ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಹುಣಸೆ ಹಣ್ಣು ವಹಿವಾಟು: ಮೊದಲ ದಿನವೇ ಉತ್ತಮ ಬೆಲೆ

Published 8 ಜನವರಿ 2024, 14:29 IST
Last Updated 8 ಜನವರಿ 2024, 14:29 IST
ಅಕ್ಷರ ಗಾತ್ರ

ತುಮಕೂರು: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರದಿಂದ ಹುಣಸೆ ಹಣ್ಣಿನ ವಹಿವಾಟು ಆರಂಭವಾಗಿದೆ.ಆರಂಭದಲ್ಲೇ ಉತ್ತಮ ಬೆಲೆ ಸಿಕ್ಕಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಪ್ರಸಕ್ತ ಹಂಗಾಮಿನ ಮೊದಲ ದಿನ ಎಪಿಎಂಸಿ ಮಾರುಕಟ್ಟೆಗೆ ಸುಮಾರು ಮೂರು ಟನ್‌ ಹುಣಸೆ ಹಣ್ಣು ಬಂದಿತ್ತು. ಒಂದು ಕ್ವಿಂಟಲ್‌ ₹12 ಸಾವಿರದಿಂದ ಆರಂಭವಾಗಿ ₹20 ಸಾವಿರದವರೆಗೂ ಮಾರಾಟವಾಗಿದೆ.

ಒಂದು ಗೂಡೆ (ದೊಡ್ಡ ಬುಟ್ಟಿ) ₹23 ಸಾವಿರಕ್ಕೆ ಮಾರಾಟವಾಗಿರುವುದು ವಿಶೇಷ. ಗೋಟು ಹಣ್ಣು ಕ್ವಿಂಟಲ್ ₹2 ಸಾವಿರ, ಬೀಜ ಮಿಶ್ರಿತ ಹಣ್ಣಿಗೆ ₹4,500ರಿಂದ ₹7 ಸಾವಿರ ಬೆಲೆ ಸಿಕ್ಕಿದೆ.

ಮಾರುಕಟ್ಟೆಯ ಮೊದಲ ದಿನವೇ ಹುಣಸೆ ಹಣ್ಣು ಉತ್ತಮ ಬೆಲೆ ಕಂಡುಕೊಂಡಿದೆ. ಮುಂದಿನ ಕೆಲವು ವಾರಗಳ ಕಾಲ ಇದೇ ಬೆಲೆ ಇರುತ್ತದೆ. ಮಾಲು ಬರುವುದು ಹೆಚ್ಚಾದರೆ ಬೆಲೆ ಕುಸಿಯಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಹೊರಗಡೆಯಿಂದ ಖರೀದಿದಾರರು ಬಂದರೆ ಇದೇ ಬೆಲೆ ಮುಂದುವರಿಯಬಹುದು. ಈಗಲೇ ಬೆಲೆಯ ಬಗ್ಗೆ ಸ್ಪಷ್ಟವಾಗಿ ನಿರ್ಧರಿಸುವುದು ಕಷ್ಟ. ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಬೆಲೆ ಸಿಗಬಹುದು ಎಂದು ಮಾರುಕಟ್ಟೆ ಮೂಲಗಳು ಹೇಳಿವೆ.

ಇನ್ನೂ ವಾತಾವರಣ ತಂಪಾಗಿದೆ. ಒಂದೆರಡು ವಾರ ಮಾರುಕಟ್ಟೆಗೆ ಹಣ್ಣು ಬರುವ ಪ್ರಮಾಣ ಕಡಿಮೆ ಇರುತ್ತದೆ. ಬಿಸಿಲಿನ ಪ್ರಮಾಣ ಅಧಿಕವಾದಂತೆ ಹುಣಸೆ ಕಾಯಿ ಬಿಡಿಸಿ, ಹಣ್ಣು ಮಾಡಿಕೊಂಡು ಮಾರುಕಟ್ಟೆಗೆ ತರುವುದು ಹೆಚ್ಚಾಗುತ್ತದೆ. ಸದ್ಯಕ್ಕೆ ಸೋಮವಾರ ಹಾಗೂ ಗುರುವಾರ ಮಾರುಕಟ್ಟೆಯಲ್ಲಿ ಹರಾಜು ನಡೆಯಲಿದೆ. ಹಣ್ಣು ಬರುವುದು ಹೆಚ್ಚಾದರೆ ಹಂಗಾಮು ಮುಗಿಯುವವರೆಗೂ ಪ್ರತಿ ದಿನವೂ ಮಾರುಕಟ್ಟೆಯಲ್ಲಿ ವಹಿವಾಟು ನಡೆಯಲಿದೆ ಎಂದು ವರ್ತಕ ಎಚ್.ಪಿ.ದೇವೇಂದ್ರಪ್ಪ ತಿಳಿಸಿದರು.

ಮಳೆ ಕೊರತೆಯಿಂದಾಗಿ ಈ ಬಾರಿ ಮರಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ಕಾಯಿಗಳಾಗಿವೆ. ನಿರ್ದಿಷ್ಟ ಪ್ರದೇಶದಲ್ಲಿ ಮಳೆ ಬಿದ್ದಿದ್ದರಿಂದ ಕೆಲವು ಕಡೆಗಳಲ್ಲಿ ಇಳುವರಿ ಚೆನ್ನಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಹಣ್ಣಿನ ತಿರುಳಿನ ದಪ್ಪ ಕಡಿಮೆ ಇದೆ. ಇದು ಇಳುವರಿ ಮೇಲೆ ಪರಿಣಾಮ ಬೀರಲಿದೆ ಎನ್ನುತ್ತಾರೆ ಹುಣಸೆ ಹಣ್ಣಿನ ದಲ್ಲಾಳಿಗಳು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT