ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Results | ತುಮಕೂರು: ಚೇತರಿಸಿದ ಎಸ್‌ಎಸ್‌ಎಲ್‌ಸಿ ಫಲಿತಾಂಶ

Published 10 ಮೇ 2024, 4:55 IST
Last Updated 10 ಮೇ 2024, 4:55 IST
ಅಕ್ಷರ ಗಾತ್ರ

ತುಮಕೂರು: ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತುಮಕೂರು ಶೈಕ್ಷಣಿಕ ಜಿಲ್ಲೆ ಚೇತರಿಕೆ ಕಂಡಿದ್ದು, 16ನೇ ಸ್ಥಾನಕ್ಕೆ ಜಿಗಿದಿದೆ. ಪ್ರಸಕ್ತ ಸಾಲಿನಲ್ಲಿ ಶೇ 75.28ರಷ್ಟು ಫಲಿತಾಂಶ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದೆ.

2023ರಲ್ಲಿ ಶೇ 89.43ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೂ 20ನೇ ಸ್ಥಾನಕ್ಕೆ ಕುಸಿದಿತ್ತು. 2022ರಲ್ಲಿ ಶೇ 91.65ರಷ್ಟು ಫಲಿತಾಂಶ ದಾಖಲಾಗಿತ್ತು. ಈ ಬಾರಿ ರಾಜ್ಯ ಮಟ್ಟದಲ್ಲೂ ಫಲಿತಾಂಶದ ಪ್ರಮಾಣ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಶೇ 75.28ರಷ್ಟು ವಿದ್ಯಾರ್ಥಿಗಳು (ಹಿಂದಿನ ವರ್ಷಕ್ಕಿಂತ ಕಡಿಮೆ) ತೇರ್ಗಡೆಯಾಗಿದ್ದರೂ, ಜಿಲ್ಲೆಯ ಸ್ಥಾನದಲ್ಲಿ ಏರಿಕೆಯಾಗಿದೆ.

ಒಟ್ಟು 22,150 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 16,675 ಮಂದಿ (ಶೇ 75.28) ತೇರ್ಗಡೆಯಾಗಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ 11,664 ಬಾಲಕರಲ್ಲಿ 7,805 (ಶೇ 66.92) ಹಾಗೂ 10,486 ಬಾಲಕಿಯರಲ್ಲಿ 8,870 (ಶೇ 84.92) ವಿದ್ಯಾರ್ಥಿನಿಯರು ಪಾಸಾಗಿದ್ದಾರೆ. ಈ ಬಾರಿಯೂ ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಲಕರಿಗಿಂತ ಬಾಲಕಿಯರು ಶೇ 18ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ.

ಮೊದಲ ಸ್ಥಾನ ಪಡೆದವರು: ತುಮಕೂರು ನಗರದ ಹೊರಪೇಟೆ ಚೇತನಾ ವಿದ್ಯಾಮಂದಿರದ ಎ.ವಿ.ಶ್ರೀರಕ್ಷಾ 625ಕ್ಕೆ 621 ಅಂಕಗಳನ್ನು ಪಡೆದು ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ದಾಖಲಿಸಿದ್ದಾರೆ. ತಿಪಟೂರು ನಳಂದ ಪ್ರೌಢಶಾಲೆಯ ಎಚ್.ಶೃಜನ್ 618 ಅಂಕ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಗುಬ್ಬಿ ಗಂಗೋತ್ರಿ ಪ್ರೌಢಶಾಲೆ ಕೆ.ಪಿ.ನವ್ಯಶ್ರೀ, ತುಮಕೂರು ವಿದ್ಯಾನಿಕೇತನ್ ಪ್ರೌಢಶಾಲೆಯ ಎ.ನಿಹಾರಿಕಾ, ಗುಬ್ಬಿ ಸಿದ್ಧಶ್ರೀ ಪ್ರೌಢಶಾಲೆಯ ಆರ್.ಜಿ.ತೋಷಿತಾ ತಲಾ 617 ಅಂಕಗಳನ್ನು ಪಡೆದು ಮೂರನೇ ಸ್ಥಾನದಲ್ಲಿ ಇದ್ದಾರೆ.

ತುಮಕೂರು ಕೊನೆ: ಶೈಕ್ಷಣಿಕ ನಗರಿ ಎಂಬ ಹೆಗ್ಗಳಿಕೆ ಹೊಂದಿರುವ ತುಮಕೂರು ನಗರ ಹಾಗೂ ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತ ಕಂಡಿದ್ದು, ಶೇ 69.25ರಷ್ಟು ಮಂದಿ ಪಾಸಾಗಿದ್ದಾರೆ. ಜಿಲ್ಲೆಯ ವ್ಯಾಪ್ತಿಗೆ ಬರುವ ತಾಲ್ಲೂಕುಗಳಿಗೆ ಹೋಲಿಸಿದರೆ ಕೊನೆಯ ಸ್ಥಾನದಲ್ಲಿದೆ. ಕಳೆದ ಬಾರಿ ಶೇ 88.90ರಷ್ಟು ಫಲಿತಾಂಶದೊಂದಿಗೆ 5ನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ ಮತ್ತೂ ಒಂದು ಸ್ಥಾನ ಇಳಿಕೆಯಾಗಿದೆ. ಈ ಬಾರಿಯೂ ಚಿಕ್ಕನಾಯಕನಹಳ್ಳಿ ತಾಲ್ಲೂಕು ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಕಳೆದ ಬಾರಿ 6ನೇ ಸ್ಥಾನದಲ್ಲಿದ್ದ ತುರುವೇಕೆರೆ ತಾಲ್ಲೂಕು 2ನೇ ಸ್ಥಾನಕ್ಕೆ ಭಡ್ತಿ ಪಡೆದಿದೆ. 2ನೇ ಸ್ಥಾನದಲ್ಲಿದ್ದ ಗುಬ್ಬಿ 5ನೇ ಸ್ಥಾನಕ್ಕೆ ಕುಸಿದಿದೆ.

ಶೂನ್ಯ ಸಾಧನೆ: ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಕೆಂಪೇಗೌಡ ಅನುದಾನಿತ ಪ್ರೌಢಶಾಲೆ, ತುಮಕೂರಿನ ಇಂಡಿಯನ್ ರೆಡ್‌ಕ್ರಾಸ್ ಶಾಲೆ (ಶ್ರವಣ ದೋಷ ಶಾಲೆ) ಶೂನ್ಯ ಫಲಿತಾಂಶ ದಾಖಲಿಸಿದೆ. ಈ ಶಾಲೆಯಿಂದ ಯಾವೊಬ್ಬ ವಿದ್ಯಾರ್ಥಿಯೂ ತೇರ್ಗಡೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT