ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುರುಬರಿಂದ ‘ರಾಜಭವನ ಚಲೋ’ ಎಚ್ಚರಿಕೆ

ಸಿದ್ದರಾಮಯ್ಯ ಬೆನ್ನಿಗೆ ನಿಂತ ಕುರುಬರು
Published : 6 ಆಗಸ್ಟ್ 2024, 16:43 IST
Last Updated : 6 ಆಗಸ್ಟ್ 2024, 16:43 IST
ಫಾಲೋ ಮಾಡಿ
Comments

ತುಮಕೂರು: ‘ಕೋಮುವಾದಿ, ಜಾತಿವಾದಿ, ಪಟ್ಟಭದ್ರ ಹಿತಾಸಕ್ತಿಗಳು ಅಧಿಕಾರದ ದಾಹ, ಕುರ್ಚಿಯ ಆಸೆಗಾಗಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿವೆ. ಬಿಜೆಪಿ, ಜೆಡಿಎಸ್‌ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ’ ಎಂದು ಕುರುಬ ಸಮುದಾಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಕರ್ನಾಟಕ ಪ್ರದೇಶ ಕುರುಬರ ಸಂಘ, ಜಿಲ್ಲಾ ಕುರುಬರ ಸಂಘ, ಕಾಳಿದಾಸ ವಿದ್ಯಾವರ್ಧಕ ಸಂಘ, ಕನಕ ಯುವಸೇನೆ ಹಾಗೂ ಜಿಲ್ಲೆಯ ವಿವಿಧ ಕುರುಬ ಸಂಘಟನೆಗಳ ಮುಖಂಡರು ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಶೋಕಾಸ್‌ ನೋಟಿಸ್‌ ನೀಡಿರುವುದನ್ನು ವಿರೋಧಿಸಿ, ಅವರ ತೇಜೋವಧೆ ಖಂಡಿಸಿ ಪ್ರತಿಭಟನೆ ನಡೆಸಿದರು.

ರಾಜ್ಯಪಾಲರು ತಮ್ಮ ನಡೆಯಿಂದ ಹಿಂದೆ ಸರಿಯದಿದ್ದರೆ ‘ರಾಜಭವನ ಚಲೋ’ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಬಿಜಿಎಸ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯ ತನಕ ಪ್ರತಿಭಟನಾ ಮೆರವಣಿಗೆ ನಡೆಯಿತು. ಬಿಜೆಪಿ, ಜೆಡಿಎಸ್‌ ನಾಯಕರ ವಿರುದ್ಧ ಘೋಷಣೆ ಕೂಗಿದರು. ಸಿದ್ದರಾಮಯ್ಯ ವರ್ಚಸ್ಸಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರು ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ರಾಜ್ಯಪಾಲರ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸೇರಿದಂತೆ ವಿವಿಧ ಹುದ್ದೆಗಳನ್ನು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ನಿಭಾಯಿಸಿದ್ದಾರೆ. ಅವರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ಮಾಡುತ್ತಿದ್ದಾರೆ. ಅಧಿಕಾರದಿಂದ ಕೆಳಗಿಳಿಸಿ ಹಿಂದುಳಿದ ವರ್ಗಗಳ ನಾಯಕತ್ವ ಕೊನೆಗಾಣಿಸಬಹುದು ಎಂದು ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮೈಲಪ್ಪ ದೂರಿದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಆರ್.ಸುರೇಶ್, ‘ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದಲ್ಲಿ ಸಿದ್ದರಾಮಯ್ಯ ಅವರ ಹೆಸರನ್ನು ತಳಕು ಹಾಕಲಾಗುತ್ತಿದೆ. ಈ ಹಿಂದೆಯೂ ಹಿಂದುಳಿದ ವರ್ಗಗಳ ನಾಯಕರಾದ ದೇವರಾಜ ಅರಸು, ಎಸ್‌.ಬಂಗಾರಪ್ಪ, ವೀರಪ್ಪ ಮೊಯಿಲಿ, ಧರ್ಮಸಿಂಗ್‌ ವಿರುದ್ಧ ಇಂತಹ ಷಡ್ಯಂತ್ರ ರೂಪಿಸಲಾಗಿತ್ತು. ಈಗ ಶೋಷಿತ ಸಮುದಾಯಗಳು ಜಾಗೃತವಾಗಿವೆ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ಪರ ಬಂಡೆಯಂತೆ ನಿಂತಿವೆ’ ಎಂದರು.

ಕನಕ ಯುವಸೇನೆ ಅಧ್ಯಕ್ಷ ಕೆಂಪರಾಜು, ಕನಕ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಸುನೀತಾ ನಟರಾಜ್, ಮುಖಂಡರಾದ ಸೌಭಾಗ್ಯ, ಗುರುಪ್ರಸಾದ್, ಅನಿಲ್, ಮಹೇಶ್, ಮಹಾಲಿಂಗಯ್ಯ, ಪುಟ್ಟಣ್ಣ, ಜ್ವಾಲಮಾಲ ರಾಜಣ್ಣ, ಸಂಪತ್‌ ಕುಮಾರಿ, ಮಂಜುಳಾ, ಟಿ.ಇ.ರಘುರಾಮ್ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT