ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರವರ | ಜೀವಭಯದಲ್ಲೇ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು

Published 6 ಫೆಬ್ರುವರಿ 2024, 6:24 IST
Last Updated 6 ಫೆಬ್ರುವರಿ 2024, 6:24 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ: ಶಿಥಿಲಗೊಂಡ ಕಟ್ಟಡದಲ್ಲಿ ನಿತ್ಯ ಉದುರುತ್ತಿರುವ ಕೊಠಡಿಗಳ ಮೇಲ್ಛಾವಣಿ. ಕಟ್ಟಡ ಯಾವಾಗ ಕುಸಿಯುತ್ತದೋ ಎಂಬ ಆತಂಕದಿಂದ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು...

–ಇದು ಗೃಹಮಂತ್ರಿ ಜಿ.ಪರಮೇಶ್ವರ್ ಪ್ರತಿನಿಧಿಸುವ ಕೊರಟಗೆರೆ ಕ್ಷೇತ್ರ ವ್ಯಾಪ್ತಿಯಲ್ಲಿರುವ ಪುರವರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದುಸ್ಥಿತಿ.

ಕೊಡಿಗೇನಹಳ್ಳಿಯ ಹೋಬಳಿಯ ಪುರವರದಲ್ಲಿ ಪಿಯು ಕಾಲೇಜು ಕಟ್ಟಡ‌ ಸಂಪೂರ್ಣ ಶಿಥಿಲಗೊಂಡು ನಾಲ್ಕೈದು ವರ್ಷ ಕಳೆದಿದೆ. ನಿತ್ಯ ಕಟ್ಟಡ ಮೇಲ್ಛಾವಣಿ ಉದುರುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಆತಂಕದಲ್ಲಿ ತರಗತಿಯಲ್ಲಿ ಕುಳಿತುಕೊಳ್ಳಬೇಕಿದೆ.

ಪುರವರದ ಸರ್ಕಾರಿ ಪ್ರೌಢಶಾಲೆ 1984ರಲ್ಲಿ ಹಾಗೂ ಪದವಿ ಪೂರ್ವ ಕಾಲೇಜು 1996ರಲ್ಲಿ ಆರಂಭವಾಯಿತು. ಇವೆರಡಕ್ಕೂ ಸೇರಿ 22 ಕೊಠಡಿಗಳಿವೆ. ಪ್ರೌಢಶಾಲೆಯಲ್ಲಿ 186 ವಿದ್ಯಾರ್ಥಿಗಳಿದ್ದು, ತರಗತಿ, ಸಿಬ್ಬಂದಿ ಕೊಠಡಿ, ಪ್ರಯೋಗಾಲಯ ಮತ್ತು ಇತರೆ ಸೇರಿ ಏಳು ಕೊಠಡಿಗಳು ಶಾಲೆಗೆ ಮೀಸಲಾಗಿದೆ. ಇನ್ನುಳಿದ 15 ಕೊಠಡಿಗಳು ಪಿಯು ಕಾಲೇಜಿಗೆ ನೀಡಲಾಗಿದೆ. ಆದರೆ ಅಷ್ಟು ಕೊಠಡಿಗಳು ಸಂಪುರ್ಣ ಶಿಥಿಲವಾಗಿವೆ. ‌

ಕಲೆ ಹಾಗೂ ವಿಜ್ಞಾನ ವಿಭಾಗದಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಧಿಯಿಲ್ಲದೇ ಶಿಥಿಲಗೊಂಡಿರುವ ಮತ್ತು ಮೇಲ್ಛಾವಣಿ ಕುಸಿಯುವ ಕೊಠಡಿಗಳಲ್ಲೇ ಪಾಠ ಕೇಳುತ್ತಿದ್ದಾರೆ. ತರಗತಿ ನಡೆಯುವ ವೇಳೆ ಮೇಲ್ಛಾವಣಿ ವಿದ್ಯಾರ್ಥಿಗಳ ಮೇಲೆ ಕುಸಿದ ಉದಾರಹಣೆಗಳು ಇವೆ. ಇನ್ನೂ ಮಳೆಗಾಲದಲ್ಲಂತೂ ಸಮಸ್ಯೆಗಳನ್ನು ಹೇಳ ತೀರದು.

ಕುಡಿಯುವ ನೀರು, ಶೌಚಾಲಯ ಮತ್ತು ಪ್ರಯೋಗಾಲಯ ಸೇರಿದಂತೆ ಮೂಲ ಸೌಕರ್ಯ ಕೊರತೆ ವಿದ್ಯಾರ್ಥಿಗಳನ್ನು ಕಾಡುತ್ತಿದ್ದು, ಕಾಲೇಜಿನಲ್ಲಿ ಕಲಿಕೆಯ ಪೂರಕ ವಾತಾವರಣ ಮಾಯವಾಗಿದೆ.

ಪುರವರ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರವಾಗಿರುವ ಕಾರಣ ಹೋಬಳಿಯ ಸುಮಾರು 450ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇಲ್ಲಿಗೆ ಬಂದು ಪರೀಕ್ಷೆ ಬರುಯುತ್ತಾರೆ. ಬೋಧನೆ ಅಥವಾ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಏನಾದರೂ ಅವಘಡ ಸಂಭವಿಸಿದರೆ ಏನು ಮಾಡುವುದು ಎಂಬ ಆತಂಕ ಪ್ರಾಂಶುಪಾಲ, ಉಪನ್ಯಾಸಕರು, ಶಿಕ್ಷಕರು ಮತ್ತು ಪೋಷಕರನ್ನು ನಿತ್ಯ ಕಾಡುತ್ತಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಸಚ್ಚಿದಾನಂದ.

ಇಂಗ್ಲಿಷ್‌ ಮಾಧ್ಯಮ ಆರಂಭಕ್ಕೆ ವಿಘ್ನ

2021ನೇ ಸಾಲಿನಿಂದಲೇ ಈ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭವಾಗಬೇಕಿತ್ತು. ಆದರೆ ಕೊಠಡಿಗಳ ಕೊರತೆಯಿಂದ ಮಕ್ಕಳು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಡಿಜಿಟಲ್ ತರಗತಿಗಳಿಗೆ ಶಾಲೆ ಸಜ್ಜುಗೊಂಡಿದೆ. ಇಲ್ಲಿ ಕ್ರಿಯಾಶೀಲ ಶಿಕ್ಷಕರಿದ್ದಾರೆ. ಹೀಗಾಗಿ ಸುಸಜ್ಜಿತ ಕಟ್ಟಡ ಹಾಗೂ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಯಾರು ಏನಂದರು?

ನಮ್ಮಂಥ ಬಡವರು ಮತ್ತು ಗ್ರಾಮೀಣ ಮಕ್ಕಳು ಮಾತ್ರ ಸರ್ಕಾರಿ ಶಾಲೆ–ಕಾಲೇಜಿಗೆ ಬರುತ್ತಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಉದಾಸೀನ‌ ಬಿಟ್ಟು ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಬೇಕು- ಅನು ಪಿಯುಸಿ ವಿದ್ಯಾರ್ಥಿ

ಇಲ್ಲಿ ಉತ್ತಮವಾಗಿ ಪಾಠ ಮಾಡುವ ಉಪನ್ಯಾಸಕರಿದ್ದರೂ ಕುಳಿತುಕೊಳ್ಳಲು ಸರಿಯಾದ ಕೊಠಡಿಗಳಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ಹಿತ ದೃಷ್ಠಿಯಿಂದ ಸೌಕರ್ಯ ಕಲ್ಪಿಸಿ - ನರಸಿಂಹಮೂರ್ತಿ ಪಿಯುಸಿ ವಿದ್ಯಾರ್ಥಿ

ಈ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವ‌ರ್‌ ಹಾಗೂ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ತುರ್ತಾಗಿ ಕೋಠಡಿ ನಿರ್ಮಾಣಕ್ಕೆ ಮನವಿ ಮಾಡಲಾಗಿದೆ. ಅವರಿಂದ ಭರವಸೆಯೂ ಸಿಕ್ಕಿದೆ - ತಮ್ಮಯ್ಯ, ಪ್ರಾಂಶುಪಾಲರು

ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಸರ್ಕಾರ ಕಲಿಕೆಗೆ ಪೂರಕ ಸೌಕರ್ಯ ಕಲ್ಪಿಸಬೇಕು. ಇಲ್ಲಿ ಗ್ರಾಮೀಣ ಭಾಗದ ಬಡ ಮಕ್ಕಳೇ ಕಲಿಯುತ್ತಿದ್ದಾರೆ. ಸರ್ಕಾರ ಇತ್ತ ಗಮನ ಹರಿಸಬೇಕು - ಪಿ.ಕೆ. ರಂಗಸ್ವಾಮಿ ಸ್ಥಳೀಯ ಮುಖಂಡ

ಪುರವರ ಗ್ರಾಮದ ಸರ್ಕಾರಿ ಪಿಯು ಕಾಲೇಜು
ಪುರವರ ಗ್ರಾಮದ ಸರ್ಕಾರಿ ಪಿಯು ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT