ಮಂಗಳವಾರ, ಮಾರ್ಚ್ 31, 2020
19 °C
‘ಪ್ರಜಾವಾಣಿ’ಯ ‘ಫೋನ್‌–ಇನ್‌’ ಕಾರ್ಯಕ್ರಮ; ತುಮುಲ್ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ, ವ್ಯವಸ್ಥಾಪಕ ನಿರ್ದೇಶಕ ಡಾ.ಸುಬ್ರಾಯ ಭಟ್

ಅಳತೆಯಲ್ಲಿ ಮೋಸ ತಡೆದು ಸಕಾಲಕ್ಕೆ ಹಣ ಕೊಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನಮ್ಮ ಡೇರಿಯಲ್ಲಿ ಪೇಮೆಂಟ್ ಕೊಡುವುದು ತಡವಾಗುತ್ತಿದೆ.... ಡಿಗ್ರಿ ಬರುತ್ತಿವೆಂದು ಹಾಲನ್ನು ವಾಪಸ್ ಕಳುಹಿಸುತ್ತಾರೆ.... ಹಾಲು ಹಾಕಿದವರಿಗೆ ಸರಿಯಾಗಿ ಮಾಹಿತಿ ಕೊಡಲ್ಲ... 1 ಲೀಟರ್ ಹಾಲು ಹಾಕಿದರೆ ಮಿಷನ್‌ನಲ್ಲಿ 900 ಗ್ರಾಂ ಎಂದು ತೋರಿಸುತ್ತದೆ....

‘ಪ್ರಜಾವಾಣಿ’ ಪತ್ರಿಕೆಯು ಹಾಲು ಉತ್ಪಾದಕರು ಮತ್ತು ರೈತರ ಹಿತಾದೃಷ್ಟಿಯಿಂದ ಸೋಮವಾರ ನಡೆಸಿದ ‘ಫೋನ್‌–ಇನ್‌’ ಕಾರ್ಯಕ್ರಮದಲ್ಲಿ ಕೇಳಿಬಂದ ದೂರುಗಳು.

ಜಿಲ್ಲೆಯ ನಾನಾ ಭಾಗಗಳಿಂದ ಹಾಲು ಉತ್ಪಾದಕರು, ರೈತರು, ಸಾರ್ವಜನಿಕರು ಕರೆ ಮಾಡಿ ತಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಹೇಳಿಕೊಂಡರು. ತಮಗೆ ಬರಬೇಕಾದ ಸೌಲಭ್ಯ, ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಸಮಸ್ಯೆಗಳಿಗೆ ದೂರವಾಣಿ ಮೂಲಕ ಪರಿಹಾರ ಕಂಡುಕೊಂಡರು.

‘ಫೋನ್‌–ಇನ್‌’ನಲ್ಲಿ ಅನೇಕರು ಹಾಲಿನ ಅಳತೆಯಲ್ಲಿ ಆಗುತ್ತಿರುವ ಮೋಸ, ವ್ಯತ್ಯಾಸ, ನಿಗದಿತ ಸಮಯಕ್ಕೆ ಬಟವಾಡೆ ಆಗದಿರುವ ಬಗ್ಗೆ ಪ್ರಶ್ನಿಸಿದರು. ಹಲವರು ಹಾಲಿನ ದರವನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ತುಮಲ್ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಸುಬ್ರಾಯ ಭಟ್ ಅತ್ಯಂತ ತಾಳ್ಮೆಯಿಂದಲೇ ಹಾಲು ಉತ್ಪಾದಕರ ಪ್ರಶ್ನೆಗಳನ್ನು ಆಲಿಸಿ, ಮಾಹಿತಿ ನೀಡಿದರು. ಕೆಲವು ಅನುಮಾನಗಳನ್ನು ತಕ್ಷಣವೇ ಪರಿಹರಿಸಿದರು. ಕೆಲವು ಸಮಸ್ಯೆಗಳನ್ನು ಶೀಘ್ರವೇ ಇತ್ಯರ್ಥಪಡಿಸುವ ಭರವಸೆ ನೀಡಿದರು. ಹಾಲು ಒಕ್ಕೂಟದಿಂದ ದೊರೆಯುವ ಸೌಲಭ್ಯಗಳು, ಬೇಸಿಗೆಯಲ್ಲಿ ಹಾಲು ಉತ್ಪಾದನೆ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳು, ಹಾಲು ಉತ್ಪಾದಕರ ಮಕ್ಕಳು ಮತ್ತು ಕುಟುಂಬಗಳಿಗೆ ಒಕ್ಕೂಟದಿಂದ ದೊರೆಯುವ ಸೌಲಭ್ಯಗಳನ್ನು ಕರೆ ಮಾಡಿದವರಿಗೆ ಮನದಟ್ಟು ಮಾಡಿಕೊಟ್ಟರು.

‘ಫೋನ್‌–ಇನ್‌’ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಹಲವರು ಕರೆ ಮಾಡಿದ್ದು, ಅದರಲ್ಲಿ ಆಯ್ದ ಪ್ರಶ್ನೆ ಮತ್ತು ಅಧ್ಯಕ್ಷರು ಮತ್ತು ಅಧಿಕಾರಿ ನೀಡಿದ ಉತ್ತರವನ್ನು ಇಲ್ಲಿ ನೀಡಲಾಗಿದೆ.

***

l ನಂಜಪ್ಪ, ಮಾವಿನಕೆರೆ, ತುರುವೇಕೆರೆ ತಾಲ್ಲೂಕು

ಪ್ರಶ್ನೆ: ನಮ್ಮ ಸೀಮೆ ಹಸು 1 ತಿಂಗಳು ಕೆಮ್ಮಿನಿಂದ ಬಳಲುತ್ತಿದೆ. ಒಕ್ಕೂಟದಿಂದ ವೈದ್ಯಕೀಯ ಸೇವೆ ಇಲ್ಲವೇ?

ಎಂ.ಡಿ: ಈ ಬಗ್ಗೆ ತುರುವೇಕೆರೆ ಪಶು ವೈದ್ಯರಿಗೆ ತಿಳಿಸುತ್ತೇನೆ. ನೀವು ಸಹ ₹60 ಪಾವತಿಸಿ ತುರ್ತು ಕರೆ ಕೂಪನ್ ಪಡೆಯಿರಿ.

* ಪ್ರಶಾಂತ್ ಕರಿಕೆರೆ, ತಿಪಟೂರು

ಪ್ರಶ್ನೆ: ಬೇಸಿಗೆಯಲ್ಲಿ ಹಾಲಿನ ಗುಣಮಟ್ಟ ಕಡಿಮೆಯಾಗುತ್ತಿದೆ. ಈ ಬಗ್ಗೆ ಒಕ್ಕೂಟವಾಗಲಿ, ವೈದ್ಯರಾಗಲಿ ರೈತರಿಗೆ ಮಾಹಿತಿ ನೀಡುತ್ತಿಲ್ಲ.

ಅಧ್ಯಕ್ಷ: ಈ ಬಗ್ಗೆ ಎಲ್ಲಾ ಪಶು ವೈದ್ಯರೊಂದಿಗೆ ಮಾತನಾಡಿ, ರೈತರನ್ನು ಒಂದೆಡೆ ಸೇರಿಸಿ ಶಿಬಿರ ನಡೆಸಲಾಗುವುದು. ಶಿಬಿರದಲ್ಲಿ ರೈತರಿಗೆ ಪೂರಕ ಮಾಹಿತಿ ನೀಡಲಾಗುವುದು.

* ಮೂರ್ತಿ, ಕಲ್ಲೇಗೌಡನಪಾಳ್ಯ, ತಿಪಟೂರು ತಾ

ಪ್ರಶ್ನೆ: ಕಲ್ಲೇಗೌಡನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಗಂಡ, ಹೆಂಡತಿ ಕಾರ್ಯದರ್ಶಿ, ಖಜಾಂಚಿ ಆಗಿದ್ದಾರೆ. ಅಕ್ರಮ ನಡೆಸಿದ್ದಾರೆ.

ಅಧ್ಯಕ್ಷ: ಅಧಿಕಾರಿಗಳನ್ನು ಕಳುಹಿಸಿ ಮಾಹಿತಿ ಪಡೆಯುತ್ತೇನೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗಮನ ಹರಿಸುತ್ತೇನೆ.

* ಗೋವಿಂದಪ್ಪ, ಕೊಟ್ಟ, ಶಿರಾ ತಾ

ಪ್ರಶ್ನೆ: ಡೇರಿಯಲ್ಲಿ ಸ್ಯಾಂಪಲ್‌ಗೆಂದು ಹೆಚ್ಚುವರಿ ಹಾಲು ಪಡೆಯುತ್ತಾರೆ. ಈ ಬಗ್ಗೆ ಸಮರ್ಪಕ ಮಾಹಿತಿ ಸಿಗುತ್ತಿಲ್ಲ.

ಅಧ್ಯಕ್ಷ: ಸಂಗ್ರಹವಾಗುವ 100 ಲೀಟರ್‌ ಹಾಲಿನಲ್ಲಿ 3 ಲೀಟರ್‌ ಹಾಲನ್ನು ಸಂಘದ ಲಾಭಕ್ಕೆಂದು ತೆಗೆದುಕೊಳ್ಳುವ ನಿಯಮವಿದೆ. ಉತ್ಪಾದಕರಿಂದ 40ರಿಂದ 70 ಗ್ರಾಂಗಿಂತ ಹೆಚ್ಚು ಹಾಲು ಪಡೆಯಲು ಅವಕಾಶ ಇಲ್ಲ. ಈ ಬಗ್ಗೆ ಸಂಬಂಧಪಟ್ಟವರಿಗೆ ಸೂಚಿಸಲಾಗುವುದು.

* ದಕ್ಷಿಣಮೂರ್ತಿ, ಸಾಸಲು, ಚಿ.ನಾ.ಹಳ್ಳಿ

ಪ್ರಶ್ನೆ: ಪ್ರೋತ್ಸಾಹ ಧನದ ಬಗ್ಗೆ ಪೂರಕ ಮಾಹಿತಿ ಸಿಗುತ್ತಿಲ್ಲ

ಅಧ್ಯಕ್ಷ: ಪ್ರೋತ್ಸಾಹಧನ ಯಾರಿಗೆ ಎಷ್ಟು ಬಂದಿದೆ ಎಂಬ ಬಗ್ಗೆ ನೋಟಿಸ್‌ ಬೋರ್ಡ್‌ನಲ್ಲಿ ಹಾಕಬೇಕು. ಹಾಕದಿದ್ದರೆ ಸಂಘದ ಕಾರ್ಯದರ್ಶಿಗೆ ಸೂಚಿಸಲಾಗುವುದು.

* ಶಂಕರಮೂರ್ತಿ, ರಂಗಾಪುರ, ತಿಟಪೂರು

ಪ್ರಶ್ನೆ: ಹಾಲಿನ ದರ ಹೆಚ್ಚಿಸಬೇಕು, ಹಾಲು ಉತ್ಪಾದಕರನ್ನು ತರಬೇತಿ ಪ್ರವಾಸಕ್ಕೆ ಕಳುಹಿಸಬೇಕು.

ಅಧ್ಯಕ್ಷ: ನಾನು ಅಧ್ಯಕ್ಷನಾಗುವ ಮುಂಚೆ ಪ್ರತಿ ಲೀಟರ್‌ಗೆ ₹22 ನೀಡಲಾಗುತ್ತಿತ್ತು. ಈಗ ದರ ₹6.30 ಹೆಚ್ಚಾಗಿದೆ. ಹಾಲು ಉತ್ಪಾದಕರನ್ನು ಪ್ರವಾಸಕ್ಕೆ ಕಳಹಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗುವುದು.

* ಶ್ರೀಕಂಠಯ್ಯ, ಮಧುಗಿರಿ ತಾ

ಪ್ರಶ್ನೆ: ಹಾಲಿನ ಬಟವಾಡೆ ನಿಗದಿತ ಸಮಯಕ್ಕೆ ನೀಡುತ್ತಿಲ್ಲ. ವಾರಕ್ಕೆ ನೀಡಬೇಕಾದ ಬಟವಾಡೆ ಒಂದು ತಿಂಗಳವರೆಗೆ ಉಳಿಸಿಕೊಳ್ಳುತ್ತಿದ್ದಾರೆ.

ಅಧ್ಯಕ್ಷ: ಒಕ್ಕೂಟವು ಯಾವುದೇ ಬಟವಾಡೆಯ ಹಣವನ್ನು ಬಾಕಿ ಉಳಿಸಿಕೊಂಡಿಲ್ಲ. ಮಾರ್ಚ್‌ ಮೊದಲನೇ ವಾರದವರೆಗೂ ಹಣ ಬಿಡುಗಡೆ ಮಾಡಿದ್ದೇವೆ. ಈ ಬಗ್ಗೆ ನಿಮ್ಮ ಸಂಘದ ಕಾರ್ಯದರ್ಶಿಯನ್ನು ವಿಚಾರಿಸಿ, ಬಟವಾಡೆಗೆ ಕ್ರಮಕೈಗೊಳ್ಳಲಾಗುವುದು.

* ರಾಜು, ಕೆ.ಮೋಹನಹಳ್ಳಿ

ಪ್ರಶ್ನೆ: ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಷೇರು ಪಡೆಯಲು ಏನು ಮಾಡಬೇಕು.

ಉತ್ತರ: ಷೇರು ಪಡೆಯಬೇಕಾದರೆ ಡೇರಿಗೆ 180 ದಿನ ಅಥವಾ 500 ಲೀಟರ್ ಹಾಲು ಹಾಕಿರಬೇಕು ಎಂಬ ನಿಬಂಧನೆಯಿದೆ. ಈ ನಿಬಂಧನೆಗೆ ಒಳಪಟ್ಟಿದ್ದರೆ ಷೇರು ಪಡೆಯಬಹುದು.

* ನಂಜೇಶ್, ಒದಲೂರು, ಗುಬ್ಬಿ ತಾ

ಪ್ರಶ್ನೆ: ನಿಗದಿತ ಸಮಯಕ್ಕೆ ಬಟವಾಡೆ ನೀಡುತ್ತಿಲ್ಲ. ಫೆಬ್ರುವರಿ 15ರಿಂದ 30ರ ವರೆಗಿನ ಬಟವಾಡೆ ಮಾರ್ಚ್‌ 20ಕ್ಕೆ ನೀಡಿದ್ದಾರೆ.

ಅಧ್ಯಕ್ಷ: ಒಕ್ಕೂಟ ಹಾಲು ಉತ್ಪಾದಕರ ಬಟವಾಡೆಯ ಹಣವನ್ನು ಬಾಕಿ ಉಳಿಸಿಕೊಂಡಿಲ್ಲ. ಈ ಬಗ್ಗೆ ಎಲ್ಲಾ ಸಹಕಾರ ಸಂಘಗಳಿಗೂ ನಿರ್ದೇಶನ ನೀಡುತ್ತೇವೆ.

* ಲತಾ, ಕಲ್ಲೇಗೌಡನಪಾಳ್ಯ, ತಿಪಟೂರು

ಪ್ರಶ್ನೆ: ಹೊಸದಾಗಿ ನಾನು ಕಲ್ಲೇಗೌಡನಪಾಳ್ಯ ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿ ಸದಸ್ಯಳಾಗಿ ಆಯ್ಕೆಯಾಗಿದ್ದು, ನನಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಸಂಘದ ವಿಚಾರಗಳ ಬಗ್ಗೆ ಮಾಹಿತಿ ಕೇಳಿದರೆ ನಿಮ್ಮನ್ನು ಸಂಘದಿಂದ ತೆಗೆದು ಹಾಕುತ್ತೇವೆ ಎನ್ನುತ್ತಾರೆ.

ಅಧ್ಯಕ್ಷ: ನಿಮ್ಮನ್ನು ಯಾವುದೇ ಕಾರಣಕ್ಕೂ ತೆಗೆದು ಹಾಕಲು ಆಗುವುದಿಲ್ಲ. ಈ ಬಗ್ಗೆ ಮಾಹಿತಿ ತರಿಸಿಕೊಂಡು ಸಂಬಂಧಪಟ್ಟವರಿಗೆ ಕ್ರಮಕ್ಕೆ ಸೂಚಿಸುತ್ತೇನೆ.

* ನಂದೀಶಯ್ಯ, ಹಿರೆತೊಟ್ಲು ಕೆರೆ, ಕೋರಾ

ಪ್ರಶ್ನೆ: ನಮ್ಮ ಡೇರಿಯಲ್ಲಿ ಹಾಲು ಪರೀಕ್ಷೆ ಮೆಷಿನ್ ಹಾಳಾಗಿದೆ. ಕಂಪ್ಯೂಟರೈಸ್ಡ್‌ ಬಿಲ್‌ ಸಿಗುತ್ತಿಲ್ಲ.

ಅಧ್ಯಕ್ಷ: ಮೆಷಿನ್‌ ಕಳುಹಿಸಿಕೊಡುವ ವ್ಯವಸ್ಥೆ ಮಾಡುತ್ತೇನೆ. ಕಂಪ್ಯೂಟರೈಸ್ಡ್‌ ಬಿಲ್ಲಿಂಗ್‌ ಬಗ್ಗೆ ಸಂಬಂಧಪಟ್ಟ ತಾಲ್ಲೂಕು ನಿರ್ದೇಶಕರ ಗಮನಕ್ಕೆ ತರುತ್ತೇನೆ.

* ರಾಜು, ಮುದ್ದೇನಹಳ್ಳಿ

ಪ್ರಶ್ನೆ: ನಿತ್ಯ ಆರೇಳು ಕ್ಯಾನ್‌ ಹಾಲು ಸಂಗ್ರಹವಾಗುತ್ತಿದ್ದು, ಇದರಲ್ಲಿ 2–3 ಕ್ಯಾನ್‌ ಹಾಲನ್ನು ಖಾಸಗಿಯವರಿಗೆ ಮಾರಿಕೊಳ್ಳಲಾಗುತ್ತಿದೆ.

ಅಧ್ಯಕ್ಷ: ಈ ಬಗ್ಗೆ ಶೀಘ್ರವೇ ಕ್ರಮವಹಿಸುತ್ತೇನೆ.

* ತ್ಯಾಗರಾಜ, ತಂಡಗಗ್ರಾಮ, ತುರುವೇಕೆರೆ

ಪ್ರಶ್ನೆ: ಈ ಹಿಂದೆ ತಂಡಗ ಗ್ರಾಮದಲ್ಲಿ ಡೇರಿ ಇದ್ದು, ಇದೀಗ ಕಾರ್ಯ ನಿರ್ವಹಿಸುತ್ತಿಲ್ಲ.

ಉತ್ತರ: ಡೇರಿ ಏಕೆ ಸ್ಥಗಿತಗೊಂಡಿದೆ ಎಂಬ ಬಗ್ಗೆ ಸಮರ್ಪಕ ಮಾಹಿತಿ ಪಡೆದು, ಪುನರ್ ಆರಂಭಿಸುವುದಕ್ಕೆ ಕ್ರಮ ವಹಿಸಲಾಗುವುದು.

* ತಾರಕೇಶ್, ಸಾಸಲು, ಚಿ.ನಾ.ಹಳ್ಳಿ

ಪ್ರಶ್ನೆ: ಉಪಡೇರಿ ರದ್ದಾಗಿ 3 ತಿಂಗಳಾಗಿದೆ. ಇಲ್ಲಿದ್ದ ಕ್ಯಾನ್‌, ಮೆಷಿನ್‌ ಅಲ್ಲಿಯೇ ಉಳಿದುಕೊಂಡಿದೆ.

ಉತ್ತರ: ಉಪಕೇಂದ್ರಗಳನ್ನು 6 ತಿಂಗಳಲ್ಲಿ ಮುಖ್ಯ ಕೇಂದ್ರಗಳನ್ನಾಗಿ ಮಾಡಿಕೊಳ್ಳಬೇಕು ಎಂಬ ನಿಯಮವಿದೆ. ಕ್ಯಾನ್‌, ಮೆಷಿನ್‌ಗಳ ಕುರಿತು ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು.

* ಅಶೋಕ್, ಗುಬ್ಬಿ

ಪ್ರಶ್ನೆ: ಒಕ್ಕೂಟದಿಂದ ಹಸಿ ಹುಲ್ಲು ಬೆಳೆಸಿ ರೈತರಿಗೆ ಕಡಿಮೆ ಬೆಲೆಯಲ್ಲಿ ನೀಡುವ ವ್ಯವಸ್ಥೆ ಮಾಡಿ.

ಅಧ್ಯಕ್ಷ: ಈಗಾಗಲೇ ಉತ್ತಮ ತಳಿಯ ಬೀಜಗಳನ್ನು ಹಾಕಿ ಅಜೊಲಾ, ನೇಫಿಯರ್, ಗಿಣಿರಾಸು, ಕುದುರೆ ಮೆಂತ್ಯಾ ಬೆಳೆದು ರೈತರಿಗೆ ನೀಡುತ್ತಿದ್ದೇವೆ. ಮೇವಿನ ಬೀಜಗಳಿಗೆ ಶೇ 75ರಷ್ಟು ಸಬ್ಸಿಡಿ ನೀಡಲಾಗುತ್ತಿದೆ.

* ಮಂಜುನಾಥ್, ಗುಬ್ಬಿ

ಪ್ರಶ್ನೆ: ನಂದಿನಿ ಮಳಿಗೆಗಳು ಪ್ರಭಾವಿಗಳ ಪಾಲಾಗುತ್ತಿವೆ. ಅರ್ಹರಿಗೆ ಸಿಗುತ್ತಿಲ್ಲ.

ಅಧ್ಯಕ್ಷ: ಬಡವರು, ಅಂಗವಿಕಲರು, ಅರ್ಹರಿಗೆ ಮಳಿಗೆಗಳು ಸಿಗುವಂತೆ ಕ್ರಮ ವಹಿಸಲು ತಾಲ್ಲೂಕು ನಿರ್ದೇಶಕರಿಗೆ ಸಲಹೆ ನೀಡಲಾಗುವುದು.

* ಸ್ಪರ್ಣಾ ಪ್ರದೀಪ್, ತೀರ್ಥಪುರ, ಚಿ.ನಾ.ಹಳ್ಳಿ

ಪ್ರಶ್ನೆ: ಹಾಲು ಉತ್ಪಾದಕರ ಮಕ್ಕಳಿಗೆ ಒಕ್ಕೂಟದಿಂದ ಏನೇನು ಸೌಲಭ್ಯವಿದೆ?

ಅಧ್ಯಕ್ಷ: ಪ್ರಥಮ ವರ್ಷದ ಎಂಬಿಬಿಎಸ್‌ ಓದುವ ಮಕ್ಕಳಿಗೆ ₹25 ಸಾವಿರ ಪ್ರೋತ್ಸಾಹ ಧನ, ಬಿಇ, ಬಿಎಸ್‌ಸಿ, ಪಶುವೈದ್ಯಕೀಯ ಮತ್ತಿತರೆ ಕೋರ್ಸ್‌ಗಳಿಗೆ ₹15 ಸಾವಿರ ಪ್ರೋತ್ಸಾಹಧನ, ಪದವಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೌಲಭ್ಯವಿದೆ.

* ಭಾರತಿ, ಕೆ.ಬಿ.ಕ್ರಾಸ್‌, ಭೀರಸಂದ್ರ

ಪ್ರಶ್ನೆ: ಪಶುಗಳಿಗೆ ಮೆಡಿಕಲ್‌ ಕಿಟ್ ಕೊಡುವುದಿಲ್ಲವೇ?

ಅಧ್ಯಕ್ಷ: ಪ್ರಾಥಮಿಕ ಚಿಕಿತ್ಸಾ ಕಿಟ್‌ ನೀಡುತ್ತೇವೆಯೇ ಹೊರತು, ಮಡಿಕಲ್‌ ಕಿಟ್ ಕೊಡುವುದಿಲ್ಲ. ಪಶುವೈದ್ಯರನ್ನು ಸಂಪರ್ಕಿಸಿ, ತಮ್ಮ ಹಸುಗಳಿಗೆ ನಂದಿನಿ ಗೋಲ್ಡ್‌ ಪಶು ಆಹಾರವನ್ನೇ ಕೊಡಿ.

* ಧನಂಜಯ, ತಿಪಟೂರು

ಪ್ರಶ್ನೆ: ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಷೇರು ಹಾಕಿಸಿಕೊಳ್ಳುತ್ತಿಲ್ಲ.

ಅಧ್ಯಕ್ಷ: ಮನೆಗೆ ಒಂದು ಷೇರು ಎಂಬ ಮಾತ್ರ ನಿಯಮವಿದೆ. ತಾವು ಕುಟುಂಬದಿಂದ ಬೇರ್ಪಟಿದ್ದರೆ ನಿಯಮಗಳಿಗೆ ಅನುಗುಣವಾಗಿ ಷೇರು ಪಡೆಯಬಹುದು.

––––––––

ಕರೆ ಮಾಡಿದವರು: ಸಿದ್ದರಾಮಣ್ಣ ಬೆಳ್ಳಾವಿ, ರವೀಂದ್ರ ಹೆಬ್ಬಾಕ, ಜಗದೀಶ್ ಮುದ್ದೇನಹಳ್ಳಿ, ರೇವಣ್ಣ ಬರಗೂರು, ನಾಗರತ್ನ ತುಮಕೂರು

–––––

ಪ್ರಜಾವಾಣಿ ತಂಡ: ಡಿ.ಎಂ.ಕುರ್ಕೆ ಪ್ರಶಾಂತ್, ಸುಮಾ ಬಿ., ಪೀರ್‌ಪಾಷ, ವಿಠಲ್, ಅನಿಲ್ ಕುಮಾರ್ ಜಿ., ವಿನಯ್‌.

--

ಹೆಚ್ಚುವರಿ 1 ಗಂಟೆ

ಪ್ರಜಾವಾಣಿ ‘ಫೋನ್–ಇನ್‌’ ಕಾರ್ಯಕ್ರಮಕ್ಕೆ 1 ಗಂಟೆ ಸಮಯ ನಿಗದಿಪಡಿಸಲಾಗಿತ್ತು. ನಿರಂತರವಾಗಿ ಕರೆಗಳು ಬರುತ್ತಿದ್ದ ಕಾರಣ ಸಿ.ವಿ.ಮಹಾಲಿಂಗಯ್ಯ, ಡಾ.ಸುಬ್ರಾಯ ಭಟ್‌ ಹೆಚ್ಚುವರಿ 1 ಗಂಟೆ ಕಚೇರಿಯಲ್ಲಿ ಕುಳಿತು ಹಾಲು ಉತ್ಪಾದಕರು, ರೈತರ ಸಮಸ್ಯೆಗಳನ್ನು ಆಲಿಸಿದರು.

--

‘ಫೋನ್‌–ಇನ್‌’ಗೆ ಮೆಚ್ಚುಗೆ

ಹಾಲು ಉತ್ಪಾದಕರು ಹಾಗೂ ರೈತರು ತುಮುಲ್‌ನ ಬೆನ್ನೆಲುಬು. ಆದರೆ, ನಾವು ಎಲ್ಲಾ ಉತ್ಪಾಕದರ ಸಮಸ್ಯೆ ಆಲಿಸುವುದು ಹಾಗೂ ಸಹಕಾರ ಸಂಘಗಳಿಗೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ. ಇಂತಹ ‘ಫೋನ್‌–ಇನ್‌’ ಕಾರ್ಯಕ್ರಮದ ಮೂಲಕ ನಾವು ಎಲ್ಲರನ್ನೂ ತಲುಪಬಹುದು. ಜತೆಗೆ ಸಹಕಾರ ಸಂಘಗಳಲ್ಲಿ ಇರುವ ನ್ಯೂನ್ಯತೆ, ಹಾಲು ಉತ್ಪಾದಕರಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ತಿಳಿಯಲು ಸಹಕಾರಿಯಾಗುತ್ತದೆ. ರೈತರು ಹಾಗೂ ಹಾಲು ಉತ್ಪಾದಕರ ಹಿತಾದೃಷ್ಟಿಯಿಂದ ‘ಪ್ರಜಾವಾಣಿ’ ಇಂತಹ ಕಾರ್ಯಕ್ರಮ ನಡೆಸಿರುವುದು ಶ್ಲಾಘನೀಯ ಎಂದು ಸಿ.ವಿ.ಮಹಾಲಿಂಗಯ್ಯ, ಡಾ.ಸುಬ್ರಾಯಭಟ್‌ ಮೆಚ್ಚುಗೆ ವ್ಯಕ್ತಪಡಿಸಿದರು.

--

ಅಂಕಿ–ಅಂಶ

2.60 ಲಕ್ಷ ಲೀಟರ್‌

ತುಮುಲ್‌ ನಿತ್ಯ ಸಂಗ್ರಹಿಸುವ ಹಾಲು

76,000

ತುಮುಲ್‌ಗೆ ಹಾಲು ಹಾಕುವ ಉತ್ಪಾದಕರು

1,216

ಹಾಲು ಉತ್ಪಾದಕ ಸಹಕಾರ ಸಂಘಗಳು

70,000 ಲೀಟರ್‌

ನಿತ್ಯ ಉತ್ಪಾದನೆಯಾಗುವ ಮೊಸರು

₹ 1 ಸಾವಿರ ಕೋಟಿ

ತುಮುಲ್‌ನ ವಾರ್ಷಿಕ ವಹಿವಾಟು

885

ತುಮುಲ್‌ನಲ್ಲಿನ ಒಟ್ಟು ಸಿಬ್ಬಂದಿ

--

ಟೆಸ್ಟ್‌ಗೆ 200 ಮಿ.ಲೀ ತಗೋತ್ತಾರೆ

ಸಿದ್ದಪ್ಪ, ಚೇಳೂರು: ಫ್ಯಾಟ್‌ ಟೆಸ್ಟ್‌ಗೆ 200 ಮಿಲಿ ಲೀಟರ್‌ ಹಾಲು ತೆಗೆದುಕೊಳ್ಳುತ್ತಾರೆ. ಪ್ರೋತ್ಸಾಹ ಧನ ಬಂದ ಮಾಹಿತಿ ಕೊಡುವುದಿಲ್ಲ.

ಎಂ.ಡಿ: ಫ್ಯಾಟ್‌ ಪರೀಕ್ಷೆಗೆಂದು ಗರಿಷ್ಠ 50 ಎಂ.ಎಲ್‌ ಮಾತ್ರ ಹಾಲು ಪಡೆಯಲು ಅವಕಾಶವಿದೆ. ಈ ನಿಯಮ ಉಲ್ಲಂಘಿಸಿದವರ ಮೇಲೆ ಕ್ರಮ ವಹಿಸುತ್ತೇವೆ. ಹಾಗೆಯೇ ಸಂಸ್ಥೆಯ ವ್ಯವಹಾರದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಡೇರಿಗೆ ಹಾಕಿದ ಹಾಲಿನ ಪ್ರಮಾಣ ಮತ್ತು ಫ್ಯಾಟ್‌ ಪ್ರಮಾಣವನ್ನು ಕಂಪ್ಯೂಟರ್‌ನಲ್ಲಿ ಜನರೇಟ್‌ ಆದ ಚೀಟಿಯಲ್ಲೇ ಮುದ್ರಿಸಿ ಕೊಡಲಾಗುತ್ತದೆ. ಯಾವ ತಿಂಗಳಿನ ಪ್ರೋತ್ಸಾಹಧನ ಜಮೆ ಆಗಿದೆ ಎಂಬ ಮಾಹಿತಿಯನ್ನು ಪಾಸ್‌ಬುಕ್‌ನಲ್ಲಿಯೇ ಮುದ್ರಿಸಲು ಯೋಜಿಸಿದ್ದೇವೆ.

--

ಕೇವಲ ₹1,000 ದಂಡ ಸಾಕೇ?

ಇ.ಸಿ.ರಾಜಣ್ಣ, ಗುಂಡಿನಪಾಳ್ಯ, ಕೊರಟಗೆರೆ: ಯೂರಿಯಾ ಮಿಶ್ರಿತ ಹಾಲು ಹಾಕಿ, ಸಾವಿರಾರು ರೂಪಾಯಿ ಗಳಿಸಿದವರಿಗೆ ಕೇವಲ ₹1,000 ದಂಡ ಮಾತ್ರ ಹಾಕಿದರೆ ಸಾಕೆ?

ಎಂ.ಡಿ: ಆಹಾರ ಸುರಕ್ಷತೆ ಕಾಯ್ದೆ ಮತ್ತು ನಮ್ಮ ಸಂಸ್ಥೆಯ ಬೈಲಾ ಪ್ರಕಾರ ನಿರ್ದಿಷ್ಟ ದಂಡ ವಿಧಿಸುವ ಅವಕಾಶವಿದೆ. ಅಷ್ಟನ್ನು ಮಾತ್ರ ಪಡೆಯುತ್ತೇವೆ. ಇಂತಹ ತಪ್ಪು ಮಾಡುವವರಿಂದ ಹಾಲು ಪಡೆಯಲೇಬೇಡಿ ಎಂಬ ಒತ್ತಾಯಗಳು ಬರುತ್ತೇವೆ. ಆದರೂ, ನಾವು ತಿಳಿವಳಿಕೆ ಹೇಳಿ ಉತ್ಪಾದಕರನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ.

--

ಮುಚ್ಚಿದ ಡೇರಿ ಆರಂಭಿಸಿ

ಚಿಕ್ಕನಾಯಕನಹಳ್ಳಿ ತಾಲ್ಲೂಕು ಬರದಲೆಪಾಳ್ಯದಿಂದ ಕರೆ ಮಾಡಿದ್ದ ಗ್ರಾಮಸ್ಥರು, ‘ನಮ್ಮ ಊರಿನ ಡೇರಿ ಮುಚ್ಚಿ ನಾಲ್ಕು ವರ್ಷ ಆಗಿದೆ.  ಬೇಗ ತೆರೆಸಿ, ಅನುಕೂಲ ಮಾಡಿಕೊಡಿ‘ ಎಂದು ಮನವಿ ಮಾಡಿದರು.

‘ಸ್ವಹಿತಾಸಕ್ತಿ, ಸಂಘದ ವ್ಯವಹಾರದಲ್ಲಿನ ಗೊಂದಲದಿಂದ ಡೇರಿಗಳು ಮುಚ್ಚುತ್ತವೆ. ನಿಮ್ಮಲ್ಲೂ ಅದೇ ಆಗಿರಬಹುದು. ಅರ್ಜಿ ಕೊಡಿ, ಶೀಘ್ರ ಪರಿಹರಿಸಲಾಗುವುದು’ ಎಂದು ಅಧ್ಯಕ್ಷರು ಪ್ರತಿಕ್ರಿಯಿಸಿದರು.

--

ಕೊರೊನಾ ಜಾಗೃತಿ ಮೂಡಿಸಿ

ಮಂಜು, ಬೈತ್ರುಹೊಸಳ್ಳಿ, ತುರುವೇಕೆರೆ: ಪ್ರತಿ ಡೇರಿ ಮುಂದೆ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸುವ ಫಲಕಗಳನ್ನು ಹಾಕಿಸಿ.

ಅಧ್ಯಕ್ಷ: ನಿಮ್ಮ ಸಲಹೆ ಚನ್ನಾಗಿದೆ. ನಮ್ಮ ಸಂಸ್ಥೆಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ಸೋಂಕಿನ ಜಾಗೃತಿಯ ಸಂದೇಶಗಳನ್ನು ಒಳಗೊಂಡ ಭಿತ್ತಿಪತ್ರಗಳನ್ನು ಅಳವಡಿಸಲು ಯೋಚಿಸುತ್ತೇವೆ.

--

20 ವರ್ಷವಾದರೂ ₹2 ಲಕ್ಷ ಲಾಭವಿಲ್ಲ

ಶಿರಾ ತಾಲ್ಲೂಕಿನ ಗೌಡಗೆರೆಯಿಂದ ಕರೆ ಮಾಡಿದ್ದ ಮಾರುತಿ ಅವರು, ‘ನಮ್ಮಲ್ಲಿ ಡೇರಿ ಪ್ರಾರಂಭವಾಗಿ 20 ವರ್ಷ ಆಯಿತು. ಅದರ ಲೆಕ್ಕಪತ್ರವನ್ನು ಇದುವರೆಗೂ ಸರಿಯಾಗಿ ದಾಖಲಿಸುತ್ತಿಲ್ಲ. ಹಾಗಾಗಿ ₹2 ಲಕ್ಷ ಸಹ ಲಾಭ ಬಂದಿಲ್ಲ’ ಎಂದು ಅಳಲು ತೋಡಿಕೊಂಡರು.

ಅಧ್ಯಕ್ಷರು ಉತ್ತರಿಸಿ, ‘ಡೇರಿಯ ಪ್ರತಿವರ್ಷದ ಲೆಕ್ಕಪತ್ರದ ವರದಿಯನ್ನು ನೀವು ಕೇಳಬಹುದು. ನಿಮ್ಮ ಡೇರಿಯಲ್ಲಿ ನಡೆದಿರುವ ವ್ಯವಹಾರಗಳ ಕುರಿತು ಸಂಪೂರ್ಣ ವರದಿಯನ್ನು ಈಗಾಗಲೇ ತರಿಸಿಕೊಂಡಿದ್ದೇವೆ. ಅದರಲ್ಲಿ ಅವ್ಯವಹಾರ ನಡೆದಿದ್ದರೆ, ಆಡಳಿತ ಮಂಡಳಿಯಿಂದಲೇ ಮೊತ್ತವನ್ನು ವಸೂಲಿ ಮಾಡುತ್ತೇವೆ’ ಎಂದರು.

--

ತುಮುಲ್‌ ನೀಡುತ್ತಿರುವ ಸೌಲಭ್ಯಗಳು

* ಹಾಲು ಉತ್ಪಾದಕರು ಅಕಾಲಿಕವಾಗಿ ಮೃತಪಟ್ಟರೆ ಕುಟುಂಬದ ಸದಸ್ಯರಿಗೆ ₹50 ಸಾವಿರ ನೆರವು

* ರಾಸುಗಳಿಗೆ ರಿಯಾಯಿತಿ ದರದಲ್ಲಿ ಕನಿಜ ಮಿಶ್ರಣ ವಿತರಣೆ

* ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ಹಾಲು ಉತ್ಪಾದಕರ ಮಕ್ಕಳಿಗೆ ವಸತಿ ನಿಲಯ ವ್ಯವಸ್ಥೆ

* ವೃತ್ತಿಪರ ಕೋರ್ಸ್‌ಗಳಲ್ಲಿ ಓದುತ್ತಿರುವ ಹಾಲು ಉತ್ಪಾದಕರ ಮಕ್ಕಳಿಗೆ ಕನಿಷ್ಠ ₹10,000 ದಿಂದ ಗರಿಷ್ಠ ₹25,000 ವರೆಗೆ ಪ್ರೋತ್ಸಾಹಧನ

* ರಾಸುಗಳಿಗೆ ಒಕ್ಕೂಟದಿಂದ ವಿಮೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು