ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಸೋಮಣ್ಣ ನಾಮಪತ್ರ; ಹರಿದು ಬಂದ ಜನಸ್ತೋಮ

ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಆರ್.ಅಶೋಕ ಭಾಗಿ
Published 3 ಏಪ್ರಿಲ್ 2024, 22:30 IST
Last Updated 3 ಏಪ್ರಿಲ್ 2024, 22:30 IST
ಅಕ್ಷರ ಗಾತ್ರ

ತುಮಕೂರು: ಲೋಕಸಭೆ ಚುನಾವಣೆಗೆ ಬಿಜೆಪಿ– ಜೆಡಿಎಸ್ ರಣಕಹಳೆ ಮೊಳಗಿಸಿದ್ದು, ನಗರದಲ್ಲಿ ಬುಧವಾರ ಬೃಹತ್ ಮೆರವಣಿಗೆ ನಡೆಸಿ ಎರಡೂ ಪಕ್ಷಗಳ ಮುಖಂಡರು ತಮ್ಮ ಶಕ್ತಿ ಪ್ರದರ್ಶಿಸಿದರು. ಮೆರವಣಿಗೆ ನಂತರ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಎರಡನೇ ಬಾರಿಗೆ ನಾಮಪತ್ರ ಸಲ್ಲಿಸಿದರು.

ಏ. 1ರಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದರು. ಬುಧವಾರ ಮತ್ತೊಮ್ಮೆ ತಮ್ಮ ಪಕ್ಷದ ನಾಯಕರು, ಜೆಡಿಎಸ್ ಮುಖಂಡರ ಸಮ್ಮುಖದಲ್ಲಿ ಉಮೇದುವಾರಿಕೆ ದಾಖಲಿಸಿದರು. ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಮುಖಂಡರಾದ ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ, ಜಿ.ಎಸ್.ಬಸವರಾಜು, ಜಗ್ಗೇಶ್, ಜನಾರ್ಧನರೆಡ್ಡಿ, ಮತ್ತಿತರ ನಾಯಕರು ಬೆಂಬಲವಾಗಿ ನಿಂತರು.

ಎರಡು ಪಕ್ಷಗಳ ಸಾವಿರಾರು ಕಾರ್ಯಕರ್ತರು ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವಿನಾಯಕ ನಗರದ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ದೇಗುಲದಿಂದ ಆರಂಭವಾದ ಮೆರವಣಿಗೆ ಬಿಜಿಎಸ್ ವೃತ್ತ, ಎಂ.ಜಿ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಮಾರ್ಗ ಮಧ್ಯದಲ್ಲಿ ಎರಡೂ ಪಕ್ಷಗಳ ನಾಯಕರು ಮಾತನಾಡಿದರು. ರಾಜ್ಯ ಸರ್ಕಾರ, ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. ವಿ.ಸೋಮಣ್ಣ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಜೆಡಿಎಸ್ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಸಿ.ಬಿ.ಸುರೇಶ್‌ಬಾಬು, ಬಿಜೆಪಿ ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್, ಚಿದಾನಂದ ಎಂ.ಗೌಡ, ಮುಖಂಡರಾದ ಆರ್.ಸಿ.ಆಂಜನಪ್ಪ, ಎಚ್.ಎಸ್.ರವಿಶಂಕರ್ ಸೇರಿದಂತೆ ಎರಡೂ ಪಕ್ಷಗಳ ಮಾಜಿ ಶಾಸಕರು, ಪ್ರಮುಖ ನಾಯಕರು ಭಾಗವಹಿಸಿದ್ದರು.

ಕಾರ್ಯಕರ್ತರನ್ನು ಉದ್ದೇಶಿಸಿ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, ‘ರಾಜ್ಯದಲ್ಲಿ ಬಡವರ, ರೈತ ವಿರೋಧಿ ಸರ್ಕಾರ ಇದೆ. ಕಳೆದ ಹತ್ತು ತಿಂಗಳಿಂದ ರಾಜ್ಯದ ಯಾವ ಭಾಗದಲ್ಲೂ ಅಭಿವೃದ್ಧಿ ಕೆಲಸಗಳು ಆರಂಭವಾಗಿಲ್ಲ. ಕೇವಲ ಗ್ಯಾರಂಟಿ ಜಪ ಮಾಡುತ್ತಿದ್ದಾರೆ. ಇದರಿಂದ ರಾಜ್ಯ ಅಭಿವೃದ್ಧಿ ಆಗುವುದಿಲ್ಲ. ಇಂತಹ ಸರ್ಕಾರವನ್ನು ಕಿತ್ತೊಗೆಯಬೇಕು’ ಎಂದು ವಾಗ್ದಾಳಿ ನಡೆಸಿದರು.

ಮಹಿಳೆಯರಿಗೆ ₹2 ಸಾವಿರ ಕೊಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ. ಗಂಡಸರು ಕುಡಿಯುವ ಮದ್ಯದ ಬೆಲೆ ಜಾಸ್ತಿ ಮಾಡಿ ಆ ಹಣವನ್ನೇ ಮಹಿಳೆಯರಿಗೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗಲೆಲ್ಲ ರಾಜ್ಯದಲ್ಲಿ ಬರ ಬಂದಿದೆ. ಕಾಂಗ್ರೆಸ್‌ನವರ ದರಿದ್ರ ಕಾಲುಗುಣದಿಂದ ಬರ ಆವರಿಸಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ನವರು ಮನೆಹಾಳು ಕೆಲಸ ಮಾಡುತ್ತಿದ್ದಾರೆ. ಕಾಶ್ಮೀರವನ್ನು ಬಿಟ್ಟುಕೊಟ್ಟಿದ್ದರು. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಅದನ್ನು ನಮ್ಮದಾಗಿಸಿಕೊಂಡರು. ಮೋದಿ ಮುಂದೆ ಸರಿಸಮನಾಗಿ ನಿಲ್ಲಲು ರಾಹುಲ್ ಗಾಂಧಿಗೆ ಸಾಧ್ಯವೆ? ಯಾವಾಗ ಅವರು ವಿದೇಶಕ್ಕೆ ಓಡಿಹೋಗುತ್ತಾರೋ ಗೊತ್ತಿಲ್ಲ ಎಂದು ಟೀಕಿಸಿದರು.

ಇಷ್ಟು ವರ್ಷಗಳಾಗಿದ್ದರೂ ಯಾರೂ ರಾಮ ಮಂದಿರ ಕಟ್ಟಿರಲಿಲ್ಲ. ಅದಕ್ಕೆ ನರೇಂದ್ರ ಮೋದಿ ಅವರೇ ಬರಬೇಕಾಯಿತು. ಮತ್ತೊಮ್ಮೆ ಪ್ರಧಾನಿಯಾಗಲು ಸೋಮಣ್ಣ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ವಿ.ಸೋಮಣ್ಣ ಮಾತನಾಡಿ, ‘ನಾನು ಜನರೊಂದಿಗೆ ಇದ್ದ ಒಡನಾಟ, ಒಳ್ಳೆಯತನಕ್ಕೆ ಜನರು ಸ್ಪಂದಿಸಿದ್ದಾರೆ. ಚುನಾವಣೆ ಗೆದ್ದ ನಂತರ ಬರಬೇಕಾದ ಜವಾಬ್ದಾರಿ ಈಗಲೇ ಬರುವಂತೆ ಜನರು ಮಾಡಿದ್ದಾರೆ. ಇನ್ನುಳಿದ ದಿನಗಳಲ್ಲಿ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲೂ ಸಂಚರಿಸಿ ಬೆಂಬಲ ಕೋರುತ್ತೇನೆ’ ಎಂದು ಹೇಳಿದರು.

ತುಮಕೂರಿನಲ್ಲಿ ಬುಧವಾರ ಬಿಜೆಪಿ– ಜೆಡಿಎಸ್ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು. ಮುಖಂಡರಾದ ಜನಾರ್ಧನರೆಡ್ಡಿ ಬಿ.ಎಸ್.ಯಡಿಯೂರಪ್ಪ ಅಭ್ಯರ್ಥಿ ವಿ.ಸೋಮಣ್ಣ ಆರ್.ಅಶೋಕ ಸಿ.ಬಿ.ಸುರೇಶ್‌ಬಾಬು ಭಾಗವಹಿಸಿದ್ದರು
ತುಮಕೂರಿನಲ್ಲಿ ಬುಧವಾರ ಬಿಜೆಪಿ– ಜೆಡಿಎಸ್ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು. ಮುಖಂಡರಾದ ಜನಾರ್ಧನರೆಡ್ಡಿ ಬಿ.ಎಸ್.ಯಡಿಯೂರಪ್ಪ ಅಭ್ಯರ್ಥಿ ವಿ.ಸೋಮಣ್ಣ ಆರ್.ಅಶೋಕ ಸಿ.ಬಿ.ಸುರೇಶ್‌ಬಾಬು ಭಾಗವಹಿಸಿದ್ದರು

ಪೊಲೀಸರ ಜತೆ ವಾಗ್ವಾದ ತುಮಕೂರು: ಜಿಲ್ಲಾಧಿಕಾರಿ ಕಚೇರಿ ಬಳಿ ನಾಮಪತ್ರ ಸಲ್ಲಿಸಲು ತೆರಳುವ ಸಮಯದಲ್ಲಿ ವಿ.ಸೋಮಣ್ಣ ಹಾಗೂ ಪೊಲೀಸರ ನಡುವೆ ವಗ್ವಾದ ನಡೆಯಿತು. ತಮ್ಮ ಜತೆಯಲ್ಲಿ ಬಂದ ಮುಖಂಡರನ್ನು ಒಳಗೆ ಬಿಡುವಂತೆ ಸೋಮಣ್ಣ ಹೇಳಿದರು. ನಿಯಮದ ಪ್ರಕಾರ ಅಭ್ಯರ್ಥಿ ಸೇರಿದಂತೆ ಐವರಿಗಿಂತ ಹೆಚ್ಚು ಜನರನ್ನು ಬಿಡಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದರು. ‘ಮೂರು ಸೆಟ್ ನಾಮಪತ್ರ ಸಲ್ಲಿಸುತ್ತಿರುವುದು. ಏನು ತಮಾಷೆ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದರು. ‘ನಿಯಮ ಪಾಲನೆ ಮಾಡುತ್ತಿದ್ದೇವೆ’ ಎಂದು ಪೊಲೀಸರು ಹೇಳಿದ ಸಮಯದಲ್ಲಿ ಕೆಲ ಸಮಯ ವಾಗ್ವಾದ ನಡೆಯಿತು.

ಮಾಧುಸ್ವಾಮಿ ಗೈರು ತುಮಕೂರು: ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಗೈರು ಹಾಜರಿ ಎದ್ದು ಕಾಣುತಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸುವವರ ಪಟ್ಟಿಯಲ್ಲಿ ಮಾಧುಸ್ವಾಮಿ ಹೆಸರು ಇತ್ತು. ಆದರೂ ದೂರವೇ ಉಳಿದಿದ್ದರು. ಸೋಮಣ್ಣ ಬೆಂಬಲಿಸುವ ಬಗ್ಗೆ ಈವರೆಗೂ ಯಾವುದೇ ನಿರ್ಧಾರವನ್ನು ಅವರು ಪ್ರಕಟಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT