ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣ್ಯ ಸ್ಮರಣೆ: ಬೆಳಕು ನೀಡಿದ ಶಿವಕುಮಾರ ಸ್ವಾಮೀಜಿ

ಸಿದ್ಧಗಂಗೆ
Last Updated 21 ಜನವರಿ 2021, 2:16 IST
ಅಕ್ಷರ ಗಾತ್ರ

ತುಮಕೂರು: ಅನ್ನ, ಶಿಕ್ಷಣ ದಾಸೋಹದ ಮೂಲಕ ಶಿವಕುಮಾರ ಸ್ವಾಮೀಜಿ ನಾಡಿನ ಲಕ್ಷಾಂತರ ಮಕ್ಕಳ ಬದುಕನ್ನು ಕಟ್ಟಿದ ಮಹಾತ್ಮರು. ಅವರು ಭೌತಿಕವಾಗಿ ಸಮಾಜದ ನಡುವೆ ಇಲ್ಲದಿದ್ದರೂ ಅವರ ಕಾಣ್ಕೆಗಳನ್ನು ವೀರಶೈವ ಲಿಂಗಾಯತ ಸಮಾಜವಷ್ಟೇ ಅಲ್ಲ ಇಡೀ ನಾಡೇ ಸ್ಮರಿಸುತ್ತದೆ.

ಬಸವತತ್ವವನ್ನು ತಮ್ಮ ಬದುಕಿನಲ್ಲಿ ಪೂರ್ಣವಾಗಿ ಅಳವಡಿಸಿಕೊಂಡ ಶರಣರು ಅವರು. ಬದುಕನ್ನು ಬಡ ಮಕ್ಕಳ ಶಿಕ್ಷಣ, ದಾಸೋಹ ವ್ಯವಸ್ಥೆಗಾಗಿ ಮೀಸಲಿಟ್ಟಿದ್ದರು.

ಸ್ವಾಮೀಜಿ 1930ರಲ್ಲಿ ಮಠಕ್ಕೆ ಉತ್ತರಾಧಿಕಾರಿಯಾದಾಗ ಅವರ ಸನ್ಯಾಸತ್ವದ ಹಾದಿ ಸುಲ ಭದ್ದೇನೂ ಆಗಿರಲಿಲ್ಲ. ಉದ್ಧಾನ ಶಿವಯೋಗಿಗಳು ದಾಸೋಹ, ಶಿಕ್ಷಣ ಸಂಸ್ಥೆ ಹಾಗೂ ವಿದ್ಯಾರ್ಥಿ ನಿಲಯದ ಜವಾಬ್ದಾರಿ ವಹಿಸಿದರು. ಕೈಗೆ ಹೆಚ್ಚು ಹಣ ನೀಡುತ್ತಿರಲಿಲ್ಲ.

ಬೆಂಗಳೂರಿನಲ್ಲಿರುವ ಕೆಲವು ಮನೆಗಳ ಅಲ್ಪಸ್ವಲ್ಪ ಬಾಡಿಗೆ, ಭಕ್ತರ ಕಾಣಿಕೆ ಹಾಗೂ ಸರ್ಕಾರದ ಅನುದಾನ ಇಷ್ಟರಲ್ಲಿ ಸ್ವಾಮೀಜಿ ಈ ಮೂರು ವ್ಯವಸ್ಥೆಗಳನ್ನು ನಿರ್ವಹಿಸಬೇಕಿತ್ತು. ಆಗ ಮಠಕ್ಕೆ ಇದದ್ದು ಕೇವಲ 16 ಎಕರೆ ಜಮೀನು. ದಾಸೋಹದ ಖರ್ಚು– ವೆಚ್ಚಗಳು ಕೈ ಮೀರ ತೊಡಗಿದವು. ಭಕ್ತರಿಗೂ ಊಟ, ವಸತಿ ಕಲ್ಪಿಸುವುದು ಸ್ವಾಮೀಜಿಗೆ ಕಷ್ಟವಾಗುತ್ತಿತ್ತು. ಕೈಗೆ ದುಡ್ಡು ಬಂದರೂ ಹಣ ಕೆಲವೇ ಸಮಯದಲ್ಲಿ ವೆಚ್ಚವಾಗುತ್ತಿತ್ತು. ‘ನೀವೇ ದುಡಿದು ಖರ್ಚು ಮಾಡಿಕೊಳ್ಳಿ’ ಎಂದು ಶಿವಯೋಗಿಗಳು ಕಠಿಣವಾಗಿ ಹೇಳಿದ್ದರು.

ಹೀಗೆ ಹಲವು ಅಡ್ಡಿ–ಕಷ್ಟಗಳ ನಡುವೆಯೇ ಮಠದ ಸೇವಾ ಕೆಲಸವನ್ನು ಹಂತ ಹಂತವಾಗಿ ವಿಶಾಲಗೊಳಿಸಿದರು. ‘ಮಠದಿಂದ ಘಟ ಅಲ್ಲ, ಘಟದಿಂದ ಮಠ’ ಎನ್ನುವ ಮಾತಿಗೆ ಅನ್ವರ್ಥವಾಗಿ ಶ್ರೀಗಳು ಸಿದ್ಧಗಂಗೆಯ ಪ್ರಭಾವಳಿಯನ್ನು ನಾಡಿನಲ್ಲಿ ಹೆಚ್ಚಿಸಿದರು.

ರಾಜ್ಯದಲ್ಲಿ ಮೊದಲ ಬಾರಿಗೆ ಬಸವ ಜಯಂತಿಯನ್ನು ಹಳ್ಳಿ ಹಳ್ಳಿಗಳಿಗೆ ಕೊಂಡೊಯ್ದ ಕೀರ್ತಿ ಶಿವಕುಮಾರ ಸ್ವಾಮೀಜಿಗಳದ್ದು.
ಆ ಮೂಲಕ ಜಾತಿಯ ಜಾಡ್ಯದಿಂದ ನಲುಗಿದ್ದ ಹಳ್ಳಿಗಳಲ್ಲಿ ಸಮತೆಯ ದೀಪವನ್ನು ಬೆಳಗಿಸಿದರು.

ಹಳ್ಳಿ ಹಳ್ಳಿಗಳಿಂದ ಬಡಮಕ್ಕಳನ್ನು ಮಠಕ್ಕೆ ಕರೆತಂದು ಶಿಕ್ಷಣದ ದೀವಿಗೆಯನ್ನು ಅವರ ಕೈಗಿತ್ತರು. ಎಂಟು ದಶಕಗಳಿಂದ ನಿಷ್ಕಾಮವಾಗಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡ ಸ್ವಾಮೀಜಿ ಅವರ ಸೇವಾ ಕಾರ್ಯ ಅನನ್ಯವಾದುದು. ‘ಸೇವೆ’ ಎನ್ನುವುದು ವ್ಯವಹಾರವಾಗುತ್ತಿರುವ ಈ ಹೊತ್ತಿನಲ್ಲಿ ಸಿದ್ಧಗಂಗೆಯ ಪೂಜ್ಯರು ಇದಕ್ಕೆ ಅಪವಾದವಾಗಿ ಕಾಣುವರು. ‘ನಡೆದಾಡುವ ದೇವರು’, ‘ಅಭಿನವ ಬಸವಣ್ಣ’ ಎಂದು ಭಕ್ತರು ಕರೆಯಲು ಸ್ವಾಮೀಜಿ ಮಾಡಿದ ಕೆಲಸಗಳೇ ಕಾರಣ.

ಸ್ವಾಮೀಜಿ ಇಹವನ್ನು ತ್ಯಜಿಸಿದ್ದರೂ ಅವರ ಸಾಮಾಜಿಕ ಕಾರ್ಯಗಳು ಅಜರಾಮರವಾಗಿ ಇರುತ್ತವೆ ಎಂದರೆ ಖಂಡಿತ ಅತಿಶಯವಲ್ಲ. ಶಿವಕುಮಾರ ಸ್ವಾಮೀಜಿ ಹಾಕಿಕೊಟ್ಟ ಪರಂಪರೆಯನ್ನೇ ಸಿದ್ಧಲಿಂಗ ಸ್ವಾಮೀಜಿ ಮುಂದುವರಿಸಿದ್ದಾರೆ. ಸಮಾಜವನ್ನು ಕಟ್ಟುವ ಕೆಲಸದಲ್ಲಿ ನಿರತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT