ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಜನಸ್ಪಂದನದಲ್ಲಿ ಸಮಸ್ಯೆ ಸರಮಾಲೆ

ವಾರ್ಡ್‌ ಮಟ್ಟದ ಜನಸ್ಪಂದನ ಕಾರ್ಯಕ್ರಮ, ಬೆರಳೆಣಿಕೆಯಷ್ಟು ಜನ ಭಾಗಿ
Published 9 ಜುಲೈ 2024, 16:04 IST
Last Updated 9 ಜುಲೈ 2024, 16:04 IST
ಅಕ್ಷರ ಗಾತ್ರ

ತುಮಕೂರು: ಮಹಾನಗರ ಪಾಲಿಕೆಯಿಂದ ಅಶೋಕ ನಗರದ ಚಂದ್ರಶೇಖರ್‌ ಆಜಾದ್‌ ಪಾರ್ಕ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ 25, 26, 27ನೇ ವಾರ್ಡ್‌ಗಳ ಜನ ಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಾಲು ಸಾಲು ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಮಂಡಿಸಿದರು.

ಕೆಲವರಷ್ಟೇ ಭಾಗವಹಿಸಿದ್ದರೂ ಈ ಭಾಗದ ಎಲ್ಲ ಕುಂದುಕೊರತೆಗಳನ್ನು ಅಧಿಕಾರಿಗಳಿಗೆ ಸಮಗ್ರವಾಗಿ ವಿವರಿಸಿದರು. ಬಾಗಿಲು ಮುಚ್ಚಿದ ಶೌಚಾಲಯ ತೆರೆಯಬೇಕು. ಒಳ ಚರಂಡಿ ವ್ಯವಸ್ಥೆ ಮಾಡಬೇಕು. ರಸ್ತೆ, ಪಾರ್ಕ್‌ ಒತ್ತುವರಿ ತೆರವುಗೊಳಿಸಬೇಕು ಎಂಬ ಒತ್ತಾಯಗಳು ಕೇಳಿ ಬಂದವು.

‘ಮನೆ, ಖಾಲಿ ಜಾಗದ ತೆರಿಗೆ ಮಿತಿ ಮೀರಿದೆ. ಮನೆಯಲ್ಲಿ ವಾಸವಿದ್ದಂತೆ ಕಾಣುತ್ತಿಲ್ಲ. ಯಾವುದೇ ಲಾಡ್ಜ್‌ನಲ್ಲಿ ಬಾಡಿಗೆ ರೂಮ್‌ ಪಡೆದಂತಾಗಿದೆ. ಅಷ್ಟೊಂದು ತೆರಿಗೆ ಕಟ್ಟಬೇಕಾಗಿದೆ. ಕಸ ವಿಲೇವಾರಿ ವಾಹನಗಳು ಬೆಳಗ್ಗೆ 10 ಗಂಟೆಯ ನಂತರ ಬಂದರೆ ಮನೆಗಳಲ್ಲಿ ಯಾರೂ ಇರುವುದಿಲ್ಲ. ಮನೆಯ ಮುಂದೆ ಇಟ್ಟು ಹೋಗಿರುವ ಕಸವನ್ನು ತೆಗೆದುಕೊಂಡು ಹೋಗುತ್ತಿಲ್ಲ. ಇದರಿಂದ ಸೂಕ್ತ ರೀತಿಯಲ್ಲಿ ಕಸ ವಿಲೇವಾರಿಯಾಗುತ್ತಿಲ್ಲ’ ಎಂದು ವೆಂಕಟರಾಜು ಅಧಿಕಾರಿಗಳ ಗಮನ ಸೆಳೆದರು.

‘ಗಂಗೋತ್ರಿ ರಸ್ತೆಯಲ್ಲಿ ಮಾಂಸದ ಅಂಗಡಿಗಳ ಸಂಖ್ಯೆ ಹೆಚ್ಚಾಗಿದೆ. ಇಲ್ಲಿ ಅವೈಜ್ಞಾನಿಕವಾಗಿ ಆಹಾರ ತಯಾರಿಸುತ್ತಿದ್ದಾರೆ. ಆರೋಗ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿಲ್ಲ. ಪರವಾನಗಿ ಕೊಟ್ಟು ಸುಮ್ಮನಾಗುತ್ತಾರೆ. ಇಲ್ಲಿ ಮತ್ತೆ ಅಂಗಡಿ ತೆರೆಯಲು ಅನುಮತಿ ನೀಡಬಾರದು. ವಾಹನ ದಟ್ಟಣೆ ಹೆಚ್ಚಾಗಿದ್ದು, ಪೊಲೀಸ್‌ ಸಿಬ್ಬಂದಿ ನಿಯೋಜಿಸಬೇಕು. ರಸ್ತೆಯಲ್ಲಿ ಅಪಘಾತ ತಡೆಯಲು ಹಂಪ್ಸ್‌ ಹಾಕಿಸಬೇಕು. ಸವಾರರು ರಸ್ತೆ ‘ಗುತ್ತಿಗೆ’ ಪಡೆದವರಂತೆ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ರೇಣುಕಸ್ವಾಮಿ ಆಗ್ರಹಿಸಿದರು.

‘ಖಾಲಿ ಜಾಗದಲ್ಲಿ ರಾತ್ರಿ 11 ಗಂಟೆ ಸಮಯದಲ್ಲಿ ಕಸ ಸುರಿಯುತ್ತಾರೆ. ಅಗತ್ಯ ಕಡೆ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಿ ಕಸ ಹಾಕುವವರಿಗೆ ದಂಡ ವಿಧಿಸಬೇಕು. ಗಂಗೋತ್ರಿ ನಗರದ 3ನೇ ‘ಎ’ ಕ್ರಾಸ್‌ನಲ್ಲಿ ಹತ್ತು ವರ್ಷ ಕಳೆದರೂ ರಸ್ತೆಯಾಗಿಲ್ಲ. ನೂರಾರು ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ರಸ್ತೆ, ಚರಂಡಿ ಮಾಡುವ ‘ಯೋಗ್ಯತೆ’ ಇಲ್ಲವೇ? ನಮ್ಮ ಕಷ್ಟ ಬೇರೆ ಯಾರಿಗೆ ಹೇಳಬೇಕು?’ ಎಂದು ಚಂದ್ರಶೇಖರ್‌ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘15 ಅಡಿ ಇರುವ ರಸ್ತೆಯಲ್ಲಿ ಶಾಲೆ ವಾಹನ, ವ್ಯಾನ್‌ಗಳು ಓಡಾಡುತ್ತವೆ. ಇದರಿಂದ ಬೈಕ್‌, ಕಸದ ಆಟೊಗಳಿಗೆ ಸಮಸ್ಯೆಯಾಗುತ್ತಿದೆ. ಎಸ್‌.ಎಸ್‌.ಪುರಂ ರಸ್ತೆಯ ಕೆಂಪಣ್ಣ ಅಂಗಡಿ ವೃತ್ತದ ಬಳಿ ಪ್ರತಿ ದಿನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಕೆಲವೊಮ್ಮೆ ಗಂಟೆಗಟ್ಟಲೇ ರಸ್ತೆಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಲ್ಲಿಗೆ ಪೊಲೀಸ್‌ ಸಿಬ್ಬಂದಿ ನಿಯೋಜಿಸಬೇಕು. ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು’ ಎಂದು ಯದು ಮನವಿ ಮಾಡಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಜನರ ಸಮಸ್ಯೆ ಆಲಿಸಿ, ಪರಿಹಾರ ಒದಗಿಸುವ ಭರವಸೆ ನೀಡಿದರು. ಪಾಲಿಕೆ ಆರೋಗ್ಯಾಧಿಕಾರಿ ವೀರೇಶ್‌ ಕಲ್ಮಠ್‌, ಕಾರ್ಯನಿರ್ವಾಹಕ ಎಂಜಿನಿಯರ್‌ ವಿನಯ್‌ಕುಮಾರ್‌ ಇತರರು ಹಾಜರಿದ್ದರು.

ತುಮಕೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು
ತುಮಕೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು

ತೆರೆದ ರಾಜ ಕಾಲುವೆಗೆ ಕಸ ಎಸೆಯದಂತೆ ತಂತಿ ಬೇಲಿ ಅಳವಡಿಸಲಾಗುವುದು. ಅಗತ್ಯ ಇರುವ ಕಡೆ ‘ಸಂಚಾರಿ’ ಶೌಚಾಲಯದ ವ್ಯವಸ್ಥೆ ಮಾಡಲಾಗುತ್ತಿದೆ

-ಬಿ.ವಿ.ಅಶ್ವಿಜ ಆಯುಕ್ತರು ಮಹಾನಗರ ಪಾಲಿಕೆ

ಗಾಂಜಾ ಸೇವನೆ: ಆತಂಕ

‘ಎಸ್‌ಐಟಿ ಹಿಂಭಾಗದ ಗೇಟ್‌ ಬಳಿ ಟೀ ಅಂಗಡಿಗಳಲ್ಲಿ ಯುವಕ ಯುವತಿಯರು ಧೂಮಪಾನ ಗಾಂಜಾ ಸೇವನೆಯಲ್ಲಿ ತೊಡಗಿರುತ್ತಾರೆ. ಅವರನ್ನು ನೋಡುವ ಇಂದಿನ ಮಕ್ಕಳು ಧೂಮಪಾನ ಮಾಡುವುದೇ ‘ಐಷಾರಾಮಿ’ ಬದುಕು ಎಂದುಕೊಂಡರೆ ಅವರ ಭವಿಷ್ಯ ಏನಾಗಬೇಡ? ನಗರ ಭಾಗದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಾದಕ ದ್ರವ್ಯ ಸಿಗುತ್ತಿರುವುದು ಆತಂಕಕಾರಿ. ಇದಕ್ಕೆ ಕಡಿವಾಣ ಬೀಳುತ್ತಿಲ್ಲ’ ಎಂದು ವಕೀಲ ಹಿಮಾನಂದ್‌ ಅಸಮಾಧಾನ ವ್ಯಕ್ತಪಡಿಸಿದರು. ರಸ್ತೆ ಅಭಿವೃದ್ಧಿಗಾಗಿ ಅಗೆದ ಮಣ್ಣನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದೆ ಖಾಲಿ ಜಾಗದಲ್ಲಿ ಸುರಿದಿದ್ದಾರೆ. ಇದು ಈಗ ಹಂದಿ ಹೆಗ್ಗಣಗಳ ವಾಸಸ್ಥಾನವಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ ಎಂದರು.

ಫುಟ್‌ಪಾತ್‌ ಎಲ್ಲಿದೆ?

ನಗರದ ಎಲ್ಲ ರಸ್ತೆಗಳ ಫುಟ್‌ಪಾತ್‌ ಆಕ್ರಮಿಸಿಕೊಂಡು ಅಂಗಡಿ ನಿರ್ಮಿಸಿಕೊಂಡಿದ್ದಾರೆ. ಬಿ.ಎಚ್‌.ರಸ್ತೆ ಎಂ.ಜಿ.ರಸ್ತೆಯಲ್ಲೂ ಇದೇ ರೀತಿಯಾಗಿದೆ. ಫುಟ್‌ಪಾತ್‌ ಎಂದರೆ ಏನು ಅಂತಾನೂ ಗೊತ್ತಿಲ್ಲ. ಫುಟ್‌ಪಾತ್‌ಗಾಗಿ ಹುಡುಕಬೇಕಾದ ಪರಿಸ್ಥಿತಿ ಉದ್ಭವವಾಗಿದೆ ಎಂದು ನಾಗಣ್ಣ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್‌ ‘ನಗರದ ಎಂ.ಜಿ.ರಸ್ತೆ ರೈಲು ನಿಲ್ದಾಣದ ರಸ್ತೆ ಮತ್ತು ವಿದ್ಯಾನಿಕೇತನ ಶಾಲೆ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಇತರೆ ವಾಹನಗಳಿಗೆ ತೊಂದರೆಯಾಗುತ್ತಿದೆ. ಪಾಲಿಕೆಯಿಂದ ಟೆಂಡರ್‌ ಕರೆದು ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಬೇಕು’ ಎಂದು ಸೂಚಿಸಿದರು.

ಒಂದೇ ದಿನ 900 ಪ್ರಕರಣ

‘ಗಾಂಜಾ ಮಾರಾಟ ಜಾಲವನ್ನು ಪತ್ತೆ ಹಚ್ಚುವ ಕೆಲಸ ನಿರಂತರವಾಗಿ ಮಾಡುತ್ತಿದ್ದೇವೆ. ಕಳೆದ ತಿಂಗಳು ಕೋಟ್ಪಾ ಕಾಯ್ದೆಯಡಿ ಒಂದೇ ದಿನದಲ್ಲಿ 900 ಪ್ರಕರಣ ದಾಖಲಿಸಲಾಗಿದೆ. 890 ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಜೂನ್‌ ತಿಂಗಳಲ್ಲಿ ವಿವಿಧ ಠಾಣೆಗಳಲ್ಲಿ 1500 ಪ್ರಕರಣ ದಾಖಲಿಸಿದ್ದು 15 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ’ ಎಂದು ನಗರ ಡಿವೈಎಸ್‌ಪಿ ಕೆ.ಆರ್‌.ಚಂದ್ರಶೇಖರ್‌ ಮಾಹಿತಿ ನೀಡಿದರು. ನಗರ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು ಪೊಲೀಸ್‌ ಸಿಬ್ಬಂದಿ ಕಡಿಮೆ ಇದ್ದಾರೆ. ಹೆಚ್ಚುವರಿಯಾಗಿ 20 ಮಂದಿ ಗೃಹರಕ್ಷಕ ದಳದ ಸಿಬ್ಬಂದಿ ನಿಯೋಜಿಸಲಾಗಿದೆ. ನಗರಕ್ಕೆ ಮತ್ತೊಂದು ಠಾಣೆಯ ಅವಶ್ಯಕತೆ ಇದ್ದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT