಕಾಗಿ ಕೇಂದ್ರ ಸರ್ಕಾರ ನಿರ್ದಿಷ್ಟ ಯೋಜನೆ ರೂಪಿಸಿ ಸ್ವಲ್ಪವಾದರೂ ಅನುದಾನ ಕೊಟ್ಟು ಉಳಿದಂತೆ ಇತರೆ ಯೋಜನೆಗಳಲ್ಲಿ ಬರುವ ಹಣವನ್ನು ಬಳಸಿಕೊಳ್ಳುವಂತೆ ಒಂದು ಕಟ್ಟುನಿಟ್ಟಿನ ಸೂಚನೆ ನಿರ್ದೇಶನವಿದ್ದರೆ ಯೋಜನೆ ಅನುಷ್ಠಾನ ಸರಿಯಾದ ದಾರಿಯಲ್ಲಿ ಸಾಗುತಿತ್ತು. ಅಂತಹ ಚೌಕಟ್ಟು ಇಲ್ಲವಾಗಿದ್ದು ವಿವಿಧ ಯೋಜನೆಗಳ ಹಣ ಬಳಸಿಕೊಳ್ಳುವ ಪ್ರಯತ್ನ ನಡೆದಿರುವುದು ದಾರಿ ತಪ್ಪಲು ಪ್ರಮುಖ ಕಾರಣವಾಗಿದೆ.

ಯಾವ ಯೋಜನೆಯಲ್ಲಿ ಹಣ ನೀಡಬೇಕು ಎಂಬುದು ಅಧಿಕಾರಿಗಳಿಗೂ ತಿಳಿಯದಾಗಿದೆ. ಗ್ರಾಮಗಳನ್ನು ಆಯ್ಕೆ ಮಾಡಿಕೊಂಡ ನಂತರ ಸಂಸದರೂ ಆಸಕ್ತಿ ವಹಿಸಿಲ್ಲ. ನಿರ್ದಿಷ್ಟ ಯೋಜನೆಗಳನ್ನು ರೂಪಿಸಿ ಯಾವ ಇಲಾಖೆ ಯೋಜನೆಯಿಂದ ಹಣ ನೀಡಬೇಕು ಎಂಬ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೆ ಸ್ವಲ್ಪ ಮಟ್ಟಿಗಾದರೂ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಸಾಧ್ಯವಾಗುತಿತ್ತು. ಅಂತಹ ನಿರ್ದಿಷ್ಟ ಚೌಕಟ್ಟು ರೂಪಿಸಿದ್ದರೆ ನೆರವಾಗುತಿತ್ತು. ಅಂತಹ ಪ್ರಯತ್ನ ನಡೆಯದೆ ಯೋಜನೆಗೆ ಹಿನ್ನಡೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT