ಗುರುವಾರ , ಆಗಸ್ಟ್ 5, 2021
21 °C
ರಾರಾಜಿಸುತ್ತಿದೆ ಹಳೆಯ ಅಧಿಕಾರಿಗಳ ಹೆಸರು, ಸ್ಥಾಯಿ ಸಮಿತಿ ಸದಸ್ಯರ ಹೆಸರುಗಳು ಇದೇ ಸ್ಥಿತಿ

ಅಪ್‌ಡೇಟ್‌ ಆಗದ ಜಿ.ಪಂ ವೆಬ್‌ಸೈಟ್

ಅನಿಲ್ ಕುಮಾರ್ ಜಿ. Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲಾ ಪಂಚಾಯಿತಿಯ ಐದು ಸ್ಥಾಯಿ ಸಮಿತಿಗಳ ಮೂರನೇ ಅವಧಿಗೆ ಚುನಾವಣೆ ನಡೆದು ನೂತನ ಅಧ್ಯಕ್ಷರು, ಸದಸ್ಯರು ಅಧಿಕಾರ ವಹಿಸಿಕೊಂಡು ಒಂದೂವರೆ ತಿಂಗಳು ಕಳೆಯುತ್ತಿದೆ. ಹೀಗಿದ್ದರೂ ಜಿಲ್ಲಾ ಪಂಚಾಯಿತಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹಿಂದಿನ ಸದಸ್ಯರ ಹೆಸರುಗಳೇ ಇವೆ.

ರಾಷ್ಟ್ರೀಯ ಮಾಹಿತಿ ವಿಜ್ಞಾನ ಕೇಂದ್ರ (ಎನ್‌ಐಸಿ) ನಿರ್ವಹಿಸುತ್ತಿರುವ ಜಿಲ್ಲಾ ಪಂಚಾಯಿತಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸಿಇಒ, ಅಧ್ಯಕ್ಷರು, ಸದಸ್ಯರು ಸೇರಿದಂತೆ ಸ್ಥಾಯಿ ಸಮಿತಿಗಳ ಸದಸ್ಯರ ಹೆಸರಿನ ಪಟ್ಟಿಯ ಪುಟ ಇದೆ. ಐದು ಸ್ಥಾಯಿ ಸಮಿತಿಗಳ 30 ಸದಸ್ಯ ಸ್ಥಾನಗಳಿಗೆ ಜೂನ್ 2 ರಂದು ಚುನಾವಣೆ ನಡೆದಿದೆ. ಈ ಚುನಾವಣೆಯಲ್ಲಿ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿ ನೂತನ ಅಧ್ಯಕ್ಷರು, ಸದಸ್ಯರು ಈಗಾಗಲೇ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ, ವೆಬ್‌ಸೈಟ್‌ನಲ್ಲಿ ಮಾತ್ರ ಸದಸ್ಯರ ಹೆಸರುಗಳು ಬದಲಾವಣೆ ಆಗಿಲ್ಲ.

ಅಲ್ಲದೆ ಅಧಿಕಾರಿಗಳ ಹೆಸರೂ ಬದಲಾವಣೆ ಆಗಿಲ್ಲ. ಕೃಷಿ ಇಲಾಖೆ ಪ್ರಭಾರ ಜಂಟಿ ನಿರ್ದೇಶಕಿಯಾಗಿ ರೂಪಾದೇವಿ ಅವರ ಹೆಸರು ಇದೆ. ಆದರೆ ರಾಜಸುಲೋಚನಾ ಅಧಿಕಾರವಹಿಸಿಕೊಂಡು ಹಲವು ತಿಂಗಳುಗಳೇ ಕಳೆದಿವೆ. ಡಿಡಿಪಿಐ ಮಂಜುನಾಥ್ ಹೆಸರೇ ಇಂದಿಗೂ ವೆಬ್‌ಸೈಟ್‌ನಲ್ಲಿ ಇದೆ. ಹೀಗೆ ಬೇರೆ ಕಡೆ ವರ್ಗಾವಣೆಯಾದ ಅಧಿಕಾರಿಗಳ ಹೆಸರುಗಳು ವೆಬ್‌ಸೈಟ್‌ನಲ್ಲಿ ಮುಂದುವರಿದಿವೆ.

ಮೂರನೇ ಅವಧಿಗೆ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಮಂಜುಳಾ ಆಯ್ಕೆ ಆಗಿದ್ದಾರೆ. ಆದರೆ, ವೆಬ್‌ಸೈಟ್‌ನಲ್ಲಿ ಪಾಪಣ್ಣ ಅವರೇ ಇಂದಿಗೂ ಅಧಿಕಾರ ನಡೆಸುತ್ತಿದ್ದಾರೆ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಚೌಡಪ್ಪ ಆಯ್ಕೆಯಾಗಿದ್ದಾರೆ. ಆದರೆ, ಶಿವಕುಮಾರ್ ಹೆಸರೇ ಮುಂದುವರೆದಿದೆ.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ರಾಮಚಂದ್ರಯ್ಯ ಆಯ್ಕೆಯಾಗಿದ್ದಾರೆ. ಆದರೆ, ಯಶೋದ ಗಂಗರಾಜು ಹೆಸರೇ ಮುಂದುವರಿದಿದೆ. ಜಿ.ಪಂ ಅಧ್ಯಕ್ಷೆ ಲತಾ ರವಿಕುಮಾರ್ ನೇತೃತ್ವದ ಹಣಕಾಸು, ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ, ಹಾಗೂ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಅಧ್ಯಕ್ಷತೆಯ ಸಾಮಾನ್ಯ ಸ್ಥಾಯಿ ಸಮಿತಿಯ ಸದಸ್ಯರು ಬದಲಾಗಿದ್ದರೂ ಈ ಹೆಸರನ್ನು ದಾಖಲಿಸಿಲ್ಲ.

ಇನ್ನೂ ಸಿಇಒ, ಅಧ್ಯಕ್ಷರು, ಉಪಾಧ್ಯಕ್ಷರನ್ನು ಹೊರತು ಪಡಿಸಿ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಬಹುಪಾಲು ಇಲಾಖೆಗಳ ಪೂರಕ ಮಾಹಿತಿ ಕಳೆದ ಎರಡು–ಮೂರು ವರ್ಷಗಳಿಂದ ಅಪ್‌ಡೇಟ್‌ ಆಗಿಲ್ಲ.

ಸಾರ್ವಜನಿಕರು ಎಲ್ಲ ಕೆಲಸ, ಸಂಪರ್ಕಕ್ಕಾಗಿ ಜಿಲ್ಲಾ ಪಂಚಾಯಿತಿ ಕಚೇರಿ ಸಂಪರ್ಕಿಸಲು ಕಷ್ಟ ಸಾಧ್ಯ. ಹಾಗಾಗಿ ಬಹುಪಾಲು ಮಂದಿ ತಮಗೆ ಬೇಕಾದ ಮಾಹಿತಿಗಾಗಿ ಇಲಾಖೆಯ ವೆಬ್‌ಸೈಟ್‌ ಅವಲಂಬಿಸುತ್ತಿದ್ದಾರೆ. ಆದರೆ, ಇಲ್ಲಿ ತಮಗೆ ಬೇಕಾದ ಮಾಹಿತಿ ಸಿಗದಿರುವದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ರಾಂಗ್ ನಂಬರ್: ವೆಬ್‌ಸೈಟ್‌ನಲ್ಲಿರುವ ದೂರವಾಣಿ ಸಂಖ್ಯೆ, ಅಧಿಕಾರಿಗಳ ಹೆಸರು ಅಪ್‌ಡೇಟ್ ಆಗದ ಕಾರಣ, ಯಾರಾದರೂ ಇಲ್ಲಿನ ಸಂಖ್ಯೆಗಳಿಗೆ ಕರೆ ಮಾಡಿದರೆ, ಆ ಕಡೆಯಿಂದ ರಾಂಗ್ ನಂಬರ್ ಎಂಬ ಉತ್ತರ ದೊರೆಯುತ್ತದೆ. ಇಲ್ಲವೇ ದೂರವಾಣಿ ಸಂಖ್ಯೆ ಕಡಿತ, ಮೊಬೈಲ್‌ ಸ್ವಿಚ್ ಆಫ್‌ ಎಂಬ ಮಾತು ಕೇಳುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು