ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಜಿಲ್ಲಾಧಿಕಾರಿ ಕಚೇರಿ ಎದುರು ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

Last Updated 7 ಜನವರಿ 2023, 5:48 IST
ಅಕ್ಷರ ಗಾತ್ರ

ತುಮಕೂರು: ಡೇರಿ ಉತ್ಪನ್ನಗಳನ್ನು ತಯಾರಿಸುವ ಗುಜರಾತ್‌ ರಾಜ್ಯದ ಅಮುಲ್ ಸಂಸ್ಥೆ ಜತೆಗೆ ನಂದಿನಿ (ಕೆಎಂಎಫ್) ಡೇರಿಯನ್ನು ವಿಲೀನಗೊಳಿಸುವ ಕೇಂದ್ರ ಸರ್ಕಾರದ ಪ್ರಸ್ತಾವ ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಅಮುಲ್ ಜತೆ ನಂದಿನಿ ಡೇರಿಯನ್ನು ವಿಲೀನಗೊಳಿಸಲಾಗುವುದು ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ
ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ, ಘೋಷಣೆಗಳನ್ನು ಕೂಗಿದರು. ಈ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸಬೇಕು. ಯಾವುದೇ ಕಾರಣಕ್ಕೂ ವಿಲೀನ ಮಾಡಲು ಅವಕಾಶ ನೀಡುವುದಿಲ್ಲ. ಅಂತಹ ಪರಿಸ್ಥಿತಿ ಎದುರಾದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜೆಡಿಎಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಪ್ರತಿಭಟನೆ ನಡೆಸಿದರು. ಕೇಂದ್ರದ ನಿಲುವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ನಂದಿನಿ ಡೇರಿ ಎಂದಿಗೂ ಗುಜರಾತಿಗಳ ಪಾಲಾಗಲು ಬಿಡುವುದಿಲ್ಲ. ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಎಲ್ಲಾ ಸಮಯದಲ್ಲೂ ರೈತರು ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಗ್ರಾಮೀಣ ಪ್ರದೇಶದ ಸಾಕಷ್ಟು ಜನರು ಹಸು, ಎಮ್ಮೆ ಸಾಕಿಕೊಂಡು ಜೀವನ ಕಂಡುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಮುಲ್ ಜತೆಗೆ ವಿಲೀನ ಮಾಡಿದರೆ ರೈತರ ಬದುಕು ಬೀದಿಗೆ ಬರಲಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ತುಮುಲ್ ನಿರ್ದೇಶಕ ಆರ್.ಎಸ್.ಗೌಡ, ‘ಕೇಂದ್ರ ಸಚಿವ ಅಮಿತ್ ಶಾ ಗುಜರಾತಿನ ಅಮುಲ್ ಡೇರಿಯೊಂದಿಗೆ ರಾಜ್ಯದ ಜನರ ಜೀವನಾಧಾರವಾಗಿರುವ ನಂದಿನಿ ಡೇರಿಯನ್ನು ವಿಲೀನಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಇದನ್ನು ಕನ್ನಡ ನಾಡಿನ ಎಲ್ಲರೂ ವಿರೋಧಿಸಬೇಕು. ನಮ್ಮದೇ ನೆಲದ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ಅವುಗಳ ಅಸ್ತಿತ್ವವೇ ಇಲ್ಲದಂತೆ ಮಾಡಿದ್ದಾರೆ. ಈಗ ಹೈನುಗಾರಿಕೆಗೂ ಕೊಡಲಿಪೆಟ್ಟು ಕೊಡಲು ಹೊರಟಿದ್ದಾರೆ’ ಎಂದು
ಟೀಕಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜನಪ್ಪ, ‘ನಂದಿನಿ ಡೇರಿ ಕನ್ನಡಿಗರ ಹೆಮ್ಮೆ. ವಿಲೀನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಸಹಕಾರಿ ಸಚಿವರು ತಮ್ಮ ನಿಲುವನ್ನು ರಾಜ್ಯದ ಜನತೆಗೆ ತಿಳಿಸಬೇಕು’ ಎಂದು ಆಗ್ರಹಿಸಿದರು.

ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಪಾಲಿಕೆ ಸದಸ್ಯ ಧರಣೇಂದ್ರ ಕುಮಾರ್, ಶ್ರೀನಿವಾಸ್, ಎನ್.ಗೋವಿಂದರಾಜು, ಬೆಳ್ಳಿ ಲೋಕೇಶ್, ನರಸೇಗೌಡ, ಉಗ್ರೇಶ್‌, ಗಂಗಣ್ಣ, ತಾಹಿರಾಬಾನು, ಲಕ್ಷ್ಮಮ್ಮ ವೀರಣ್ಣಗೌಡ, ಲೀಲಾವತಿ, ಕೆಂಪರಾಜು, ರಂಗನಾಥ, ಸೋಲಾರ್ ಕೃಷ್ಣಮೂರ್ತಿ, ದೇವರಾಜು, ಜಯಶ್ರೀ, ಯಶೋದ, ಮಮತರಾಣಿ, ಅಶ್ವತ್‍ಕುಮಾರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT