ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿಯಲ್ಲಿ ಸುರಕ್ಷಿತ ಸಂಚಾರ ಮರೀಚಿಕೆ

ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಹುಳಿಯಾರು ಪಟ್ಟಣದ ಜನರು ಹೈರಾಣು
Last Updated 18 ಅಕ್ಟೋಬರ್ 2021, 6:56 IST
ಅಕ್ಷರ ಗಾತ್ರ

ಹುಳಿಯಾರು: ದಿನೇ ದಿನೇ ಬೆಳೆಯುತ್ತಿರುವ ಪಟ್ಟಣದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಆದರೆ, ಹೆದ್ದಾರಿ ಕಾಮಗಾರಿ ನನೆಗುದಿಗೆ ಬಿದ್ದಿದೆ. ಮತ್ತೊಂದೆಡೆ ಅವೈಜ್ಞಾನಿಕವಾಗಿ ನಿರ್ಮಾಣದ ಫಲವಾಗಿ ಜನರ ಸಂಕಷ್ಟ ಹೇಳತೀರದು. ಈ ಬಗ್ಗೆ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ.

ವಿಶಾಖಪಟ್ಟಣ–ಮಂಗಳೂರು ನಡುವೆ ಸಂಪರ್ಕ ಬೆಸೆಯುವ ಹೆದ್ದಾರಿ 234 ಹಾಗೂ ಬೀದರ್‌-ಶ್ರೀರಂಗಪಟ್ಟಣ 150ಎ ಹೆದ್ದಾರಿಗಳು ಪಟ್ಟಣದಲ್ಲಿ ಹಾದು ಹೋಗುತ್ತವೆ. 234ರ ವ್ಯಾಪ್ತಿಗೆ ಬರುವ ಶಿರಾದಿಂದ ಹುಳಿಯಾರುವರೆಗಿನ ಹೆದ್ದಾರಿ ಕಾಮಗಾರಿ ಕೈಗೊಳ್ಳಲಾಗಿದೆ.

ಪಟ್ಟಣದಲ್ಲಿ ರಸ್ತೆ ನಿರ್ಮಾಣ ಮಾಡಲು ಕೈಗೆತ್ತಿಕೊಂಡು ಮೂರು ವರ್ಷಗಳೇ ಸಂದಿವೆ. ಕಾಮಗಾರಿಯನ್ನು ಗುತ್ತಿಗೆ ಪಡೆದ ಡಿಆರ್‌ಎನ್‌ ರಸ್ತೆ ನಿರ್ಮಾಣ ಕಂಪನಿಗೆ ಪಟ್ಟಣದಲ್ಲಿ ವಾಹನ ಸವಾರರು ಪ್ರತಿದಿನ ಅನು ಭವಿ ಸುತ್ತಿರುವ ನರಕಯಾತನೆ ತಿಳಿಯದೇ ಹೋಗಿರುವುದು ದುರಂತವೇ ಸರಿ.

ಹೆದ್ದಾರಿಯ ಭಾಗವಾದ ಹುಳಿಯಾರು ಪಟ್ಟಣ ಹೊರ ವಲಯದ ಎಸ್‌ಎಲ್‌ಆರ್‌ ಬಂಕ್‌ನಿಂದ ಹೊಸದುರ್ಗ ವೃತ್ತದವರೆಗೆ ಒಂದಲ್ಲಾ ಒಂದು ಸಮಸ್ಯೆ ಕಾಡುತ್ತಲೇ ಇದೆ. ಈ ಬಂಕ್‌ ಹಾಗೂ ರಾಮಗೋಪಾಲ್‌ ಸರ್ಕಲ್‌ ಬಳಿ ಕಾಮಗಾರಿ ಅಪೂರ್ಣಗೊಂಡಿದೆ. ಜಲ್ಲಿಕಲ್ಲು ಹಾಗೂ ಜಲ್ಲಿ ಪುಡಿ ಹಾಕಿ ಹಾಗೆಯೇ ಬಿಡಲಾಗಿರುವುದರಿಂದ ಬರೀ ದೂಳು ಮತ್ತು ಕೆಸರಿನ ಮಜ್ಜನ ಜನರಿಗೆ ಸಲೀಸಾಗಿ ಹೋಗಿದೆ.

2017ರ ಡಿಸೆಂಬರ್ ತಿಂಗಳಿನಲ್ಲಿ 234ರ ಶಿರಾ –ಹುಳಿಯಾರು ಹೆದ್ದಾರಿ ಕಾಮಗಾರಿ ಆರಂಭಗೊಂಡು ಕುಂಟುತ್ತಾ ಸಾಗಿದೆ. 2018ರ ಅಕ್ಟೋಬರ್ ತಿಂಗಳಿನಲ್ಲಿ ಈ ಕಾಮಗಾರಿ ಹುಳಿಯಾರು ಪಟ್ಟಣ ತಲುಪಿತು. ತಲುಪಿದ ಭರದಲ್ಲಿ ಗುತ್ತಿಗೆ ಪಡೆದಿರುವ ಡಿಆರ್‌ಎನ್ ಸಂಸ್ಥೆ ಕೆಲವೇ ದಿನಗಳಲ್ಲಿ ಕಾಮಗಾರಿ ಮುಗಿಸುವ ನೆಪವೊಡ್ಡಿ ಪಟ್ಟಣದ ರಸ್ತೆಯನ್ನು ಕಿತ್ತು ಹಾಕಿತು. ನಂತರ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ಸಾಗಿತು.

ಚರಂಡಿಗಳನ್ನು ಯಾವುದೇ ಮುಂದಾಲೋಚನೆಯಿಲ್ಲದೆ ನಿರ್ಮಾಣ ಮಾಡಿದ ಕಾರಣ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲಿಯೇ ನಿಲ್ಲುತ್ತದೆ. ಕಳೆದ ಒಂದೂವರೆ ವರ್ಷಗಳಿಂದ ರಾಮಗೋಪಾಲ್‌ ಸರ್ಕಲ್‌ ಬಳಿ ಮಳೆ ಬಂದರೆ ಕೆರೆಯೇ ನಿರ್ಮಾಣವಾಗುತ್ತದೆ. ಅಲ್ಪಸ್ವಲ್ಪ ಮಳೆ ಬಂದರೂ ಸಾಕು ನೀರಿನ ಮಡುವೇ ನಿರ್ಮಾಣವಾಗಿ ವಾಹನ ಸವಾರರು ಸಂಚಾರಕ್ಕೆ ಪರದಾಡುವಂತಾಗುತ್ತದೆ.

ವಾಹನಗಳ ಸಂಚಾರವೂ ಹೆಚ್ಚಿರುವುದರಿಂದ ನೀರಿನಲ್ಲಿ ಕಂಡರಿಯದ ಗುಂಡಿಗಳಲ್ಲಿ ದ್ವಿಚಕ್ರವಾಹನಗಳ ಸವಾರರು ಬಿದ್ದು ಎದ್ದು ಹೋಗುವಂತಾಗಿದೆ. ಹೆಚ್ಚು ಮಳೆ ಬಂದರಂತೂ ಸುಮಾರು ಐದಾರು ಅಡಿ ನೀರು ನಿಲ್ಲುವುದರಿಂದ ದ್ವಿಚಕ್ರವಾಹನ ಸವಾರರು ಬಿದ್ದು ಗಾಯಗೊಂಡಿದ್ದರೆ ಎಷ್ಟೋ ಎಂಜಿನ್‌ಗಳು ನಿಷ್ಕ್ರಿಯ ಕೂಡ ಆಗಿವೆ. ಇನ್ನೂ ಮಳೆ ನೀರಿನ ಜತೆ ಚರಂಡಿಯ ಕಲುಷಿತ ನೀರು ಹರಿದು ಬರುವುದರಿಂದ ನೀರಿ ನಲ್ಲಿ ಚಲಿಸುವ ದ್ವಿಚಕ್ರವಾಹನ ಸವಾರರಿಗೆ ರೋಗರುಜಿನ ತಟ್ಟಿದೆ. ವಾರಗಟ್ಟಲೇ ನಿಂತ ಜಾಗದಲ್ಲೇ ನೀರು ನಿಲ್ಲುತ್ತಿದ್ದು ಸೊಳ್ಳೆಗಳ ಕಾಟ ಮತ್ತು ಕೊಳಚೆ ನೀರಿನ ವಾಸನೆ
ತಡೆಯದಾಗಿದೆ.

ಹೆದ್ದಾರಿ ಪ್ರಾಧಿಕಾರದ ಯೋಜನೆಯಂತೆ ಹೊಸದುರ್ಗ ಸರ್ಕಲ್‌ ಬಳಿ (ಕನಕದಾಸ ವೃತ್ತ) ನಿರ್ಮಿಸಿರುವ ವೃತ್ತ ಸಂಪೂರ್ಣ ಅವೈಜ್ಞಾನಿಕವಾಗಿದೆ.

ಇಲ್ಲಿ ಮೂರು ಕಡೆಗೆ ವಾಹನಗಳು ಸಂಚರಿಸುವುದರಿಂದ ವೃತ್ತಾಕಾರದಲ್ಲಿ ರಸ್ತೆ ನಿರ್ಮಾಣ ಮಾಡಬೇಕಿತ್ತು. ಆದರೆ, ಹೊಸದುರ್ಗ ಕಡೆಯಿಂದ ಬರುವ ವಾಹನಗಳಿಗೆ ನೇರವಾಗಿ ಹೋಗಲು ಅವಕಾಶ ಕಲ್ಪಿಸಲಾಗಿದೆ. ಪೊಲೀಸ್‌ ಠಾಣೆ ಕಡೆಯಂದ ಬಂದ ವಾಹನಗಳು ಹಿರಿಯೂರು ಕಡೆ ತಿರುಗಿ ಹೋಗಲು ನೇರ ಅವಕಾಶ ಮಾಡಿ ಕೊಡಲಾಗಿದೆ. ಇದರಿಂದ ಎರಡು ಕಡೆಯ ವಾಹನಗಳು ಒಮ್ಮೆಲೇ ಬಂದರೆ ಅಪಘಾತ ಕಟ್ಟಿಟ್ಟಬುತ್ತಿ. ಈ ಸ್ಥಳದಲ್ಲಿ ಹೆಚ್ಚು ವಾಹನಗಳ ಓಡಾಟ ಇರುವುದರಿಂದ ಸಾಕಷ್ಟು ಅಪಘಾತಗಳು ಸಂಭವಿಸಿವೆ.

‘ಈಗಾಗಲೇ ಹಲವಾರು ಬಾರಿ ಹೆದ್ದಾರಿ ಕಾಮಗಾರಿಯ ಗುತ್ತಿಗೆ ಪಡೆದಿರುವ ಕಂಪನಿಗೆ ಸಮಸ್ಯೆಗಳ ಬಗ್ಗೆ ತಿಳಿವಳಿಕೆ ನೀಡಲಾಗಿದೆ. ಅಲ್ಲದೆ ಮುಖ್ಯ ಎಂಜಿನಿಯರ್‌ಗಳ ಸಭೆಯಲ್ಲೂ ಚರ್ಚಿಸಲಾಗಿದೆ. ಕಂಪನಿಯು ಕೆಲವು ತಾಂತ್ರಿಕ ಸಮಸ್ಯೆಗಳ ನೆಪವೊಡ್ಡಿ ಕಾಲಹರಣ ಮಾಡುತ್ತಿದೆ. ಆದಾಗ್ಯೂ ಕೊನೆಯ ಎಚ್ಚರಿಕೆ ನೀಡಲಾಗಿದ್ದು ಕಾಮಗಾರಿಯನ್ನು ತ್ವರಿತಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡುವುದಾಗಿ ತಿಳಿಸಿದ್ದಾರೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಶಿರಾ ಉಪ ವಿಭಾಗದ ಸಹಾಯಕ ಎಂಜಿನಿಯರ್‌ಮೋಹನ್‌ಕುಮಾರ್‌ ತಿಳಿಸಿದರು.

ದೂಳು ಹಾವಳಿ

ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ರಸ್ತೆ ಕಿತ್ತು ಹಾಕಿರುವುದರಿಂದ ದೂಳು ತುಂಬಿಕೊಳ್ಳುತ್ತದೆ. ಕಣ್ಣಿಗೆ ದೂಳು ತುಂಬಿಕೊಂಡು ಎದುಗಡೆ ಬರುವ ವಾಹನಗಳು ಕಾಣಿಸದೆ ಡಿಕ್ಕಿ ಸಂಭವಿಸಿದೆ. ಈ ಸಮಸ್ಯೆಗೆ ಪರಿಹಾರ ಎಂಬುದು ಮರೀಚಿಕೆಯಾಗಿದೆ.

ಟೈಲರ್‌ ಸೂರಪ್ಪ,ಹುಳಿಯಾರು.

ರಸ್ತೆ ಅಭಿವೃದ್ಧಿ ನನೆಗುದಿಗೆ

ಬಂಕ್‌ ಸರ್ಕಲ್‌ ಬಳಿ ಟೀ ಅಂಗಡಿ, ಹೋಟೆಲ್‌, ಗ್ಯಾರೇಜ್‌ ಸೇರಿದಂತೆ ಅನೇಕ ಅಂಗಡಿಗಳು ಸ್ಥಾಪಿತವಾಗಿವೆ. ಹಾಗೆಯೇ ಪೆಟ್ರೊಲ್‌ ಬಂಕ್‌ ಕೂಡ ಇರುವುದರಿಂದ ಜನರು ಇಲ್ಲಿಗೆ ಹೆಚ್ಚಾಗಿ ಬರುತ್ತಾರೆ. ಇಲ್ಲಿ ರಸ್ತೆ ನಿರ್ಮಾಣ ನನೆಗುದಿಗೆ ಬಿದ್ದಿದೆ. ವಾಹನ ಚಾಲಕರು ನಿಯಂತ್ರಣ ತಪ್ಪಿ ಅವಘಡಗಳು ಸಂಭವಿಸುತ್ತಿವೆ. ತ್ವರಿತವಾಗಿ ಇದಕ್ಕೆ ಪರಿಹಾರ ಕೈಗೊಳ್ಳಬೇಕು.

ಗಾಳಿದಿಬ್ಬ ಜಯಣ್ಣ, ಹುಳಿಯಾರು.

ಮನೆಗಳಿಗೆ ನುಗ್ಗುವ ನೀರು

ರಾಮಗೋಪಾಲ್‌ ಸರ್ಕಲ್‌ ಬಳಿ ರಸ್ತೆ ನಿರ್ಮಾಣ ರಸ್ತೆಯ ಒಂದು ಕಡೆ ಚರಂಡಿಯನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ. ಇದರಿಂದ ನೀರು ಮುಂದೆ ಹರಿದು ಹೋಗುತ್ತಿಲ್ಲ. ಇದರಿಂದ ನೀರು ನಿಲ್ಲುವ ಭಾಗದ ಅಂಗಡಿಗಳು ಹಾಗೂ ಮನೆಗಳಿಗೆ ಮಳೆ ಬಂದಾಗ ನೀರು ನುಗ್ಗುತ್ತಿದೆ. ಆ ವೇಳೆ ಜನರು ಸಂಕಷ್ಟ ಹೇಳತೀರದು.

ಚನ್ನಕೇಶವ,ಮುಖ್ಯಸ್ಥ, ಕಾಮನಬಿಲ್ಲು ಫೌಂಡೇಶನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT