ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಶಿರಾ ರಸ್ತೆ ಬಂದ್; ಜನರ ಆಕ್ರೋಶ

ಪಾರ್ಯಾಯ ಮಾರ್ಗ ರೂಪಿಸದೆ ಒಮ್ಮೆಲೆ ರಸ್ತೆ ಸಂಚಾರ ಬಂದ್
Published 15 ಮೇ 2024, 4:27 IST
Last Updated 15 ಮೇ 2024, 4:27 IST
ಅಕ್ಷರ ಗಾತ್ರ

ತುಮಕೂರು: ನಗರದ ಅಮಾನಿಕೆರೆ ಕೋಡಿ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿ ಸಲುವಾಗಿ ಶಿರಾ ಗೇಟ್ ರಸ್ತೆ ಬಂದ್‌ ಮಾಡಿದ್ದು, ದಿನದಿಂದ ದಿನಕ್ಕೆ ಜನರ ಪರದಾಟ ಹೆಚ್ಚುತ್ತಿದೆ. ಜಿಲ್ಲಾ ಆಡಳಿತದ ಹುಚ್ಚಾಟಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿವೇಚನೆ, ಮುಂದಾಲೋಚನೆ ಇಲ್ಲದೆ ಮಳೆಗಾಲದಲ್ಲಿ ರಸ್ತೆ ಸಂಚಾರ ಸ್ಥಗಿತಗೊಳಿಸಿದ್ದು, ಆಗುತ್ತಿರುವ ತೊಂದರೆಗೆ ಯಾರು ಹೊಣೆ ಎಂದು ಪ್ರಶ್ನಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲವಾಗಿದ್ದಾರೆ. ಸಮಸ್ಯೆಗಳಿಗೆ ಸ್ಪಂದನೆ ಇಲ್ಲವಾಗಿದೆ. ಇಂತಹ ಅವ್ಯವಸ್ಥೆಗೆ ಯಾರನ್ನು ದೂರಬೇಕು ಎಂದು ಕೇಳುತ್ತಿದ್ದಾರೆ.

ಈಗ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಜನಪ್ರತಿನಿಧಿಗಳು, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪರ್ಯಾಯ ಮಾರ್ಗಗಳನ್ನು ರೂಪಿಸದೆ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದೆ ಏಕಾಏಕಿ ರಸ್ತೆ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ರಸ್ತೆ ಮುಚ್ಚುವ ಸಮಯದಲ್ಲಿ ಕನಿಷ್ಠ ಕಾಳಜಿಯಾದರೂ ಜಿಲ್ಲಾಧಿಕಾರಿಗೆ ಬೇಡವೆ? ಜನರ ಸ್ಥಿತಿ ಏನಾಗುತ್ತದೆ ಎಂಬ ಮುಂದಾಲೋಚನೆ ಮಾಡಿದ್ದಾರೆಯೇ? ಇಂತಹ ಹುಚ್ಚಾಟ ನಡೆಸಿದರೆ ಏನು ಮಾಡಬೇಕು? ಎಂದು ಸಾರ್ವಜನಿಕವಾಗಿ ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಜಿಲ್ಲಾ ಆಡಳಿತದ ಬಳಿ ಯಾವುದೇ ಉತ್ತರ ಇಲ್ಲವಾಗಿದೆ.

ಶಿರಾ, ಕೊರಟಗೆರೆ, ಮಧುಗಿರಿ, ಪಾವಗಡ ಸೇರಿದಂತೆ ಜಿಲ್ಲೆಯ ಅರ್ಧ ಭಾಗಕ್ಕೆ ಇದೊಂದೇ ಸಂಪರ್ಕ ಮಾರ್ಗ. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಬಸ್‌ಗಳು ಇದೇ ರಸ್ತೆಯಲ್ಲಿ ಸಾಗಬೇಕು. ಪ್ರತಿನಿತ್ಯ ನೂರಾರು ಬಸ್‌ಗಳು, ಇತರೆ ವಾಹನಗಳು ಸಂಚರಿಸುತ್ತವೆ. ಹೊರಗಡೆಯಿಂದ ಬರುವ ವಾಹನಗಳು ಇದೇ ಮಾರ್ಗದಲ್ಲಿ ನಗರ ಪ್ರವೇಶಿಸಬೇಕು. ಇಂತಹ ದಟ್ಟಣೆಯಿಂದ ಕೂಡಿದ ರಸ್ತೆ ಮುಚ್ಚುವ ಮುನ್ನ ಮುನ್ನೆಚ್ಚರಿಕೆ ವಹಿಸದಿರುವುದು ದೊಡ್ಡ ಸಮಸ್ಯೆಯನ್ನು ತಂದೊಡ್ಡಿದೆ.

ಇಷ್ಟು ದಿನ ಏಕೆ ತಡ?: ಮಳೆಗಾಲದಲ್ಲೇ ಏಕೆ ಕೆಲಸ ಆರಂಭಿಸಲಾಗಿದೆ ಎಂಬ ಪ್ರಮುಖ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ‘ಎಸ್– ಮಾಲ್ ಬಳಿ ಸೇತುವೆ ಕಿರಿದಾಗಿದ್ದು, ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಸೇತುವೆ ವಿಸ್ತರಣೆ ಮಾಡಲಾಗುವುದು’ ಎಂದು ಕಳೆದ ಎರಡು ವರ್ಷಗಳಿಂದ ಹೇಳಿಕೊಂಡೇ ಬರಲಾಗಿದೆ. ಹಿಂದಿನ ವರ್ಷದ ಡಿಸೆಂಬರ್‌ನಲ್ಲಿ ಮಾರುಕಟ್ಟೆಯಿಂದ ತರಕಾರಿ ತೆಗೆದುಕೊಂಡು ಬರುತ್ತಿದ್ದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಜಿ.ಬಿ.ಜ್ಯೋತಿಗಣೇಶ್ ‘ಕಾಮಗಾರಿಗೆ ₹6.50 ಕೋಟಿ ಮಂಜೂರಾಗಿದೆ. ಶೀಘ್ರ ಕೆಲಸ ಆರಂಭವಾಗಲಿದೆ’ ಎಂದು ಹೇಳಿದ್ದರು. ಅಂದಿನ ಜಿಲ್ಲಾಧಿಕಾರಿ ಸಹ ಇದೇ ಭರವಸೆ ನೀಡಿದ್ದರು.

ಡಿಸೆಂಬರ್ ತಿಂಗಳಲ್ಲೇ ಕೆಲಸ ಆರಂಭವಾಗಿದ್ದರೆ ಮಳೆಗಾಲಕ್ಕೆ ಮುನ್ನ ಮುಗಿಸಬಹುದಿತ್ತು. ಜನರ ಓಡಾಟಕ್ಕೂ ಅಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ. ಆರು ತಿಂಗಳಿಂದ ಸುಮ್ಮನಿದ್ದು, ಈಗ ಏಕೆ ಕೆಲಸ ಕೈಗೆತ್ತಿಕೊಳ್ಳಲಾಗಿದೆ? ಮಳೆ ಬಂದು ಕೆರೆ ಭರ್ತಿಯಾಗಿ ಕೋಡಿ ನೀರು ಹರಿದರೆ ಕಾಮಗಾರಿ ಮತ್ತಷ್ಟು ತಡವಾಗುತ್ತದೆ? ಇಂತಹ ಸಣ್ಣ ವಿಚಾರವೂ ಜಿಲ್ಲಾ ಆಡಳಿತಕ್ಕೆ ಗೊತ್ತಿಲ್ಲವೆ ಎಂಬುದು ನಗರದ ಪ್ರವೀಣ್ ಪ್ರಶ್ನೆ.

ನಿಧಾನ: ಈಗ ಕೆಲಸ ಆರಂಭವಾಗಿರುವ ವೇಗ ಗಮನಿಸಿದರೆ ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಯುವ ಸೂಚನೆ ಕಾಣಿಸುತ್ತಿಲ್ಲ. ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ. ಕೆಲಸ ಆರಂಭವಾಗಿ ಎರಡು ವಾರಕ್ಕೆ ಬಂದಿದ್ದು, ಇನ್ನೂ ತೆವಳುತ್ತಲೇ ಸಾಗಿದೆ. ಇದೇ ವೇಗದಲ್ಲಿ ನಡೆದರೆ ವರ್ಷ ತೆಗೆದುಕೊಳ್ಳಬಹುದು ಎಂಬ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ.

ತುಮಕೂರಿನ ಗುಬ್ಬಿ ಗೇಟ್– ಶಿರಾ ಗೇಟ್ ದಿಬ್ಬೂರು ರಿಂಗ್ ರಸ್ತೆಯ ಕೆಸರಿನಲ್ಲೇ ಸಾಗಿದ ವಾಹನಗಳು
ತುಮಕೂರಿನ ಗುಬ್ಬಿ ಗೇಟ್– ಶಿರಾ ಗೇಟ್ ದಿಬ್ಬೂರು ರಿಂಗ್ ರಸ್ತೆಯ ಕೆಸರಿನಲ್ಲೇ ಸಾಗಿದ ವಾಹನಗಳು

ಪರ್ಯಾಯ ಮಾರ್ಗವೇ?

ನಗರದ ಹೊರಗೆ ಹೋಗಲು ಹಾಗೂ ಒಳಕ್ಕೆ ಬರಲು ಎರಡು ಪರ್ಯಾಯ ಮಾರ್ಗಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಆಡಳಿತ ಹೇಳುತ್ತಿದೆ. ಈ ಎರಡೂ ಮಾರ್ಗಗಳು ಸುಸ್ಥಿತಿಯಲ್ಲಿ ಇದ್ದರೆ ಯಾರಿಂದಲೂ ಆಕ್ಷೇಪ ವ್ಯಕ್ತವಾಗುತ್ತಿರಲಿಲ್ಲ. ಈ ಎರಡೂ ಮಾರ್ಗದಲ್ಲೂ ಪ್ರಯಾಣ ಕಷ್ಟಕರವಾಗಿದೆ. ನಗರ ಪ್ರವೇಶಿಸುವ ವಾಹನಗಳು ರಾಷ್ಟ್ರೀಯ ಹೆದ್ದಾರಿ–48ರ ಮೂಲಕ ಬಂದು ಅಂತರಸನಹಳ್ಳಿ ದಾಟಿದ ನಂತರ ಎಡಕ್ಕೆ ಸರ್ವೀಸ್ ರಸ್ತೆಯಲ್ಲಿ ಚಲಿಸಿ ಹನುಮಂತಪುರದ ಮೂಲಕ ಸಾಗಬೇಕು. ಹೆದ್ದಾರಿ ಪಕ್ಕದಲ್ಲಿ ಅಂತರಸನಹಳ್ಳಿಯಿಂದ ಬಟವಾಡಿವರೆಗೂ ಸರ್ವೀಸ್ ರಸ್ತೆ ಈವರೆಗೂ ಪೂರ್ಣಗೊಂಡಿಲ್ಲ. ಅಲ್ಲಲ್ಲಿ ಅಲ್ಪಸ್ವಲ್ಪ ನಿರ್ಮಿಸಲಾಗಿದೆ. ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಎಲ್ಲಿ ವಾಹನಗಳು ಚಲಿಸಬೇಕು (ಎಡಭಾಗಕ್ಕೆ) ಎಂಬುದೇ ಚಾಲಕರಿಗೆ ಗೊತ್ತಾಗುವುದಿಲ್ಲ. ಸರ್ವೀಸ್ ರಸ್ತೆಗೆ ವಾಹನಗಳು ಇಳಿದರೆ ಈ ರಸ್ತೆಯೂ ಹಾಳಾಗಿದೆ. ಮಳೆ ಬೀಳುತ್ತಿದ್ದು ನೀರು ತುಂಬಿಕೊಂಡಿದೆ. ಗೊತ್ತಿಲ್ಲದೆ ಇನ್ನೂ ಸ್ವಲ್ಪ ಎಡಭಾಗಕ್ಕೆ ಚಲಿಸಿದರೆ ಚರಂಡಿಗೆ ಬೀಳುವುದು ಖಚಿತ. ಬಹಳ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಿದೆ. ಕೈಯಲ್ಲಿ ಜೀವ ಹಿಡಿದುಕೊಂಡೇ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಮತ್ತೊಂದು ಮಾರ್ಗ: ಗುಬ್ಬಿ ಗೇಟ್‌ನಿಂದ ಶಿರಾ ಗೇಟ್‌ಗೆ ಸಂಪರ್ಕ ಕಲ್ಪಿಸುವ ದಿಬ್ಬೂರು ರಿಂಗ್ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹಲವು ವರ್ಷಗಳಿಂದ ತೆವಳುತ್ತಾ ಸಾಗಿದೆ. ಅಮಾನಿಕೆರೆ ಕೋಡಿ ನೀರು ಇದೇ ಮಾರ್ಗದಲ್ಲಿ ಹರಿಯುತ್ತಿದ್ದು ಆ ಭಾಗದಲ್ಲಿ ಕೆಲಸ ಅರ್ಧಕ್ಕೆ ನಿಂತಿದೆ. ಈಗ ಮಳೆ ಬಂದು ನೀರು ನಿಂತಿದ್ದು ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ನೀರಿನಲ್ಲಿ ರಸ್ತೆ ಯಾವುದು ಗುಂಡಿ ಯಾವುದು ಎಂಬುದು ತಿಳಿಯದೆ ವಾಹನಗಳು ಸಿಲುಕಿಕೊಂಡು ಪರದಾಡುತ್ತಿದ್ದ ದೃಶ್ಯಗಳು ಮಂಗಳವಾರ ಕಂಡು ಬಂದವು. ಪರ್ಯಾಯವಾಗಿ ತೋರಿಸಿರುವ ಎರಡೂ ರಸ್ತೆಗಳ ಸ್ಥಿತಿ ಈ ರೀತಿ ಇರಬೇಕಾದರೆ ನಾವು ಹೇಗೆ ಸಂಚರಿಸಬೇಕು. ಎಲ್ಲೂ ಸಮರ್ಪಕವಾಗಿ ಮಾರ್ಗಸೂಚಿ ಫಲಕಗಳನ್ನು ಅಳವಡಿಸಿಲ್ಲ. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರನ್ನೂ ನಿಯೋಜಿಸಿಲ್ಲ ಎಂದು ವಾಹನ ಚಾಲಕ ಸಂದೇಶ್ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT