ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಎಂಸಿಸಿಯಿಂದ ‘ಮಿನಿ ಎಟಿಎಂ’

ತುಮಕೂರು ಮರ್ಚಂಟ್ಸ್‌ ಕ್ರೆಡಿಟ್‌ ಕೋ–ಆಪರೇಟಿವ್‌ ಲಿಮಿಟೆಡ್‌ನಿಂದ ಹೊಸ ಸೇವೆ
Last Updated 26 ಜೂನ್ 2019, 8:39 IST
ಅಕ್ಷರ ಗಾತ್ರ

ತುಮಕೂರು: ಎಟಿಎಂಗಳನ್ನು ನಿರ್ಮಿಸಿ ಅದರ ನಿರ್ವಹಣೆಗೆ ಪ್ರತಿ ತಿಂಗಳು ಲಕ್ಷ ರೂಪಾಯಿ ವ್ಯಯಿಸುವ ಬದಲು, ತುಮಕೂರು ಮರ್ಚಂಟ್ಸ್‌ ಕ್ರೆಡಿಟ್‌ ಕೋ–ಆಪರೇಟಿವ್‌ ಲಿಮಿಟೆಡ್‌(ಟಿಎಂಸಿಸಿ) ಜನಸಂದಣಿ ಇರುವ ಸಾರ್ವಜನಿಕ ಸ್ಥಳಗಳಲ್ಲಿ ‘ಮಿನಿ ಎಟಿಎಂ’ಗಳನ್ನು ಪರಿಚಯಿಸುತ್ತಿದೆ.

ಕಾರ್ಡ್‌ ಸ್ವೈಪಿಂಗ್ ಮಷಿನ್‌ ಮಾದರಿಯ ಈ ‘ಮಿನಿ ಎಟಿಎಂ’ ಹೊಂದಿರುವ ಕೋ–ಆಪರೇಟಿವ್‌ ಸೊಸೈಟಿಯ ಸಿಬ್ಬಂದಿಯಿಂದ ನಗದು ಪಡೆಯಬಹುದಾಗಿದೆ.

ಮಿನಿ ಎಟಿಎಂ ಕಾರ್ಯವಿಧಾನ: ನಗರದ ಪ್ರಮುಖ ಸ್ಥಳಗಳಲ್ಲಿ ಮಿನಿ ಎಟಿಎಂ ಮಷಿನ್‌ನೊಂದಿಗೆ ಸಿಬ್ಬಂದಿಯನ್ನು ನಿಯೋಜಿಸುತ್ತೇವೆ. ಅವರ ಬಳಿ ಗರಿಷ್ಠ ₹ 1 ಲಕ್ಷದ ನಗದು ಇರಲಿದೆ. ಸಿಬ್ಬಂದಿ ಇರುವ ನಿರ್ದಿಷ್ಟ ಸ್ಥಳಕ್ಕೆ ಗ್ರಾಹಕರು ಹೋಗಿ ಯಾವುದೇ ಬ್ಯಾಂಕ್‌ನ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಬಳಸಿ ಮಿನಿ ಎಟಿಎಂನಲ್ಲಿ ಸ್ವೈಪ್‌ ಮಾಡಬೇಕು. ಒಂದು ಬಾರಿಗೆ ಗರಿಷ್ಠ ₹ 10,000 ಮೊತ್ತ ಪಡೆಯಬಹುದು. ಗರಿಷ್ಠ 5 ಬಾರಿ ಸ್ವೈಪ್‌ ಮಾಡಿ ₹ 50,000 ಮೊತ್ತವನ್ನು ದಿನವೊಂದರಲ್ಲಿ ಡ್ರಾ ಮಾಡಬಹುದು ಎಂದು ಟಿಎಂಸಿಸಿ ಅಧ್ಯಕ್ಷ ಎನ್‌.ಎಸ್‌.ಜಯಕುಮಾರ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಬ್ಯಾಂಕ್‌ನ ವಹಿವಾಟುಗಳನ್ನು ಮತ್ತಷ್ಟು ಡಿಜಿಟಲೀಕರಣ ಮಾಡಲು ಈ ಎಟಿಎಂ ಅನ್ನು ಆರಂಭದಲ್ಲಿ 15 ಸ್ಥಳಗಳಲ್ಲಿ ಪರಿಚಯಿಸುತ್ತೇವೆ. ಟಿಎಂಸಿಸಿ ಶಾಖೆಗಳು, ಪೆಟ್ರೊಲ್‌ ಬಂಕ್‌, ಬಸ್‌ ನಿಲ್ದಾಣ ಹಾಗೂ ಜನಸಂದಣಿ ಹೆಚ್ಚಿರುವ ಸಾರ್ವಜನಿಕ ಸ್ಥಳಗಳಲ್ಲಿ, ದಿನದ ನಿರ್ದಿಷ್ಟ ಸಮಯದಲ್ಲಿ ಮಿನಿ ಎಟಿಎಂಗಳನ್ನು ಇಡುತ್ತೇವೆ ಎಂದು ಅವರು ಮಾಹಿತಿ ನೀಡಿದರು.

ಕಿಯೊಸ್ಕ್‌ ಮಾದರಿಯ ಎಟಿಎಂ ಕೇಂದ್ರ ಸ್ಥಾಪಿಸಲು ಸ್ಥಳವಕಾಶ, ವಿದ್ಯುತ್‌, ದೊಡ್ಡ ಯಂತ್ರ, ಭದ್ರತಾ ಸಿಬ್ಬಂದಿ ಹಾಗೂ ಸಿಸಿಟಿವಿ ಕ್ಯಾಮೆರಾ ಬೇಕು. ಇದನ್ನೆಲ್ಲಾ ನಿಭಾಯಿಸಲು ತಿಂಗಳಿಗೆ ಸರಾಸರಿ ₹ 1 ಲಕ್ಷ ವೆಚ್ಚವಾಗುತ್ತದೆ. ಹಾಗಾಗಿ ಕೇವಲ ₹ 15,500 ಬೆಲೆಯ ಮಿನಿ ಎಟಿಎಂಗಳನ್ನು ಪರಿಚಯಿಸುತ್ತಿದ್ದೇವೆ. ಇದರಿಂದ ಅನಗತ್ಯ ಖರ್ಚು ಉಳಿತಾಯ ಆಗಲಿದೆ ಎಂದು ಅವರು ಹೇಳಿದರು.

ಮಿನಿ ಎಟಿಎಂ ಸೇವೆ ಬಳಸುವ ಜನರಿಂದ ಯಾವುದೇ ಶುಲ್ಕವನ್ನು ಸಂಗ್ರಹಿಸುವುದಿಲ್ಲ. ಈ ಯೋಜನೆಯನ್ನು ಲಾಭಕ್ಕಾಗಿ ಮಾಡುತ್ತಿಲ್ಲ. ಬದಲಿಗೆ ಸೇವೆಯಂದು ಪರಿಗಣಿಸಿದ್ದೇವೆ ಎಂದರು.

ಮುಂಬರುವ ದಿನಗಳಲ್ಲಿ ಮೊಬೈಲ್‌ ಬ್ಯಾಂಕಿಂಗ್‌, ಪ್ರೀ–ಪೇಯ್ಡ್‌ ಕಾರ್ಡ್‌, ಕಿಯೊಸ್ಕ್‌ ಪಾಸ್‌ಬುಕ್‌ ಪ್ರಿಂಟರ್‌ಗಳನ್ನು ಪರಿಚಯಿಸುತ್ತೇವೆ. ವಿದ್ಯುತ್‌, ಅಡುಗೆ ಅನಿಲ, ಡಿಟಿಎಚ್‌ ಬಿಲ್‌ಗಳನ್ನು ಪಾವತಿಸಲು ಭಾರತ್‌ ಬಿಲ್‌ ಪೇ ಎಂಬ ಆನ್‌ಲೈನ್‌ ಬಿಲ್‌ ಪಾವತಿಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿದ್ದೇವೆ ಎಂದರು ಹೇಳಿದರು.

2018–19ನೇ ಹಣಕಾಸಿನ ವರ್ಷದಲ್ಲಿ ಟಿಎಂಸಿಸಿಯು ₹ 15,000 ಕೋಟಿ ವಹಿವಾಟು ನಡೆಸಿದೆ. ₹ 800 ಕೋಟಿ ಜಮಾ ಮೊತ್ತ ಹೊಂದಿದೆ. ₹ 21.26 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಅಂಕಿ–ಅಂಶ ನೀಡಿದರು.

ಸಹಕಾರ ಸಂಘಗಳಲ್ಲಿ ಬೆಳೆದು ರಾಜಕಾರಣಿಗಳಾದವರು ಈ ಕ್ಷೇತ್ರ ಸುಧಾರಿಸಲು ಧ್ವನಿ ಎತ್ತುತ್ತಿಲ್ಲ. ಎದುರಾಗುವ ಕಷ್ಟಗಳನ್ನು ಪರಿಹರಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ ಎಂದು ಅವರು ಬೇಸರಿಸಿದರು.

ಟಿಎಂಸಿಸಿ ಉಪಾಧ್ಯಕ್ಷ ಟಿ.ಎ.ಶ್ರೀಕರ, ಸಿಇಒ ಪಿ.ಎನ್‌.ರಮೇಶ್‌, ನಿರ್ದೇಶಕರಾದ ಡಿ.ಎಲ್‌.ಮೋಹನ್‌, ಅರುಣ್‌ಕುಮಾರ್‌, ಶಿವಶಂಕರ್‌, ಅನಂತರಾಮು, ಸುರೇಶ್‌, ಗಂಗಾಧರ ಶೆಟ್ಟಿ, ಉಮಾಶಂಕರ್‌, ಜಯರಾಮ್‌, ಪ್ರಸಾದ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಮೊತ್ತದ ಜಮೆಗಾಗಿ ಎಫ್‌ಐ ಸಾಧನ

ಹೆಚ್ಚಿನ ಮೊತ್ತದ ವ್ಯವಹಾರ ನಡೆಸುವ ವ್ಯಾಪಾರಿಗಳು ಮನೆಯಿಂದಲೇ ಹಣವನ್ನು ಖಾತೆಗೆ ಜಮೆ ಮಾಡಲು ಫೈನಾನ್ಸಿಯಲ್‌ ಇನ್‌ಕ್ಲ್ಯೂಜನ್‌ ಡಿವೈಸ್‌(ಎಫ್‌.ಐ.) ಸಹ ಪರಿಚಯಿಸುತ್ತಿದ್ದೇವೆ ಎಂದು ಎನ್‌.ಎಸ್‌.ಜಯಕುಮಾರ್‌ ತಿಳಿಸಿದರು.

ವ್ಯಾಪಾರಿಗಳು ಲಕ್ಷದ ಲೆಕ್ಕದಲ್ಲಿ ಹಣ ಜಮೆ ಮಾಡುವ ಕುರಿತು ಟಿಎಂಸಿಸಿಗೆ ಮಾಹಿತಿ ತಲುಪಿಸಬೇಕು. ಆಗ ಸಿಬ್ಬಂದಿ ಎಫ್.ಐ. ಸಾಧನದೊಂದಿಗೆ ವ್ಯಾಪಾರಿ ಇರುವ ಸ್ಥಳಕ್ಕೆ ತೆರಳುತ್ತಾರೆ. ವ್ಯಾಪಾರಿ ಸಾಧನದಲ್ಲಿ ಮಾಹಿತಿ ಭರ್ತಿ ಮಾಡಿ, ರಸೀದಿ ಪಡೆದು, ಮೊತ್ತವನ್ನು ಸಿಬ್ಬಂದಿಗೆ ನೀಡಬೇಕು. ಮೊತ್ತ ಜಮೆ ಆಗಿರುವ ಕುರಿತು ವ್ಯಾಪಾರಿಗೆ ತಕ್ಷಣ ಸಂದೇಶ ಬರುತ್ತದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT