ತುಮಕೂರು: ತಮ್ಮ ಪತ್ನಿಗೆ ತುಮುಲ್ ಅಧ್ಯಕ್ಷ ಪಟ್ಟ ಕೈ ತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಗುಬ್ಬಿ ಕಾಂಗ್ರೆಸ್ ಶಾಸಕ ಹಾಗೂ ಕೆಎಸ್ಆರ್ಟಿಸಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಅವರು ಸಚಿವರಾದ ಕೆ.ಎನ್.ರಾಜಣ್ಣ, ಜಿ.ಪರಮೇಶ್ವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಜಿಲ್ಲೆಯಲ್ಲಿ ಇಬ್ಬರು ಸಚಿವರು ಸೇರಿಕೊಂಡು ತುಘಲಕ್ ಆಡಳಿತ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಏನು ನಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಯಾರದ್ದು ನಡೆಯುತ್ತಿದೆ, ಏನಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ನಮ್ಮಿಂದ ತಾನೇ ಅವರು ಗೆದ್ದು ಸಚಿವರಾಗಿರುವುದು’ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ತುಮುಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಾಮ ನಿರ್ದೇಶಿತ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಈಗಾಗಲೇ ಎಚ್.ವಿ.ವೆಂಕಟೇಶ್ ಶಾಸಕರಾಗಿದ್ದು, ಈಗ ಮತ್ತೊಂದು ಅಧಿಕಾರ ನೀಡಲಾಗಿದೆ. ಅವರನ್ನು ನಾಮ ನಿರ್ದೇಶಿತ ಸದಸ್ಯರನ್ನಾಗಿ ಮಾಡುತ್ತೇವೆ ಎಂದು ಒಂದು ಮಾತು ಕೇಳಲಿಲ್ಲ. ಇವರು (ಇಬ್ಬರು ಸಚಿವರು) ಮಾತೆತ್ತಿದರೆ ಶೋಷಿತ ವರ್ಗಕ್ಕೆ ನ್ಯಾಯ ಕೊಡುತ್ತೇವೆ ಎನ್ನುತ್ತಾರೆ. ನೋಡಿದರೆ ಶೋಷಿತರನ್ನೇ ನಿಕೃಷ್ಟವಾಗಿ ಕಾಣುತ್ತಾರೆ’ ಎಂದು ಟೀಕಿಸಿದರು.

‘ತುಮುಲ್ ಅಧ್ಯಕ್ಷರ ಆಯ್ಕೆ ಬಗ್ಗೆ ಜಿಲ್ಲೆಯ ಯಾವೊಬ್ಬ ಶಾಸಕರ ಜತೆಗೂ ಮಾತನಾಡಲಿಲ್ಲ. ಎಲ್ಲರನ್ನೂ ನಿರ್ಲಕ್ಷ್ಯ ಮಾಡಿದ್ದಾರೆ. ಇವರಿಬ್ಬರೇ ಜಿಲ್ಲೆ ನಿಯಂತ್ರಣ ಮಾಡುತ್ತಾರೆ. ಇವರಿಬ್ಬರು ಇದ್ದರೆ ಸಾಕು, ಎಲ್ಲವೂ ನಡೆಯುತ್ತದೆ. ಯಾರೂ ಬೇಕಾಗಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ 11 ಕ್ಷೇತ್ರಗಳಲ್ಲಿ ಶಾಸಕರನ್ನು ಗೆಲ್ಲಿಸಿಕೊಂಡು ಬರುತ್ತಾರೆ’ ಎಂದು ಕುಟುಕಿದರು.

‘ಶಾಸಕಾಂಗ ಪಕ್ಷದ ಸಭೆಯ ಬಳಿಕ ಗೃಹ ಸಚಿವ ಜಿ.ಪರಮೇಶ್ವರ ಜತೆ ಮಾತನಾಡಿದೆ. ಆಗ ಸಚಿವ ಕೆ.ಎನ್.ರಾಜಣ್ಣ ಸಹ ಇದ್ದರು. ಮುಂದೆ ಸಭೆ ಕರೆದು ಚರ್ಚಿಸಲಾಗುವುದು ಎಂದು ರಾಜಣ್ಣ ಹೇಳಿದರು. ಅದಾದ ಮೇಲೆ ನೀವು ಎಲ್ಲಿದ್ದೀರಾ? ನೀವು ಯಾರು? ಎಂದು ಕೇಳಲಿಲ್ಲ’ ಎಂದರು.

‘ಇಬ್ಬರು ಸಚಿವರು ಸಾಮಾಜಿಕ ನ್ಯಾಯದ ಹರಿಕಾರರು. ಆದರೆ ಎಡಗೈ ಜನಾಂಗಕ್ಕೆ ಅನ್ಯಾಯ ಮಾಡುವುದು ಚೆನ್ನಾಗಿ ಗೊತ್ತಿದೆ. ಬಲಗೈ ಸಮುದಾಯದವರು ಸಚಿವರಿದ್ದು (ಪರಮೇಶ್ವರ), ಎಡಗೈನವರಿಗೆ ಅವಕಾಶ ಸಿಕ್ಕಿಲ್ಲ. ಇವರು ಸಾಮಾಜಿಕ ನ್ಯಾಯ ಪಾಲನೆ ಮಾಡುವುದಾದರೆ ಮುಂಬರುವ ಡಿಸಿಸಿ ಬ್ಯಾಂಕ್ ಚುನಾವಣೆ ಸಮಯದಲ್ಲಿ ಎಡಗೈ ಸಮುದಾಯದ ಒಬ್ಬರನ್ನು ನಾಮನಿರ್ದೇಶನ ಮಾಡಿ, ಅಧ್ಯಕ್ಷರನ್ನಾಗಿ ಮಾಡಲಿ’ ಎಂದು ಸವಾಲು ಹಾಕಿದರು.

‘ಜಿಲ್ಲೆಯಲ್ಲಿ ಎರಡು ವಿಧಾನಸಭಾ ಮೀಸಲು ಕ್ಷೇತ್ರಗಳಿದ್ದು, ಒಂದರಲ್ಲಿ ಬಲಗೈ (ಕೊರಟಗೆರೆ– ಪರಮೇಶ್ವರ), ಮತ್ತೊಂದರಲ್ಲಿ ಭೋವಿ (ಪಾವಗಡ– ಎಚ್.ವಿ.ವೆಂಕಟೇಶ್) ಸಮುದಾಯದ ಶಾಸಕರು ಇದ್ದಾರೆ. ಆದರೆ ಎಡಗೈನವರು ಇನ್ನೂ ಶೋಷಿತರಾಗಿಯೇ ಉಳಿದಿದ್ದಾರೆ’ ಎಂದು ಹೇಳಿದರು.

ತಮ್ಮ ಪತ್ನಿ ಕೆ.ಪಿ.ಭಾರತೀದೇವಿ ಅವರನ್ನು ತುಮುಲ್ ಅಧ್ಯಕ್ಷರನ್ನಾಗಿ ಮಾಡಲು ಶ್ರೀನಿವಾಸ್ ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಹಿಂದೆ ದಳಪತಿಗಳ ಜತೆ ಮುನಿಸಿಕೊಂಡಿದ್ದ ಶ್ರೀನಿವಾಸ್, ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು.

ದಲಿತರ ಸಹಿಸುತ್ತಿಲ್ಲ: ರಾಜಣ್ಣ ತಿರುಗೇಟು

ತುಮಕೂರು: ‘ದಲಿತರೊಬ್ಬರು ತುಮುಲ್ ಅಧ್ಯಕ್ಷರಾಗಿದ್ದನ್ನು ಶಾಸಕ ಎಸ್.ಆರ್.ಶ್ರೀನಿವಾಸ್ ಅವರಿಗೆ ಸಹಿಸಲಾಗುತ್ತಿಲ್ಲ’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಯಾರ ಮಾತನ್ನೂ ಕೇಳುವುದಿಲ್ಲ. ದೇವರು ಹೇಗೆ ಬುದ್ಧಿ ಕೊಡುತ್ತಾನೊ ಆ ರೀತಿ ಮಾಡುತ್ತೇನೆ. ಇವರಿಗೆ ದಲಿತರ ಮತಗಳು ಬೇಡವೆ’ ಎಂದು ಪ್ರಶ್ನಿಸಿದ್ದಾರೆ.

‘ಒಬ್ಬ ದಲಿತನಿಗೆ ಅಧಿಕಾರ ಕೊಟ್ಟರೆ ಅದನ್ನು ವಿರೋಧಿಸುವುದು ಪ್ರಬುದ್ಧ ರಾಜಕಾರಣಿಗೆ ಗೌರವ ತರುವುದಿಲ್ಲ. ದಲಿತರಿಗೊಂದು ನ್ಯಾಯ, ಮುಂದುವರಿದವರಿಗೆ ಮತ್ತೊಂದು ನ್ಯಾಯವೇ? ಇವರಿಗೆ (ಶ್ರೀನಿವಾಸ್) ತಾಕತ್ತು ಇದ್ದರೆ ಮುಂದಿನ ಡಿಸಿಸಿ ಬ್ಯಾಂಕ್ ಚುನಾವಣೆ ಎದುರಿಸಿ ಗೆದ್ದು ಬರಲಿ’ ಎಂದು ಸವಾಲು ಹಾಕಿದರು.

‘ಶ್ರೀನಿವಾಸ್ ಅವರನ್ನು ಕರೆದು ಸಮಾಧಾನ ಮಾಡುವ ದರ್ದು ನನಗೇನೂ ಬಂದಿಲ್ಲ. ತಿಪಟೂರು ಶಾಸಕ ಕೆ.ಷಡಕ್ಷರಿ ಸಹ ನಾಮಿನಿ ಸದಸ್ಯರಾಗಿ ಲ್ಯಾಂಡ್ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಆಗ ಯಾಕೆ ಯಾರೂ ವಿರೋಧಿಸಿಲ್ಲ’ ಎಂದು ಕೇಳಿದರು.

‘ಎಚ್.ವಿ.ವೆಂಕಟೇಶ್ ಅವರನ್ನು ನಾಮ ನಿರ್ದೇಶಿತ ಸದಸ್ಯರನ್ನಾಗಿ ಮಾಡಿ, ಅಧ್ಯಕ್ಷ ಸ್ಥಾನ ಕೊಡಿಸಿದ್ದು ನಾನೇ. ಈ ವಿಚಾರದಲ್ಲಿ ಬೇರೆಯವರನ್ನು ದೂಷಿಸುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.