ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ನಗರದಲ್ಲೂ ಇವೆ ಶಿಥಿಲ ಕಟ್ಟಡ

Last Updated 8 ಅಕ್ಟೋಬರ್ 2021, 7:17 IST
ಅಕ್ಷರ ಗಾತ್ರ

ತುಮಕೂರು: ಬೆಂಗಳೂರು ಮಹಾನಗರದಲ್ಲಿ ಹಳೆಯದಾದ, ಶಿಥಿಲ ಕಟ್ಟಡಗಳು ಉರುಳಿಬಿದ್ದು ಅನಾಹುತ ಸಂಭವಿಸಿದ ಬೆನ್ನಲ್ಲೇ ನಗರದಲ್ಲೂ ಅಂತಹ ಕಟ್ಟಡಗಳು ಇರುವುದು ಬೆಳಕಿಗೆ ಬಂದಿದೆ.

ಅನಾಹುತಕ್ಕೆ ದಾರಿಮಾಡಿಕೊಡುವ ಕಟ್ಟಡಗಳು, ವಾಣಿಜ್ಯ ಮಳಿಗೆಗಳನ್ನು ತಕ್ಷಣ ತೆರವು ಮಾಡುವಂತೆ ಮಹಾನಗರ ಪಾಲಿಕೆ ಸೂಚನೆ ನೀಡಿದೆ. ಆದರೆ ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರಲಿದೆ ಎಂಬ ಪ್ರಶ್ನೆಎದುರಾಗಿದೆ.

ನಗರದ ಎನ್.ಆರ್.ಕಾಲೊನಿ, ಜೈಪುರ, ಅಂಬೇಡ್ಕರ್ ನಗರ ಸೇರಿದಂತೆ ಕೆಲವು ಕೊಳೆಗೇರಿಗಳು, ಇತರ ಬಡಾವಣೆ, ಪ್ರದೇಶಗಳಲ್ಲಿ ಸಾಕಷ್ಟು ವರ್ಷಗಳ ಹಿಂದೆ ನಿರ್ಮಿಸಿರುವ ಮನೆಗಳು ಬೀಳುವ ಸ್ಥಿತಿಯಲ್ಲಿ ಇರುವುದು ಪಾಲಿಕೆ ಗಮನಕ್ಕೆ ಬಂದಿದೆ. ಅಂತಹ ಕಟ್ಟಡಗಳನ್ನು ತಕ್ಷಣ ತೆರವು ಮಾಡುವಂತೆ ಪಾಲಿಕೆ ಅಧಿಕಾರಿಗಳು ಸೂಚಿಸಿದ್ದಾರೆ.

‘ನಗರದ ಕೆಲವು ಭಾಗಗಳು, ಬಡಾವಣೆಗಳಿಗೆ ಭೇಟಿ ನೀಡಿದ ಸಮಯದಲ್ಲಿ ಮನೆಗಳು, ವಾಣಿಜ್ಯ ಕಟ್ಟಡಗಳು ಶಿಥಿಲವಾಗಿರುವುದು ಗಮನಕ್ಕೆ ಬಂದಿದೆ. ಅಂತಹ ಕಟ್ಟಡಗಳನ್ನು ತೆರವುಗೊಳಿಸುವಂತೆ ಈಗ ಸೂಚಿಸಲಾಗಿದೆ. ಇದಕ್ಕಾಗಿ ಕಾಲಾವಕಾಶ ನೀಡಲಾಗಿದೆ. ಅಷ್ಟರಲ್ಲಿ ಮಾಲೀಕರು ತೆರವು ಮಾಡಿಸದಿದ್ದರೆ ಪಾಲಿಕೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು. ಒಂದು ತಿಂಗಳ ನಂತರ ನಗರದಲ್ಲಿನ ಶಿಥಿಲ ಕಟ್ಟಡಗಳ ಸಮೀಕ್ಷೆ ನಡೆಸಿ ತೆರವಿಗೆ ಕ್ರಮ ಜರುಗಿಸಲಾಗುವುದು’ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದರು.

ಮಳೆಗಾಲದಲ್ಲಿ ಅಥವಾ ಇನ್ನಿತರೆ ಸಂದರ್ಭಗಳಲ್ಲಿ ಮನೆಗಳು ಬಿದ್ದು ಅನಾಹುತ ಸಂಭವಿಸಿದರೆ ನೆರವು ಕಲ್ಪಿಸಲು ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿದೆ. ಈ ಕಾರ್ಯಕ್ಕೆ ಪ್ರಸ್ತುತ ಪಾಲಿಕೆ ಬಳಿ ₹50 ಲಕ್ಷ ಹಣವಿದೆ ಎಂದು ಹೇಳಿದರು.

ಪಾಲಿಕೆ ಸೂಚನೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಕ್ಕೆ ಯೋಗ್ಯವಲ್ಲದಿದ್ದರೂ ವಾಸ ಹಾಗೂ ವಾಣಿಜ್ಯದ ಹಳೆಯ ಕಟ್ಟಡಗಳನ್ನು ಉಪಯೋಗಿಸುತ್ತಿರುವುದು ಗಮನಕ್ಕೆ ಬಂದಿದೆ. ಮಳೆಗಾಲದ ಸಂದರ್ಭದಲ್ಲಿ ಇಂತಹ ಕಟ್ಟಡಗಳು ಕುಸಿದು ಬಿದ್ದು ಪ್ರಾಣಾಪಾಯವಾಗುವ ಸಾಧ್ಯತೆ ಇದೆ. ಹಾಗಾಗಿ ಹಳೆಯ ಕಟ್ಟಡಗಳನ್ನು ಕಡ್ಡಾಯವಾಗಿ ಕಟ್ಟಡಗಳ ಮಾಲಿಕರೇ ಸ್ವಯಂ ತೆರವುಗೊಳಿಸಬೇಕು ಎಂದು ಪಾಲಿಕೆ ಸೂಚಿಸಿದೆ.

ಕೆಲವು ಕಡೆಗಳಲ್ಲಿ ಕಟ್ಟಡಗಳು ಶಿಥಿಲಾವಸ್ಥೆ ತಲುಪಿದ್ದು, ಸ್ಥಿರತೆ ಕಳೆದುಕೊಂಡು ಯಾವುದೇ ಸಮಯದಲ್ಲಿ ಕುಸಿಯುವ ಸಾಧ್ಯತೆಗಳಿವೆ. ಹೀಗಿದ್ದರೂ ಸಂಬಂಧಪಟ್ಟ ಮಾಲೀಕರು ಬಾಡಿಗೆ ನೀಡಿದ್ದಾರೆ. ಅನಿರೀಕ್ಷಿತವಾಗಿ ಬಿದ್ದು ಸಾರ್ವಜನಿಕರ ಜೀವಕ್ಕೆ, ಸಾರ್ವಜನಿಕ ಸ್ವತ್ತಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.

ಕಟ್ಟಡ ಕುಸಿದು ಸಂಭವಿಸುವ ಅನಾಹುತಗಳಿಗೆ ಮಾಲೀಕರೇ ನೇರ ಹೊಣೆಗಾರರು. ತೆರವುಗೊಳಿಸದಿದ್ದರೆ ಪಾಲಿಕೆಯಿಂದಲೇ ತೆರವುಗೊಳಿಸಿ ಅದಕ್ಕೆ ತಗಲುವ ವೆಚ್ಚವನ್ನು ಕಟ್ಟಡದ ಮಾಲೀಕರಿಂದ ವಸೂಲಿ ಮಾಡಲಾಗುವುದು ಎಂದು ಮಹಾನಗರ ಪಾಲಿಕೆ ನಗರ ಯೋಜನಾಧಿಕಾರಿ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT