ಶನಿವಾರ, ಜನವರಿ 25, 2020
22 °C
ಮಲ್ಲಿಗೆರೆ ಗ್ರಾಮ ಪಂಚಾಯಿತಿ ದೊಡ್ಡಪಾಳ್ಯ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅವಘಡ

ಕುಸಿದ ಶಾಲೆ ಚಾವಣಿ: ವಿದ್ಯಾರ್ಥಿಗಳು ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಳಿಯಾರು: ಮಲ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಪಾಳ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕೊಠಡಿಯ ಕಂಬ ಹಾಗೂ ಚಾವಣಿ ಗುರುವಾರ ಕುಸಿದು ಬಿದ್ದು ಮಕ್ಕಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶಾಲೆಯಲ್ಲಿ 1ರಿಂದ 5 ನೇ ತರಗತಿವರೆಗೆ ಸುಮಾರು 20 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆಯಲ್ಲಿ ಇಬ್ಬರು ಶಿಕ್ಷಕರಿರುವ ಕಾರಣ ಸುಮಾರು 50 ವರ್ಷಗಳ ಹಳೆಯ 2 ಹಂಚಿನ ಕೊಠಡಿಗಳನ್ನು ಬಳಸಿ ಕೊಳ್ಳಲಾಗುತ್ತಿತ್ತು. ಇತ್ತೀಚೆಗೆ 2 ಕೊಠಡಿಗಳು ಸಹ ಶಿಥಿಲಗೊಂಡಿದ್ದವು. ಆದರೆ ಹೊಸ ಕೊಠಡಿಗಳ ನಿರ್ಮಾಣವಾಗದ ಕಾರಣ ಅದೇ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ತರಗತಿ ನಡೆಯುತ್ತಿತ್ತು.

ಗುರುವಾರ ಮುಂಜಾನೆ 10 ಗಂಟೆ ಎಂದಿನಂತೆ ಶಾಲೆಗೆ ಕೆಲ ವಿದ್ಯಾರ್ಥಿಗಳು ಬಂದಿದ್ದರು. ಕೊಠಡಿಗಳನ್ನು ಸ್ವಚ್ಛಗೊಳಿಸುತ್ತಾ ಹೊರಗಿನ ಹಜಾರದಲ್ಲಿ ಕಸ ಗುಡಿಸುವ ವೇಳೆ ಕಟ್ಟಡದ ಹಜಾರಕ್ಕೆ ಅಳವಡಿಸಿದ್ದ ಕಂಬ ಒಮ್ಮೆಲೇ ಕುಸಿದಿದೆ. ಗಾಬರಿಗೊಂಡ ವಿದ್ಯಾರ್ಥಿಗಳು ದೂರ ಓಡಿದ್ದಾರೆ. ತಕ್ಷಣ ಮೇಲ್ಚಾವಣಿ ಕುಸಿದು ಹೆಂಚು ನೆಲಕ್ಕುರುಳಿವೆ. ವಿದ್ಯಾರ್ಥಿಗಳು ಸ್ವಲ್ಪ ಎಚ್ಚರಿಕೆ ವಹಿಸದಿದ್ದರೆ ದೊಡ್ಡ ಅನಾಹುತವೇ ನಡೆದು ಹೋಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಧಿಕಾರಿಗಳಿಗೆ ಪೋಷಕರ ತರಾಟೆ: ವಿಷಯ ತಿಳಿದು ಸ್ಥಳಕ್ಕೆ ಬಂದ ಬಿಇಒ ಕಾತ್ಯಾಯಿನಿ ಅವರನ್ನು ಗ್ರಾಮಸ್ಥರು ಹಾಗೂ ಪೊಷಕರು ತರಾಟೆಗೆ ತೆಗೆದುಕೊಂಡರು. ನಿಮ್ಮ ಇಲಾಖೆ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ. ಹಲವು ವರ್ಷಗಳಿಂದ ಶಾಲಾ ಕೊಠಡಿಯ ಅವ್ಯವಸ್ಥೆ ಬಗ್ಗೆ ಮನವಿ ಸಲ್ಲಿಸಿದ್ದರೂ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರು.

ಯಾವುದೇ ಕಾರಣಕ್ಕೂ ಶಿಥಿಲಗೊಂಡಿರುವ ಕಟ್ಟಡದಲ್ಲಿ ನಮ್ಮ ಮಕ್ಕಳನ್ನು ಕುಳ್ಳುರಿಸುವುದಾದರೇ ಶಾಲೆಗೆ ಕಳುಹಿಸುವುದಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ್‌ ತಿಳಿಸಿದರು. ಕೊನೆಗೆ ಪೋಷಕರೇ ಸೇರಿ ಶಾಲಾವರಣದಲ್ಲಿ ಶಾಮಿಯಾನದ ವ್ಯವಸ್ಥೆ ಮಾಡಿದರು. ಆದರೆ ಶಾಮಿಯಾನದ ಕೆಳಗೆ ವಿದ್ಯಾರ್ಥಿಗಳನ್ನು ಕೂರಿಸುವ ಅವಕಾಶವಿಲ್ಲ ಎಂದು ಬಿಇಒ ತಿಳಿಸಿದಾಗ ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ದರು. ಕಟ್ಟಡ ಮಣ್ಣಿನಿಂದ ನಿರ್ಮಿಸಲಾಗಿದ್ದು ಕಂಬಗಳು ಮಳೆಗೆ ಸಂಪೂರ್ಣ ಹಾಳಾಗಿರುವ ಕಾರಣ ಇಂತಹ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ತಾಲ್ಲೂಕಿನ ಕೆಲ ಶಾಲೆಗಳ ಕೊಠಡಿಗಳು ಶಿಥಿಲಗೊಂಡಿರುವ ಬಗ್ಗೆ ಭಾವಚಿತ್ರ ಸಮೇತ ಜಿಲ್ಲಾ ಉಪನಿರ್ದೇಶಕರಿಗೆ ಕಳುಹಿಸಲಾಗಿದೆ. ಆ ಪಟ್ಟಿಯಲ್ಲಿ ಈ ಶಾಲೆ ಕೊಠಡಿಯೂ ಸೇರಿದೆ. ಈಗಾಗಲೇ ದುರಸ್ತಿಗೆ ₹ 1.5 ಲಕ್ಷ ಮಂಜೂರಾಗಿದ್ದು, ಶೀಘ್ರವೇ ಕೊಠಡಿ ದುರಸ್ತಿ ಮಾಡಿಸಲಾಗುವುದು ಎಂದು ಚಿಕ್ಕನಾಯಕನಹಳ್ಳಿ ಬಿಇಒ ಕಾತ್ಯಾಯಿನಿ ಹೇಳಿದರು.

ಶಾಲಾ ಕೊಠಡಿ ಕುಸಿದಿದೆ ಎಂಬ ಮಾಹಿತಿ ಅರಿತು ಸ್ಥಳ ಪರಿಶೀಲನೆ ನಡೆಸಿದ್ದೇನೆ. ಕೊಠಡಿ ಸ್ಥಿತಿಯನ್ನು ಜಿಲ್ಲಾ ಉಪನಿರ್ದೇಶಕರಿಗೆ ಮಾಹಿತಿ ನೀಡದ್ದೇನೆ. 2 ಕೊಠಡಿಗಳು ಶಿಥಿಲವಾಗಿರುವ ಕಾರಣ ಪಕ್ಕದಲ್ಲಿರುವ ಅಂಗನವಾಡಿ ಕಟ್ಟಡದಲ್ಲಿ ಮಕ್ಕಳಿಗೆ ಬೋಧನೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತಹಶೀಲ್ದಾರ್ ಬಿ.ತೇಜಸ್ವಿನಿ ನುಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು