ಗುಬ್ಬಿ: ಸರ್ಕಾರದಿಂದ ಮಂಜೂರಾಗಿದ್ದ ಭೂಮಿಯನ್ನು ಎಚ್‌ಎಎಲ್ ಘಟಕಕ್ಕೆ ನೀಡಿದ್ದ ಸಂತ್ರಸ್ತರಿಗೆ ಸಮೀಪದಲ್ಲಿದ್ದ ಕಂದಾಯ ಇಲಾಖೆಗೆ ಸೇರಿದ ಜಮೀನನ್ನು ಮರುಮಂಜೂರು ಮಾಡಿಕೊಡಲು ತಾಲ್ಲೂಕು ಆಡಳಿತ ಬುಧವಾರ ಮುಂದಾಯಿತು.
ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ಆರತಿ ಬಿ. ಹಾಗೂ ಡಿವೈಎಸ್‌ಪಿ ಶೇಖರ್ ನೇತೃತ್ವದಲ್ಲಿ ಹದ್ದುಬಸ್ತು ಗುರ್ತಿಸುವ ಕಾರ್ಯವನ್ನು ಅಧಿಕಾರಿಗಳು ಕೈಗೊಂಡರು.
ಮರುಮಂಜೂರಾತಿ ಮಾಡುವ ಜಮೀನಿನಲ್ಲಿ ಈಗಾಗಲೇ ಅನೇಕ ತಲೆಮಾರುಗಳಿಂದ ಅನುಭವದಲ್ಲಿದ್ದ ರೈತರು ತಕರಾರು ಒಡ್ಡಿದರು. ಆದರೆ ಅವರ ಬಳಿ ಯಾವುದೇ ದಾಖಲೆಗಳಿಲ್ಲದ ಕಾರಣ ಅಧಿಕಾರಿಗಳು ಅವರ ಮಾತಿಗೆ ಮನ್ನಣೆ ನೀಡದೆ, ನಿಯಮಾನುಸಾರ ಹದ್ದುಬಸ್ತು ಮಾಡಿದರು.
‘ಸರ್ಕಾರಿ ಜಮೀನನ್ನು ಮಾತ್ರ ಮರು ಮಂಜೂರಾತಿ ಮಾಡಲಾಗುತ್ತಿದೆ. ಹಲವರು ಕಾನೂನುಬಾಹಿರವಾಗಿ ಅನುಭವದಲ್ಲಿದ್ದು, ಯಾವುದೇ ದಾಖಲೆಗಳನ್ನು ಹೊಂದಿಲ್ಲ. ನಾವು ನಿಯಮಾನುಸಾರ ಕ್ರಮ ಕೈಗೊಂಡಿದ್ದೇವೆ. ಯಾವ ರೈತರ ಪರ ಅಥವಾ ವಿರೋಧವಾಗಿ ಅಧಿಕಾರಿಗಳು ಇಲ್ಲ’ ಎಂದು ತಹಶೀಲ್ದಾರ್ ಆರತಿ ಬಿ. ಸ್ಪಷ್ಟಪಡಿಸಿದರು.
‘ಅನೇಕ ತಲೆಮಾರುಗಳಿಂದ ಅನುಭವದಲ್ಲಿದ್ದರೂ ತಾಲ್ಲೂಕು ಆಡಳಿತ ಯಾವುದೇ ಸೂಚನೆ ನೀಡದೆ ಒಮ್ಮೆಲೆ ನಮ್ಮನ್ನು ಒಕ್ಕಲುಬ್ಬಿಸಲು ಬಂದಿದ್ದಾರೆ. ಇದರಿಂದ ನಮಗೆ ಸಾಕಷ್ಟು ಅನ್ಯಾಯವಾಗುತ್ತಿದ್ದು, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಅನುಭವದಲ್ಲಿ ಇರುವ ಜಮೀನನ್ನು ಬಿಟ್ಟು ಕೊಡುವುದಿಲ್ಲ. ಈ ವಿಷಯದಲ್ಲಿ ಶಾಸಕರು ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕಿದೆ’ ಎಂದು ಜಮೀನಿನಲ್ಲಿ ಅನುಭವದಲ್ಲಿದ್ದ ರೈತರು ಹೇಳಿದರು.
‘ಎಲ್ಲರೂ ರೈತರೇ ಆಗಿರುವುದರಿಂದ ಯಾವುದೇ ಕಾನೂನು ಸಂಘರ್ಷಕ್ಕೆ ಅವಕಾಶ ನೀಡಬಾರದು. ಸರ್ಕಾರದ ನಿರ್ದೇಶನದಂತೆ ನಿಯಮಾನುಸಾರ ಕ್ರಮ ಕೈಗೊಳ್ಳುತ್ತಿದ್ದೇವೆ. ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ’ ಎಂದು ಉಪ ವಿಭಾಗಾಧಿಕಾರಿ ಗೌರವ ಕುಮಾರ್ ಶೆಟ್ಟಿ ತಿಳಿಸಿದರು.
ಗಡಿ ಗುರುತಿಸುವ ಕೆಲಸಕ್ಕೆ ಅಡ್ಡಿ ಉಂಟು ಮಾಡಬಹುದು ಎಂಬ ನಿರೀಕ್ಷೆಯಿಂದಲೇ ಬಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿತ್ತು.
ಎಡಿಎಲ್ಆರ್ ತಿಮ್ಮಯ್ಯ, ಪೊಲೀಸ್ ಇನ್‌ಸ್ಪೆಕ್ಟರ್ ಗೋಪಿನಾಥ್, ಪಿಎಸ್ಐ ಸುನಿಲ್ ಕುಮಾರ್, ಶಿವಕುಮಾರ್, ಪೊಲೀಸ್ ಸಿಬ್ಬಂದಿ, ಕಂದಾಯ ನಿರೀಕ್ಷಕ ಮೋಹನ್, ತಾಲ್ಲೂಕು ಸರ್ವೆಯರ್ ನಿಜಗುಣಪ್ಪ, ಸರ್ವೆ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಭಾಗಿಯಾಗಿದ್ದರು.
ಫೋಟೋ01ಸುದ್ದಿ 01: ಸಂತ್ರಸ್ತ ರೈತರಿಗೆ ಭೂಮಿ ಮರುಮಂಜರಾತಿ ಮಾಡಲು ಮುಂದಾದ ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಹಾಗೂ ತಹಶೀಲ್ದಾರ್ ಆರತಿ ಬಿ.