ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

​ಪಾವಗಡ | ದಶಕದಿಂದಲೂ ದುಸ್ಥಿತಿಯಲ್ಲಿರುವ ಬಸ್‌ ನಿಲ್ದಾಣ

ಬಸ್ ನಿಲ್ದಾಣವೊ, ಮಾರುಕಟ್ಟೆಯೊ ಎಂಬ ಅನುಮಾನ ಮೂಡಿಸುವಂತಿದೆ ಈ ತಂಗುದಾಣ
Published 1 ಏಪ್ರಿಲ್ 2024, 6:27 IST
Last Updated 1 ಏಪ್ರಿಲ್ 2024, 6:27 IST
ಅಕ್ಷರ ಗಾತ್ರ

ಪಾವಗಡ: ಮೂಲ ಸೌಕರ್ಯಗಳ ಕೊರತೆ, ಅಸಮರ್ಪಕ ನಿರ್ವಹಣೆಯಿಂದಾಗಿ ಪಟ್ಟಣದ ಬಸ್ ನಿಲ್ದಾಣಕ್ಕೆ ನಿತ್ಯ ಬರುವ ಸಹಸ್ರಾರು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಶನೈಶ್ಚರ ದೇಗುಲ, ಸೋಲಾರ್ ಪಾರ್ಕ್‌ನಿಂದಾಗಿ ತಾಲ್ಲೂಕು ಜನಪ್ರಿಯತೆ ಗಳಿಸಿದೆ. ಇತರೆಡೆಯಿಂದ ಬರುವ ಪ್ರಯಾಣಿಕರಿಗೆ ಇದು ಬಸ್ ನಿಲ್ದಾಣವೊ, ಮಾರುಕಟ್ಟೆಯೊ ಎಂಬ ಅನುಮಾನ ಮೂಡಿಸುತ್ತದೆ.

ಹೂವಿನ ಮಂಡಿ, ಸಾಲು ಸಾಲು ಹಣ್ಣುಗಳ ಅಂಗಡಿ, ಟೀ, ಕಾಫಿ ಹೋಟೆಲ್, ತಂಪು ಪಾನೀಯ, ಕಡಲೆಕಾಯಿ, ಐಸ್ ಕ್ರೀಂ ಮಾರಾಟ  ಗಾಡಿಗಳು ಸೇರಿದಂತೆ ಎಲ್ಲವೂ ಬಸ್ ನಿಲ್ದಾಣದಲ್ಲಿಯೇ ಇವೆ. ಹೀಗಾಗಿ ಬಸ್ ನಿಲ್ದಾಣದಲ್ಲಿ ಮಾರುಕಟ್ಟೆ ಇದೆಯೊ ಅಥವಾ ಸಂತೆ ಮೈದಾನದಲ್ಲಿ ಬಸ್ ನಿಲ್ದಾಣವಿದೆಯೊ ಎಂಬ ಅನುಮಾನ ಕಾಡುತ್ತದೆ. ಸೂಕ್ತ ನಿರ್ವಹಣೆ ಇಲ್ಲದೆ ನಿಲ್ದಾಣ ದಿನದಿಂದ ದಿನಕ್ಕೆ ಮಾರುಕಟ್ಟೆಯಾಗಿ ಬದಲಾಗುತ್ತಿದೆ.

ರಾಜಧಾನಿ, ಜಿಲ್ಲಾ ಕೇಂದ್ರದಿಂದ ಪಟ್ಟಣ ನೂರಾರು ಕಿ.ಮೀ ದೂರವಿದೆ. ಆಂಧ್ರಪ್ರದೇಶದ ಪ್ರಮುಖ ಪಟ್ಟಣಗಳು ಹಾಗೂ ರಾಜ್ಯದ ಪ್ರಮುಖ ಸ್ಥಳಗಳಿಗೆ ಪಾವಗಡ ಸಂಪರ್ಕ ಕಲ್ಪಿಸುವ ಕೇಂದ್ರದಂತಿದೆ. ಪಟ್ಟಣಕ್ಕೆ ನಿತ್ಯ 250ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌, 80ಕ್ಕೂ ಹೆಚ್ಚು ಖಾಸಗಿ ಬಸ್‌, ಆಂಧ್ರ ಸರ್ಕಾರದ 50 ಬಸ್‌ಗಳು ಬಂದು ಹೋಗುತ್ತವೆ. ಗಂಟೆಗಟ್ಟಲೆ ಬಸ್‌ಗಾಗಿ ಕಾಯುವ ಸಾವಿರಾರು ಮಂದಿ ಪ್ರಯಾಣಿಕರಿಗೆ ಆಸರೆಯಾಗಬೇಕಿದ್ದ ಬಸ್ ನಿಲ್ದಾಣ ವ್ಯಾಪಾರಿಗಳು, ಜೇಬುಗಳ್ಳರು, ಸರಗಳ್ಳರ ತಾಣವಾಗಿದೆ.

ನಿಲ್ದಾಣದೊಳಕ್ಕೆ ಹೋಗಲು ಬಸ್ ಚಾಲಕರು ಹರಸಾಹಸ ಪಡಬೇಕಿದೆ. ಬಸ್ ನಿಲ್ದಾಣದೊಳಗೆ ಹೋಗುವುದೇ ಪ್ರಯಾಸದ ಸಂಗತಿ. ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕಿರಿದಾಗಿವೆ. ರಸ್ತೆ ಇಕ್ಕೆಲಗಳಲ್ಲಿ ಎಲ್ಲೆಂದರಲ್ಲಿ ದ್ವಿಚಕ್ರ ವಾಹನ, ಆಟೊ, ಲಾರಿ ಸೇರಿದಂತೆ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇವುಗಳ ಜತೆಗೆ ಹೂವಿನ ಅಂಗಡಿ, ತಳ್ಳುವ ಗಾಡಿಗಳು ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿಯೇ ಇರುತ್ತವೆ. ಸುತ್ತಲೂ ಎರಡರಿಂದ ಮೂರು ಆಟೊ ನಿಲ್ದಾಣ, ಬಾಡಿಗೆ ವಾಹನಗಳ ನಿಲ್ದಾಣ ರಸ್ತೆಯನ್ನು ಆಕ್ರಮಿಸಿಕೊಂಡಿವೆ.

ಎಗ್ಗಿಲ್ಲದೆ ಬಸ್ ನಿಲ್ದಾಣದೊಳಗೆ ಬರುವ ಖಾಸಗಿ ವಾಹನಗಳು: ಬಸ್ ನಿಲ್ದಾಣದೊಳಗೆ ದ್ವಿಚಕ್ರ ವಾಹನ, ಕಾರು, ಆಟೊ, ಲಗೇಜ್ ವಾಹನಗಳ ಪ್ರವೇಶ ನಿರ್ಬಂಧಿಸದ ಕಾರಣ ಬಸ್‌ಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ವಾಹನಗಳು ಸಂಚರಿಸುತ್ತಿರುತ್ತವೆ. ಹೀಗಾಗಿ ನಿತ್ಯ ಒಂದಿಲ್ಲೊಂದು ಅಪಘಾತಗಳಾಗುತ್ತಿವೆ. ಯಾವಾಗ ಎತ್ತ ಕಡೆಯಿಂದ ಯಾವ ವಾಹನ ಬರುತ್ತವೆಯೊ ಎಂಬ ಭಯದಲ್ಲಿ ಪ್ರಯಾಣಿಸಬೇಕಿದೆ.

ಈ ಹಿಂದೆ ಬಸ್ ನಿಲ್ದಾಣದಲ್ಲಿ ಪೊಲೀಸ್ ಹೊರ ಠಾಣೆ ತೆರೆಯಲಾಗಿತ್ತು. ಅಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿತ್ತು. ಜೇಬುಗಳ್ಳರು, ಸರಗಳ್ಳರ ಹಾವಳಿ ಕಡಿಮೆ ಆಗಿತ್ತು. ಪ್ರಯಾಣಿಕರು ಸಮಸ್ಯೆಗಳನ್ನು ಪೊಲೀಸ್ ಸಿಬ್ಬಂದಿ ಮೂಲಕ ಬಗೆಹರಿಸಿಕೊಳ್ಳುತ್ತಿದ್ದರು. ಆದರೆ ಸದ್ಯ ಹಲವು ವರ್ಷಗಳಿಂದ ಹೊರ ಠಾಣೆ ಮುಚ್ಚಲಾಗಿದೆ. ಪೊಲೀಸ್ ಸಿಬ್ಬಂದಿ ಇರದ ಕಾರಣ ಸರಗಳವು, ಜೇಬುಗಳ್ಳತನದಂತಹ ಅಪರಾಧ ಚಟುವಟಿಕೆಗಳು ಹೆಚ್ಚಿವೆ.

ರಾತ್ರಿ 6.30ರಿಂದ ಬೆಳಿಗ್ಗೆ 6.30ರವರೆಗೆ ನಿಲ್ದಾಣಕ್ಕೆ ಖಾಸಗಿ, ಸರ್ಕಾರಿ ಬಸ್‌ಗಳು ಬರುವುದಿಲ್ಲ. ಈ ಅವಧಿಯಲ್ಲಿ ಶನೈಶ್ಚರ ವೃತ್ತದಲ್ಲಿ ಬಸ್‌ ನಿಲ್ಲಿಸಲಾಗುತ್ತದೆ. ಶಿರಾ, ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ, ಬಳ್ಳಾರಿ, ಕಲ್ಯಾಣದುರ್ಗ ಇತರೆಡೆ ಹೋಗುವ ಬಸ್‌ಗಳನ್ನು ಶನೈಶ್ಚರ ವೃತ್ತದಲ್ಲಿ ನಿಲ್ಲಿಸುವುದರಿಂದ ಈ ಪ್ರದೇಶದಲ್ಲಿ ಇತರೆ ವಾಹನಗಳು ಸಂಚರಿಸಲು ಸಾಧ್ಯವಾಗುವುದಿಲ್ಲ. ಬಸ್ ನಿಲ್ದಾಣವಿದ್ದರೂ ವೃತ್ತವನ್ನೇ ಬಸ್ ನಿಲ್ದಾಣವನ್ನಾಗಿ ಮಾರ್ಪಡಿಸಲಾಗುತ್ತದೆ. ಹಾಗಾಗಿ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ.

ಯಾರು ಏನಂದರು?

ಇರುವ ಆಸನಗಳು ಸಾವಿರಾರು ಸಂಖ್ಯೆಯ ಪ್ರಯಾಣಿಕರಿಗೆ ಸಾಕಾಗುತ್ತಿಲ್ಲ. ಹೆಚ್ಚಿನ ಆಸನಗಳ ವ್ಯವಸ್ಥೆ ಮಾಡಬೇಕು. ವೃದ್ಧರು ಮಹಿಳೆಯರು ಮಕ್ಕಳ ವಿಶ್ರಾಂತಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಬೇಕು– ಸುಶೀಲಮ್ಮ

ನಿಲ್ದಾಣಕ್ಕೆ ಹೆಚ್ಚಿನ ವಿದ್ಯುತ್‌ ದೀಪಗಳು ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಿ ರಾತ್ರಿಯೂ ಬಸ್‌ಗಳು ನಿಲ್ದಾಣಕ್ಕೆ ಬಂದು ಹೋಗುವಂತಾಗಬೇಕು. ಪ್ರಯಾಣಿಕರು ನಿರ್ಭೀತಿಯಿಂದ ನಿಲ್ದಾಣಕ್ಕೆ ಬಂದು ಹೋಗುವ ವ್ಯವಸ್ಥೆಯಾಗಬೇಕು – ಸುಬ್ರಹ್ಮಣ್ಯಂ

ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಹೂವಿನ ಮಂಡಿಯನ್ನು ಬೇರೆಡೆ ಸ್ಥಳಾಂತರಿಸಬೇಕು. ಬಸ್‌ಗಳೂ ನಿಲ್ದಾಣಕ್ಕೆ ಬಂದು ಹೋಗುವ ಮಾರ್ಗದಲ್ಲಿನ ಒತ್ತುವರಿ ತೆರವುಗೊಳಿಸಿ ರಸ್ತೆ ವಿಸ್ತರಣೆ ಮಾಡಬೇಕು – ಲಕ್ಷ್ಮಿನರಸಿಂಹ

ಬಸ್ ನಿಲ್ದಾಣದಲ್ಲಿ ತಳ್ಳುವ ಗಾಡಿಯವರು ಒಂದೆಡೆ ವ್ಯಾಪಾರ ಮಾಡಿಕೊಳ್ಳಲು ಅವಕಾಶ ನೀಡಬೇಕು. ನಿಲ್ದಾಣದ ಮಧ್ಯ ಭಾಗಕ್ಕೆ ಬರುವ ತಳ್ಳುವ ಗಾಡಿಗಳನ್ನು ನಿಯಂತ್ರಿಸಬೇಕು. ದ್ವಿಚಕ್ರ ವಾಹನ ಆಟೊ ಸೇರಿದಂತೆ ಖಾಸಗಿ ವಾಹನಗಳು ನಿಲ್ದಾಣ ಪ್ರವೇಶಿಸದಂತೆ ನಿರ್ಬಂಧಿಸಬೇಕು – ಪವನ್ ಕುಮಾರ್

ಶೌಚಾಲಯ ಕುಡಿಯುವ ನೀರು ಮೊದಲಾದ ಸೌಕರ್ಯ ಕಲ್ಪಿಸಬೇಕು. ಬಸ್ ನಿಲ್ದಾಣದ ಸ್ವಚ್ಛತೆಗಾಗಿಯೇ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಬೇಕು. ಕಸ ಕಡ್ಡಿ ಹಾಕದಂತೆ ನೋಡಿಕೊಳ್ಳಬೇಕು – ಶ‍್ರೀನಿವಾಸ ರಾಘವೇಂದ್ರ

ಪಾವಗಡ ಬಸ್ ನಿಲ್ದಾಣದಲ್ಲಿ ನಿಲ್ಲಿಸಿಕೊಂಡಿರುವ ಆಟೊ ತಳ್ಳುವ ಗಾಡಿಗಳು
ಪಾವಗಡ ಬಸ್ ನಿಲ್ದಾಣದಲ್ಲಿ ನಿಲ್ಲಿಸಿಕೊಂಡಿರುವ ಆಟೊ ತಳ್ಳುವ ಗಾಡಿಗಳು
ಬಸ್ ನಿಲ್ದಾಣದಲ್ಲಿ ತಳ್ಳುವ ಗಾಡಿಗಳ ಮೂಲಕ ತಂಪು ಪಾನೀಯ ಐಸ್ ಕ್ರೀಂ ಮಾರಾಟ
ಬಸ್ ನಿಲ್ದಾಣದಲ್ಲಿ ತಳ್ಳುವ ಗಾಡಿಗಳ ಮೂಲಕ ತಂಪು ಪಾನೀಯ ಐಸ್ ಕ್ರೀಂ ಮಾರಾಟ
ಬಸ್ ನಿಲ್ದಾಣದ ಕಾರಿಡಾರ್‌ನಲ್ಲಿ ಹೂವು ಬಳೆ ಇತ್ಯಾದಿ ಮಾರಾಟ
ಬಸ್ ನಿಲ್ದಾಣದ ಕಾರಿಡಾರ್‌ನಲ್ಲಿ ಹೂವು ಬಳೆ ಇತ್ಯಾದಿ ಮಾರಾಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT