ಭಾನುವಾರ, ಆಗಸ್ಟ್ 1, 2021
22 °C
ಕೋವಿಡ್‌ ಆಸ್ಪತ್ರೆಯಲ್ಲಿ ‘ಡಿ ಗ್ರೂಪ್‌’ ನೌಕರರಾಗಿರುವ ಮನೋಜ್‌ ಡಿಸೋಜ ಅಭಿಪ್ರಾಯ

ವೃತ್ತಿ ಬದುಕಿನ ವಿಶಿಷ್ಟ ಸವಾಲು

ಅಭಿಲಾಷ ಬಿ.ಸಿ. Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯಲ್ಲಿ ಮೊದಲ ಕೊರೊನಾ ಸೋಂಕು ಪತ್ತೆಯಾದಾಗ ಅವರನ್ನು ಉಪಚರಿಸುವ ತಂಡದಲ್ಲಿ ನಾನು ಇದ್ದೆ. ಪಿಪಿಇ ಕಿಟ್‌ ಸೇರಿದಂತೆ ಯಾವುದೇ ಸುರಕ್ಷತಾ ಕ್ರಮಗಳು ಇಲ್ಲದೆ ಚಿಕಿತ್ಸೆ ನೀಡಿದ್ದೆವು. ಪತ್ನಿ ಗರ್ಭಿಣಿಯಾಗಿದ್ದರು. ಆಕೆಗೆ ಏನಾದರೂ ಹೆಚ್ಚುಕಡಿಮೆಯಾದರೆ ಎಂದು ತೀವ್ರ ಆತಂಕಗೊಂಡಿದ್ದೆ. ದೇವರ ದಯೆಯಿಂದ ಯಾವುದೇ ತೊಂದರೆಯಾಗಲಿಲ್ಲ.

–ಇದು ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ‘ಡಿ ಗ್ರೂಪ್‌’ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಮನೋಜ್‌ ಡಿಸೋಜ ಅವರ ಮಾತು.

‘ನಿತ್ಯ ಕೋವಿಡ್‌ ವಾರ್ಡ್ ಸ್ವಚ್ಛಗೊಳಿಸುತ್ತೇನೆ. ಆದರೆ ಅದಕ್ಕಿಂತ ಸೋಂಕಿತರ ಸಮಸ್ಯೆಗಳಿಗೆ ದನಿಯಾಗುವುದೇ ಪ್ರಮುಖ ಕೆಲಸವಾಗಿದೆ. ರೋಗಿಗಳ ಅಗತ್ಯ ಪೂರೈಸುವುದು, ಅವರೊಂದಿಗಿನ ಉತ್ತಮ ಒಡನಾಟವೇ ಅವರನ್ನು ಆದಷ್ಟು ಬೇಗ ಗುಣಮುಖವಾಗಿಸುತ್ತದೆ ಎನ್ನುವುದು ನನ್ನ ನಂಬಿಕೆ’ ಎನ್ನುತ್ತಾರೆ.

ವೈದ್ಯರು ಆಗಾಗ್ಗೆ ಬಂದು ಪರೀಕ್ಷಿಸಿ, ರೋಗಿಗಳಿಗೆ ಧೈರ್ಯ ತುಂಬುತ್ತಾರೆ. ಆದರೆ ನಾವು ಹೆಚ್ಚು ಸಮಯ ಕಳೆಯುತ್ತೇವೆ. ಈ ರೋಗಿಗಳನ್ನು ನೋಡಿಕೊಳ್ಳಲು ಅವರ ಕಡೆಯವರು ಯಾರು ಇರುವುದಿಲ್ಲ. ನಾವೇ ಕುಟುಂಬದವರ ರೀತಿ ಇರುತ್ತೇವೆ. ಅವರ ಎಲ್ಲ ಕಷ್ಟ, ಸುಖಗಳನ್ನು ಹಂಚಿಕೊಳ್ಳುತ್ತಾರೆ. ಹಾಗಾಗಿ ಇತರ ರೋಗಿಗಳಿಗಿಂತ ಭಿನ್ನವಾದ ಬಾಂಧವ್ಯ ಇವರೊಂದಿಗೆ ಬೆಳೆಯುತ್ತದೆ ಎನ್ನುವುದು ಮನೋಜ್‌ ಅವರ ಅನುಭವದ ಮಾತು.

‘ಕೆಲ ರೋಗಿಗಳು ಹಣ್ಣು, ಮಾಂಸಹಾರ ತಂದು ಕೊಡುವಂತೆ ಕೇಳುತ್ತಿದ್ದರು. ಸಾಧ್ಯವಾದರೆ ನಾನೇ ತಂದು ಕೊಡುತ್ತಿದ್ದೆ. ಇಲ್ಲವಾದರೆ ದಾನಿಗಳ ನೆರವಿನಿಂದ ತಂದು ಕೊಡುತ್ತಿದೆ. ತಿಂದು ಅವರು ಖುಷಿಪಡುತ್ತಿದ್ದರು. ನನಗೆ ನಾನೇ ತಿಂದಷ್ಟು ಸಂತೋಷ ಪಡುತ್ತಿದ್ದೆ’ ಎಂದು ನೆನಪಿಸಿಕೊಂಡರು.

ನಿರಂತರವಾಗಿ 5ರಿಂದ 6 ಗಂಟೆ ವೈಯಕ್ತಿಕ ಸುರಕ್ಷಾ ಉಡುಗೆ (ಪಿಪಿಇ) ಕಿಟ್‌ ಧರಿಸಿ ತೆಗೆದ ನಂತರ ಸುಸ್ತು, ತಲೆನೋವು ಇರುತ್ತದೆ. ಊಟ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಒತ್ತಾಯ ಪೂರ್ವಕವಾಗಿ ಊಟ ಮಾಡಿದರೆ ವಾಂತಿಯಾಗುತ್ತಿತ್ತು. ಪ್ರಾರಂಭದಲ್ಲಿ ಹದಿನೈದು ದಿನ ಹೀಗೆ ಆಗುತ್ತಿತ್ತು. ನಂತರ ಒಗ್ಗಿಹೋಯಿತು ಎಂದರು.

ತಿಂಗಳು ರಜೆಯಿಲ್ಲ: ‘ಜಿಲ್ಲೆಯಲ್ಲಿ ಮೊದಲ ಕೋವಿಡ್‌ ಸೋಂಕು ದೃಢಪಟ್ಟ ನಂತರ ಒಂದು ತಿಂಗಳು ರಜೆಯೇ ಇರಲಿಲ್ಲ. ತಿಂಗಳ ನಂತರ 15 ದಿನ ಹೋಂ ಕ್ವಾರಂಟೈನ್‌ ಮಾಡಿದ್ದರು. ನಂತರ ಇತರ ರೋಗಿಗಳ ವಾರ್ಡ್‌ನ ಕೆಲಸಕ್ಕೆ ನೇಮಿಸಿದ್ದರು. ಆದರೆ ನಾನೇ ಮನವಿ ಮಾಡಿಕೊಂಡು ಕೋವಿಡ್‌ ವಾರ್ಡ್‌ಗೆ ಹಾಕಿಸಿಕೊಂಡಿದ್ದೇನೆ. ಇಲ್ಲಿನ ರೋಗಿಯೊಂದಿಗೆ ಕೆಲಸ ಮಾಡುವುದು ಖುಷಿ ಕೊಡುತ್ತದೆ. ಕುಟುಂಬದ ಬೆಂಬಲವೂ ಇದೆ’ ಎನ್ನುತ್ತಾರೆ ಮನೋಜ್‌.

‘ಮನೆಯಲ್ಲೂ ಆದಷ್ಟು ‍ಪ್ರತ್ಯೇಕವಾಗಿರುತ್ತೇನೆ. ಸಂಪೂರ್ಣ ವೈಯಕ್ತಿಕ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದೇನೆ’ ಎಂದರು.

ಸಾರ್ಥಕ ಕ್ಷಣದ ಪುಳಕ

ಯಾವುದೇ ರೋಗಿ ಗುಣಮುಖರಾಗಿ ಹೋಗುವಾಗ ಅವರ ಕುಟುಂಬದವರಿಗಿಂತ ಹೆಚ್ಚು ಸಂತೋಷವಾಗುತ್ತದೆ. ತಿಪಟೂರಿನ ಸೋಂಕಿತರೊಬ್ಬರಿಗೆ ನಾಲ್ಕು ಬಾರಿ ಗಂಟಲ ದ್ರವ ಪರೀಕ್ಷಿಸಿದಾಗಲೂ ಸೋಂಕು ಕಂಡುಬಂದಿತ್ತು. ಅವರೊಂದಿಗೆ ಆಸ್ಪತ್ರೆಗೆ ಸೇರಿದ ಎಲ್ಲ ರೋಗಿಗಳು ಗುಣಮುಖರಾಗಿ ಹೋಗುತ್ತಿದ್ದರು. ಆದರೆ ಇವರು ಮಾತ್ರ 20 ದಿನಕ್ಕೂ ಹೆಚ್ಚು ಆಸ್ಪತ್ರೆಯಲ್ಲಿಯೇ ಇದ್ದಿದ್ದರಿಂದ ತುಂಬಾ ಬೇಸರ ಮಾಡಿಕೊಂಡಿದ್ದರು. ಹಾಗಾಗಿ ನಾನು ನಿತ್ಯ ಅವರೊಂದಿಗೆ ಒಂದು ಗಂಟೆ ಮಾತನಾಡುತ್ತಿದ್ದೆ. ಅವರಿಗೆ ಧೈರ್ಯ ತುಂಬುತ್ತಿದೆ ಎಂದು ಮನೋಜ್‌ ನೆನಪಿಸಿಕೊಂಡರು. 

ಐದನೇ ಬಾರಿ ಪರೀಕ್ಷೆಯಲ್ಲಿ ಅವರಿಗೆ ಸೋಂಕು ಇಲ್ಲ ಎನ್ನುವುದು ಖಚಿತವಾಯಿತು. ಆಗ ಅವರಿಗಿಂತ ಹೆಚ್ಚು ನನಗೆ ಸಂತೋಷವಾಗಿತ್ತು. ಫಲಿತಾಂಶ ಕೇಳಿದಾಗ ಅವರು ಗುಣಮುಖರಾಗಿ ನಮ್ಮ ಮನೆಗೆ ಬರುತ್ತಿದ್ದಾರೆನೊ ಎನ್ನುವಷ್ಟು ಖುಷಿಯಾಗಿತ್ತು. ಅವರು ಹೋಗುವಾಗ ನಾನು ಅತ್ತುಬಿಟ್ಟೆ. ಅವರ ಕಣ್ಣಂಚಿನಲ್ಲಿದ್ದ ಕೃತಜ್ಞತಾ ಪೂರ್ವಕ ಕಣ್ಣೀರು ನನ್ನ ಜೀವನದಲ್ಲಿ ಎಂದೂ ಮರೆಯಲಾಗದು. ವೃತ್ತಿ ಬದುಕಿನ ಸಾರ್ಥಕ ಕ್ಷಣಗಳಲ್ಲಿ ಅದು ಒಂದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು