ತುಮಕೂರು: ಮುಡಾ ನಿವೇಶನ ಹಗರಣ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ತೇಜೋವಧೆ ಮುಂದುವರಿಸಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಶೋಷಿತ ಸಮುದಾಯಗಳು ಹಾಗೂ ಹಿಂದುಳಿದ ವರ್ಗಗಳ ಸಮುದಾಯಗಳ ಮುಖಂಡರು ಎಚ್ಚರಿಸಿದರು.
ಮುಖಂಡರಾದ ಕೆಂಚಮಾರಯ್ಯ, ಚಿಕ್ಕರಾಜು, ನರಸೀಯಪ್ಪ, ಕುಮಾರಸ್ವಾಮಿ ಇತರರು ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸಿದರು.
ಮುಡಾ ಹಗರಣದ ಕಪ್ಪು ಚುಕ್ಕೆ ಇಟ್ಟು, ರಾಜಕೀಯ ಜೀವನಕ್ಕೆ ಇತಿಶ್ರೀ ಹಾಡಲು ಹೊರಟಿರುವ ಬಿಜೆಪಿ, ಜೆಡಿಎಸ್ ಪಕ್ಷಗಳ ಹುನ್ನಾರ ಕೈಗೂಡಲು ಎಂದಿಗೂ ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ಮುಕ್ತ–ಕರ್ನಾಟಕ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.
ರಾಜಕೀಯ ದ್ವೇಷದಿಂದ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಮುನ್ನೆಲೆಗೆ ತರಲಾಗಿದೆ. ರಾಜಕೀಯವಾಗಿ ಮುಗಿಸಲು ಮುಂದಾಗಿದ್ದಾರೆ. ಬಡವರು, ಹಿಂದುಳಿದವರಿಗೆ ಶಕ್ತಿ ತುಂಬುವಂತಹ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವರ ಜನಪ್ರಿಯತೆ ಸಹಿಸದೆ ಇಂತಹ ಕೃತ್ಯಕ್ಕೆ ಇಳಿದಿದ್ದಾರೆ. ರಾಜೀನಾಮೆಗೆ ಒತ್ತಾಯಿಸುವುದು ಮುಂದುವರಿದರೆ ಹೋರಾಟ ನಡೆಸಲಾಗುವುದು ಎಂದರು.
ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಜಾರಿಗೆ ತಂದಿರುವ ಅನ್ನಭಾಗ್ಯ, ಕ್ಷೀರಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಗೃಹಜೋತಿ, ವಿದ್ಯಾನಿಧಿ ಯೋಜನೆಗಳು ಅತಿ ಹೆಚ್ಚು ಬಡವರನ್ನು ತಲುಪಿವೆ. ಇದನ್ನು ಸಹಿಸದೆ ಕುತಂತ್ರ ನಡೆಸಿ ಅಧಿಕಾರದಿಂದ ಕೆಳಗೆ ಇಳಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.