ತುಮಕೂರು: ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅನ್ನದಾತರನ್ನು ದಾಸ್ಯ, ದಾರಿದ್ರ್ಯದಿಂದ ಬಿಡುಗಡೆಗೊಳಿಸಿ, ರೈತರ ಆತ್ಮದ ಧ್ವನಿ ಕೇಳಿದ ಮೊದಲಿಗರು ಎಂದು ದಾವಣಗೆರೆಯ ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಬಿ.ಜಿ.ಧನಂಜಯ ಅಭಿಪ್ರಾಯಪಟ್ಟರು.
ವಿ.ವಿಯಲ್ಲಿ ಬುಧವಾರ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅಧ್ಯಯನ ಪೀಠ, ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ಆಯೋಜಿಸಿದ್ದ ‘ರೈತ ಚಳವಳಿಯಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಪಾತ್ರ’ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆದರ್ಶ ಕೃಷಿ ಸಮಾಜ ನಿರ್ಮಿಸಿ, ರೈತ ಸಂಘಟನೆಗಳಿಗೆ ವಿಜ್ಞಾನ ಮತ್ತು ಕಾನೂನಿನ ಸ್ಪರ್ಶ ಕೊಟ್ಟರು. ಕೃಷಿಯನ್ನು ವಾಣಿಜ್ಯೀಕರಣಗೊಳಿಸಿ, ಬೆಳೆ ವಿಮೆ ಮಾಡಿಸಿದರೆ ಯಾವ ರೈತನೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಸರ್ಕಾರ ರೈತರಿಗೆ ಉಚಿತವಾಗಿ ಯೋಜನೆ ಕೊಡುವ ಬದಲು ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ಸಕಾಲಕ್ಕೆ ನೀರು, ವಿದ್ಯುತ್ ಸರಬರಾಜು ಮಾಡುವಂತೆ ಆಗ್ರಹಿಸಿ ಚಳವಳಿ ಕಟ್ಟುತ್ತಿದ್ದರು ಎಂದು ಸ್ಮರಿಸಿದರು.
ಆಳುವ ವರ್ಗದ ದರ್ಪ, ಅಸಮಾನತೆ ಹೋಗಲಾಡಿಸಲು ಹೋರಾಡಿದರು. ‘ರೈತರ ಋಣದಲ್ಲಿ ದೇಶವಿದೆ. ರೈತನಲ್ಲ, ಸರ್ಕಾರ ಸಾಲಗಾರ’ ಎಂದು ವೇದಿಕೆಗಳಲ್ಲಿ ಗುಡುಗಿದ ಉಗ್ರ ಚಳವಳಿಯ ಸೌಮ್ಯ ನಾಯಕ. ರೈತರಿಗೆ ಸ್ವಾಭಿಮಾನದ ದೀಕ್ಷೆ ನೀಡಿ, ಯುವಕರನ್ನು ಪರ್ಯಾಯ ರಾಜಕೀಯಕ್ಕೆ ಪರಿಚಯಿಸಿದರು. ರಾಜಕೀಯದಲ್ಲಿ ಶೂದ್ರರು ಮುಂದಾಳತ್ವ ವಹಿಸಿದರೆ ರಾಜ್ಯ ಅಭಿವೃದ್ಧಿಯಾಗಲಿದೆ ಎಂಬ ಸಮ ಭಾವನೆ ಹೊಂದಿದ್ದರು ಎಂದು ತಿಳಿಸಿದರು.