ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರಿಗೆ ಪ್ರಧಾನಿ ಮೋದಿ ಭೇಟಿ: ಇಂದು ಮದ್ಯ ಮಾರಾಟ ನಿಷೇಧ

ಬುಧವಾರ ನಡೆದ ರಿಹರ್ಸಲ್‌ನಲ್ಲಿ ಭದ್ರತಾ ಪಡೆ, ಪೊಲೀಸರು ಭಾಗಿ
Last Updated 2 ಜನವರಿ 2020, 1:11 IST
ಅಕ್ಷರ ಗಾತ್ರ

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಜನವರಿ2 ರಂದು ತುಮಕೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಹಾದು ಹೋಗುವ ರಸ್ತೆಗಳಲ್ಲಿ ರಿಹರ್ಸಲ್(ತಾಲೀಮು) ನಡೆಸಲಾಯಿತು.

ಭದ್ರತಾ ಪಡೆ ಮತ್ತು ಪೊಲೀಸರು ಬುಧವಾರ ತುಮಕೂರು ವಿಶ್ವವಿದ್ಯಾಲಯ ಆವರಣದಲ್ಲಿರುವ ಹೆಲಿಪ್ಯಾಡ್‌ನಿಂದ ಬಿ.ಎಚ್.ರಸ್ತೆ ಹಾಗೂ ಎನ್‌.ಎಚ್‌.4 ರಸ್ತೆಯ ಮೂಲಕಸಿದ್ಧಗಂಗಾ ಮಠಕ್ಕೆ ಹಾಗೂ ಮಠದಿಂದ ಜೂನಿಯರ್ ಕಾಲೇಜು ಆವರಣದವರೆಗೆ ಝೀರೋ ಟ್ರಾಫಿಕ್‌ನಲ್ಲಿ ರಿಹರ್ಸಲ್ ನಡೆಸಿದರು. ಗುರುವಾರವೂ ಇದೇ ರೀತಿ ಪ್ರಧಾನಿ ಝೀರೋ ಟ್ರಾಫಿಕ್‌ನಲ್ಲಿ ಸಂಚರಿಸಲಿದ್ದಾರೆ.

ರಿಹರ್ಸಲ್‌ನಲ್ಲಿ 20ಕ್ಕೂ ಅಧಿಕ ಗುಂಡು ನಿರೋಧಕ ವಾಹನಗಳು ಮತ್ತು ಆ್ಯಂಬುಲೆನ್ಸ್ಭಾಗವಹಿಸಿದ್ದವು. ಎಸ್‌ಪಿಜಿ ತಂಡ ಮತ್ತು ಇತರ ಭದ್ರತಾ ಪೊಲೀಸರು ವ್ಯಾಪಕ ಭದ್ರತೆ ಮತ್ತು ಕಣ್ಗಾವಲು ವ್ಯವಸ್ಥೆ ಕೈಗೊಂಡಿದ್ದಾರೆ.

ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ಪ್ರಧಾನಿ, ಬೆಂಗಳೂರಿನಿಂದ ಸೇನಾ ಹೆಲಿಕಾಫ್ಟರ್‌ನಲ್ಲಿ ಮಧ್ಯಾಹ್ನ 2.15ಕ್ಕೆ ತುಮಕೂರಿಗೆ ಆಗಮಿಸುವರು. ನಂತರ ಪ್ರಧಾನಿ ಸಿದ್ಧಗಂಗಾ ಮಠಕ್ಕೆ ಗುಂಡು ನಿರೋಧಕ ಕಾರಿನಲ್ಲಿ ಪ್ರಯಾಣಿಸುವರು. ಅದಕ್ಕಾಗಿ ಹಲವು ಗುಂಡು ನಿರೋಧಕ ಕಾರುಗಳು ಈಗಾಗಲೇ ತುಮಕೂರು ತಲುಪಿವೆ.

ಎಲ್ಲೆಡೆ ಹದ್ದಿನ ಕಣ್ಣು:ಭದ್ರತಾ ಪಡೆಗಳು, ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಮಾಡಿದ್ದು, ನಗರದಲ್ಲಿ ಒಂದು ವಾರದಿಂದಲೇ ಹದ್ದಿನ ಕಣ್ಣಿಡಲಾಗಿದೆ. ನವದೆಹಲಿಯಿಂದ ಎಸ್‌ಪಿಜಿ ತಂಡ ನಾಲ್ಕು ದಿನಗಳ ಹಿಂದೆಯೇ ತುಮಕೂರಿಗೆ ಬಂದು ವೇದಿಕೆ, ಸಭಾಂಗಣ ನಿರ್ಮಾಣದ ಸುತ್ತ ಸತತ ಪರಿಶೀಲನೆ ನಡೆಸುತ್ತಿದೆ. ಮೈದಾನವನ್ನು ಭದ್ರತಾ ಪಡೆಗಳು ಸುಪರ್ದಿಗೆ ಪಡೆದಿವೆ. ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸುತ್ತಿವೆ. ಮೈದಾನದ ಸಮೀಪ ರಸ್ತೆಗಳಿಗೆ ಸಾರ್ವಜನಿಕರು ಇಳಿಯದಂತೆ ತಡೆಯುವ ನಿಟ್ಟಿನಲ್ಲಿ ಪಾದಚಾರಿ ಮಾರ್ಗದ ಬದಿಗಳಲ್ಲಿ ತಡೆ ಬೇಲಿ ಹಾಕಲಾಗಿದೆ.

ಇಂದು ಮದ್ಯ ಮಾರಾಟ ನಿಷೇಧ:ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಮತ್ತು ಸುರಕ್ಷತೆ ಕಾಪಾಡಲು ಜ.2ರಂದು ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12ರವರೆಗೆ ಕೆ.ಎಸ್.ಬಿ.ಸಿ.ಎಲ್ ಡಿಪೋ ಹೊರತು ಪಡಿಸಿ ಪಾಲಿಕೆ ವ್ಯಾಪ್ತಿಯ ಎಲ್ಲಾ ಮದ್ಯದಂಗಡಿಗಳಲ್ಲಿ ಮಾರಾಟ ನಿಷೇಧಿಸಲಾಗಿದೆ.

ಮೋದಿ ಭೇಟಿ, ನಿರ್ಗಮನ

ಪ್ರಧಾನಿ ನರೇಂದ್ರ ಮೋದಿ ಜ.2 ರಂದು ಮಧ್ಯಾಹ್ನ 1.30ಕ್ಕೆ ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.

2.10ಕ್ಕೆ ತುಮಕೂರು ಹೆಲಿಪ್ಯಾಡ್‌ಗೆ ಆಗಮನ

2.30ಕ್ಕೆ ರಸ್ತೆ ಮೂಲಕ ಸಿದ್ಧಗಂಗಾ ಮಠಕ್ಕೆ ಭೇಟಿ.

3.20ಕ್ಕೆ ಸಿದ್ಧಗಂಗಾ ಮಠದಿಂದ ನಿರ್ಗಮನ.

3.30 ರಿಂದ 5ರವರೆಗೆ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಕೃಷಿ ಕರ್ಮಣ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ.

5.05ಕ್ಕೆ ಕಾರ್ಯಕ್ರಮದಿಂದ ನಿರ್ಗಮನ.

5.20 ಕ್ಕೆ ತುಮಕೂರು ಹೆಲಿಪ್ಯಾಡ್‌ನಿಂದ ನಿರ್ಗಮನ.

5.55ಕ್ಕೆ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮನ.

6.20ಕ್ಕೆ ಬೆಂಗಳೂರು ಡಿಆರ್‌ಡಿಒ ಕಾರ್ಯಕ್ರಮಕ್ಕೆ ಆಗಮನ.

7.30 ರಿಂದ ರಾಜಭವನದಲ್ಲಿ ವಾಸ್ತವ್ಯ.

ಪ್ರಧಾನಿ ಕಾರ್ಯಕ್ರಮ

ಪ್ರಧಾನಿ ಮೋದಿ ಜ.2 ರಂದು ಮಧ್ಯಾಹ್ನ ತುಮಕೂರಿಗೆ ಆಗಮಿಸಿ ಮೊದಲು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯ ಗದ್ಧುಗೆ ದರ್ಶನ ಪಡೆಯಲಿದ್ದಾರೆ. ನಂತರ ಮಠದ ಮಕ್ಕಳ ಜತೆ ಸಂವಾದ ನಡೆಸಿ ಶ್ರೀಗಳಿಂದ ಆಶೀರ್ವಾದ ಪಡೆಯಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಡಾ.ಶಿವಕುಮಾರ ಸ್ವಾಮೀಜಿ ವಸ್ತು ಸಂಗ್ರಹಾಲಯಕ್ಕೆ ಶಂಕುಸ್ಥಾಪನೆ ಮತ್ತು ಮಠದ ಆವರಣದಲ್ಲಿ ಬಿಲ್ವಪತ್ರೆ ಗಿಡ ನೆಡಲಿದ್ದಾರೆ. ನಂತರ ಅಲ್ಲಿಂದ ರಸ್ತೆ ಮೂಲಕ ಸಂಜೆ 4ಕ್ಕೆ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಕೃಷಿ ಕರ್ಮಣ್ಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಭಾಗವಹಿಸಲಿದ್ದಾರೆ.

ಬಂದೋಬಸ್ತ್‌ಗೆ 3 ಸಾವಿರ ಪೊಲೀಸರು!

ನರೇಂದ್ರ ಮೋದಿ ಅವರ ಕಾವಲಿನ ಭದ್ರತೆಯಲ್ಲಿ ಲೋಪಗಳೇ ಆಗದಂತೆ ತಡೆಯಲು ರಾಜ್ಯದ ಮೂರು ಸಾವಿರ ಪೊಲೀಸರು ಕಣ್ಗಾವಲಾಗಿ ಕಾಯುತ್ತಿದ್ದಾರೆ.

ಪ್ರಧಾನಿ ಅವರು ತುಮಕೂರು ವಿಶ್ವವಿದ್ಯಾನಿಲಯ ಆವರಣದ ಹೆಲಿಪ್ಯಾಡ್‌ನಿಂದ ಸಿದ್ಧಗಂಗಾ ಮಠಕ್ಕೆ ಹೋಗುವ ದಾರಿ ಹಾಗೂ ಮಠದಿಂದ ಜೂನಿಯರ್‌ ಕಾಲೇಜು ಮೈದಾನಕ್ಕೆ ಬರುವ ಬಿ.ಎಚ್‌.ರಸ್ತೆಯುದ್ದಕ್ಕೂ ಪೊಲೀಸರ ಸರ್ಪಗಾವಲು ಹಾಕಲಾಗಿದೆ.

‘ತುಮಕೂರು ಜಿಲ್ಲೆಯಲ್ಲಿನ 41 ಠಾಣೆಗಳಲ್ಲಿ 2,250 ಪೊಲೀಸರು ಇದ್ದಾರೆ. ಜಿಲ್ಲಾ ಪೊಲೀಸ್‌ ಇಲಾಖೆ ಮತ್ತು ಹೊರ ಜಿಲ್ಲೆಗಳಿಂದ ಬಂದಿರುವ ಪೊಲೀಸರನ್ನು ಸೇರಿಸಿ ಅಂದಾಜು 3,000 ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಪೊಲೀಸ್‌ ಇಲಾಖೆಯ ಕೇಂದ್ರ ವಲಯ ವ್ಯಾಪ್ತಿಯ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರದಿಂದಲೂ ಪೊಲೀಸ್‌ ದಳ ನಗರಕ್ಕೆ ಬಂದಿದೆ. ಇದಲ್ಲದೆ ಬೆಳಗಾವಿ, ಉಡುಪಿಯಿಂದಲೂ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಮೇಲ್ವಿಚಾರಣೆಗಾಗಿ ಬಂದ ನೆರೆ ಜಿಲ್ಲೆಗಳ ಎಸ್ಪಿಗಳು: ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ, ಕೆ.ಜಿ.ಎಫ್‌.ನ ನಾಲ್ವರು ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ಕರೆಸಿಕೊಂಡು ಭದ್ರತಾ ಮೇಲ್ವಿಚಾರಣೆಗಾಗಿ ನಿಯೋಜಿಸಲಾಗಿದೆ. ಬೆಂಗಳೂರು ನಗರದಿಂದಲೂ ಒಬ್ಬರು ಹೆಚ್ಚುವರಿ ಎಸ್ಪಿ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT