ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊರಟಗೆರೆ | ಥರಟಿ ಕೆರೆ ಏರಿ ಬಿರುಕು: ದುರಸ್ತಿ

Published 8 ಜೂನ್ 2024, 13:02 IST
Last Updated 8 ಜೂನ್ 2024, 13:02 IST
ಅಕ್ಷರ ಗಾತ್ರ

ಕೊರಟಗೆರೆ: ತಾಲ್ಲೂಕಿನ ಜಟ್ಟಿಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಥರಟಿ ಗ್ರಾಮದ ಕೆರೆ ಏರಿ ಕೊರೆದು ನೀರು (ಮಂಗೆ ಬಿದ್ದು) ಹೋಗುತ್ತಿದ್ದ ಬಗ್ಗೆ ಕೇಳಿ ಬಂದ ಸಾರ್ವಜನಿಕರ ದೂರಿನ ಮೇರೆಗೆ ಅಧಿಕಾರಿಗಳು ಶನಿವಾರ ತಾತ್ಕಾಲಿಕ ದುರಸ್ತಿ ನಡೆಸಿದರು.

ತಾಲ್ಲೂಕಿನ ಥರಟಿ ಗ್ರಾಮದ ಕೆರೆ ಹಳೇ ಕೆರೆಯಾಗಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಬಿದ್ದ ಮಳೆಯಿಂದಾಗಿ ಸಾಕಷ್ಟು ನೀರು ಬಂದು ಕೆರೆ ತುಂಬಿದೆ. ಏರಿಯನ್ನು ಬಹಳ ವರ್ಷಗಳಿಂದ ನಿರ್ವಹಣೆ ಮಾಡದಿರುವ ಕಾರಣಕ್ಕೆ ಬಹಳಷ್ಟು ಬೇಲಿ ಬೆಳೆದುಕೊಂಡಿದೆ. ಏರಿ ಮಣ್ಣನ್ನು ಇಲಿ, ಹೆಗ್ಗಣಗಳು ತೋಡಿ ಅಲ್ಲಲ್ಲಿ ಹಾಳಾಗಿದೆ.

ಗುರುವಾರ ರಾತ್ರಿ ಅಧಿಕ ಮಳೆ ಸುರಿದ್ದರಿಂದ ಒಂದೇ ರಾತ್ರಿಗೆ ಸಾಕಷ್ಟು ನೀರು ಬಂದ ಕಾರಣ ಕೆರೆ ಭರ್ತಿ ಆಗಿದೆ. ನೀರು ಹೆಚ್ಚಾದಾಗ ಏರಿ ಮಧ್ಯ ಭಾಗದಲ್ಲಿ ಮಂಗೆ ಬಿದ್ದು ನೀರು ಜಿನುಗಲು ಪ್ರಾರಂಭವಾಯಿತು. ಮೊದಲು ಸಣ್ಣದಾಗಿ ಜಿನುಗುತ್ತಿದ್ದ ನೀರು ಕ್ರಮೇಣ ಹೆಚ್ಚಾಗಿ ಏರಿ ಒಡೆಯುವ ಮುನ್ಸೂಚನೆ ಕಂಡು ಬಂತು. ಸಾರ್ವಜನಿಕರು ಕೂಡಲೇ ಪಂಚಾಯಿತಿ ಅಧಿಕಾರಿಗಳಿಗೆ ದೂರು ಸಲ್ಲಿಸಿದರು. ಎಚ್ಚೆತ್ತ ಅಧಿಕಾರಿಗಳು ಶನಿವಾರ ಸ್ಥಳೀಯ ರೈತರ ಸಹಾಯದಿಂದ ಮಂಗೆ ಬಿದ್ದ ಜಾಗವನ್ನು ಮರಳು ಚೀಲ ತುಂಬಿ ಹಾಕುವ ಮೂಲಕ ಮುಚ್ಚಿಸಿದರು. ಆದರೂ ಅಲ್ಪಸ್ವಲ್ಪ ನೀರು ಏರಿ ಮಧ್ಯ ಭಾಗದಲ್ಲಿ ಇನ್ನೂ ಜಿನುಗುತ್ತಿದೆ. ಏರಿ ಒಡೆಯದಂತೆ ಮುನ್ನೆಚ್ಚೆರಿಕೆ ಕ್ರಮವಾಗಿ ತೂಬಿನ ಮೂಲಕ ನೀರನ್ನು ಹೊರ ಬಿಡಲಾಗಿದೆ. ಗುರುವಾರ ರಾತ್ರಿಯೇ ಏರಿ ಮಧ್ಯ ಬಿರುಕು ಬಿದ್ದಿದ್ದರಿಂದ ಒಂದಷ್ಟು ನೀರು ಹೊರಹೋಗಿ ಪೋಲಾಗಿದೆ ಎಂದು ಸ್ಥಳೀಯ ರೈತರು ಮಾಹಿತಿ ನೀಡಿದ್ದಾರೆ.

ಅವಘಡ ಆದಾಗ ಮಾತ್ರ ಬರುವ ಅಧಿಕಾರಿಗಳು: ತಾಲ್ಲೂಕಿನ ಬಹುತೇಕ ಕೆರೆ ಏರಿಗಳು ನಿರ್ವಹಣೆ ಇಲ್ಲದೆ ಹಾಳಾಗಿವೆ. ಮಳೆ ಬಂದು ನೀರು ತುಂಬಿಕೊಂಡಾಗ ಏಕಾಏಕಿ ಒಡೆದು ನೀರು ಪೋಲಾಗುವುದರೊಂದಿಗೆ ಬೆಳೆ ನಷ್ಟ ಉಂಟಾಗುತ್ತದೆ. ಮಳೆಗಾಲಕ್ಕೂ ಮೊದಲು ಪ್ರಮುಖ ಕೆರೆ ಏರಿಗಳ ಅಭಿವೃದ್ಧಿ ಬಗ್ಗೆ ತಾಲ್ಲೂಕು ಆಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸದೇ ಇರುವುದು ಈ ಎಲ್ಲ ಅವಘಡಗಳಿಗೆ ಕಾರಣ. ಈ ವರ್ಷ ಹೆಚ್ಚು ಮಳೆಯಾದರೆ ಇನ್ನಷ್ಟು ಕೆರೆಗಳು ಇದೇ ರೀತಿ ಒಡೆದು ಅವಘಡ ಸಂಭವಿಸಿದರೆ ಆಶ್ಚರ್ಯ ಪಡಬೇಕಿಲ್ಲ. ಅವಘಡ ಸಂಭವಿಸಿದಾಗ ಬರುವ ಅಧಿಕಾರಿಗಳು, ಅವಘಡಕ್ಕೂ ಮುನ್ನ ಮುನ್ನೆಚ್ಚರಿಕೆ ವಹಿಸುತ್ತಿಲ್ಲ ಎಂದು ಸಾರ್ವಜನಿಕರು, ರೈತರು ತಾಲ್ಲೂಕು ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT