ತುಮಕೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕವಾಗಿ ಚಿಕಿತ್ಸೆ ಸಿಗದಾಗಿದ್ದು, ಜನರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವುದು ಸಾಮಾನ್ಯವಾಗಿದೆ. ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ಪೈಪೋಟಿ ಮೇಲೆ ತಲೆ ಎತ್ತುತ್ತಿರುವುದನ್ನು ನೋಡಿದರೆ ಇದು ವೇದ್ಯವಾಗುತ್ತದೆ.
ಪ್ರಸ್ತುತ ಜಿಲ್ಲೆಯಲ್ಲಿ 336 ಕ್ಲಿನಿಕ್‌ಗಳು, 163 ಖಾಸಗಿ ಆಸ್ಪತ್ರೆಗಳಿವೆ. ಅನಧಿಕೃತ, ನಕಲಿ ವೈದ್ಯರು ನಡೆಸುವ ಕ್ಲಿನಿಕ್‌ಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುತ್ತದೆ. ಬೀದಿಗೆ ಒಂದರಂತೆ ಆಸ್ಪತ್ರೆ, ಕ್ಲಿನಿಕ್‌ಗಳು ತಲೆಎತ್ತುತ್ತಿವೆ.
ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚದ ಚಿಕಿತ್ಸೆಯಿಂದ ಜನ ಹೈರಾಣಾಗುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ ಸ್ಥಿತಿ ಕಂಡು ಖಾಸಗಿ ಮೊರೆ ಹೋಗುವವರು ಆಸ್ಪತ್ರೆಗಳ ವೆಚ್ಚ ನೋಡಿ ಸಂಕಟ ಪಡುತ್ತಿದ್ದಾರೆ. ದುಡಿದ ಹಣವನ್ನು ಆಸ್ಪತ್ರೆಗಳಿಗೆ ಸುರಿಯುತ್ತಿದ್ದಾರೆ. ಸಣ್ಣ ಶಸ್ತ್ರ ಚಿಕಿತ್ಸೆಗೂ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದ್ದಾರೆ.
ತುಮಕೂರು ತಾಲ್ಲೂಕು ವ್ಯಾಪ್ತಿಯಲ್ಲೇ 152 ಕ್ಲಿನಿಕ್‌ಗಳು, 88 ಆಸ್ಪತ್ರೆಗಳಿವೆ. ಕಣ್ಣು, ಕಿವಿ, ಮೂಗು, ಹಲ್ಲು, ಚರ್ಮ ಹೀಗೆ ಒಂದೊಂದು ರೋಗಕ್ಕೂ ಪ್ರತ್ಯೇಕವಾದ ಕ್ಲಿನಿಕ್‌ಗಳು ಆರಂಭವಾಗಿವೆ. ಕ್ಲಿನಿಕ್‌ಗಳಲ್ಲಿ ದುಬಾರಿ ಶುಲ್ಕ ಪಡೆಯುತ್ತಿದ್ದಾರೆ. ಎಲ್ಲ ಸೇವೆ ಒಂದೇ ಕಡೆ ಒದಗಿಸುವ ಉದ್ದೇಶ ಹೊಂದಿರುವ ಜಿಲ್ಲಾ ಆಸ್ಪತ್ರೆ ಮಾತ್ರ ಸಿಬ್ಬಂದಿ, ವೈದ್ಯರ ಕೊರತೆಯಿಂದ ಹೆಣಗಾಡುತ್ತಿದೆ.
‘ದೊಡ್ಡಾಸ್ಪತ್ರೆಯಲ್ಲಿ ಕೆಲಸ ಮಾಡುವ ದೊಡ್ಡ ವೈದ್ಯರು ತಮ್ಮದೇ ಆದ ಸ್ವಂತ ನರ್ಸಿಂಗ್ ಹೋಮ್, ಕ್ಲಿನಿಕ್‌ಗಳನ್ನು ಶುರು ಮಾಡುತ್ತಿದ್ದಾರೆ. ಆಸ್ಪತ್ರೆಗಿಂತ ಕ್ಲಿನಿಕ್‌ಗಳಲ್ಲೇ ಹೆಚ್ಚಿನ ಸಮಯ ಕಳೆಯುತ್ತಾರೆ. ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಕ್ಲಿನಿಕ್‌ನ ಹಾದಿ ತೋರಿಸುತ್ತಿದ್ದಾರೆ. ತಮ್ಮ ಜೇಬು ತುಂಬಿಸಿಕೊಳ್ಳುವ ಕಾಯಕ ತುಂಬಾ ಶ್ರದ್ಧೆಯಿಂದ ಮಾಡುತ್ತಾರೆ’ ಎಂದು ಬೆಳ್ಳಾವಿಯ ರಂಗನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಉಳ್ಳವರು ತಮ್ಮದೇ ಆದ ‘ಫ್ಯಾಮಿಲಿ ಡಾಕ್ಟರ್’ ನೋಡಿಕೊಳ್ಳುತ್ತಿದ್ದಾರೆ. ಬಡವರು ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಇಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗದೆ ವಲ್ಲದ ಮನಸ್ಸಿನಿಂದ, ಅನಿವಾರ್ಯವಾಗಿ ಖಾಸಗಿಗಳ ಮೇಲೆ ಅವಲಂಬಿತರಾಗುತ್ತಿದ್ದಾರೆ. ಆಸ್ಪತ್ರೆಗಳ ಶುಲ್ಕ ಜನರ ಜೀವನಕ್ಕೆ ಮತ್ತಷ್ಟು ಹೊರೆಯಾಗುತ್ತಿದೆ.
ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ ಮತ್ತು ‘ನಮ್ಮ ಕ್ಲಿನಿಕ್’ಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿ ಆಯಾ ಭಾಗದಲ್ಲೇ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಿದರೆ ಖಾಸಗಿ ಆಸ್ಪತ್ರೆಗಳಿಗೆ ಹೋಗುವುದು ತಪ್ಪುತ್ತದೆ.
‘ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಇದ್ದರೆ ಶುಶ್ರೂಷಕರು ಇರಲ್ಲ, ಶುಶ್ರೂಷಕರು ಇದ್ದರೆ ವೈದ್ಯರ ನೇಮಕವೇ ಆಗಿರಲ್ಲ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ದೊರೆಯದ ಸಮಯದಲ್ಲಿ ಜನ ದುಬಾರಿಯಾದರೂ ಪರವಾಗಿಲ್ಲ ಎಂದು ಖಾಸಗಿ ಆಸ್ಪತ್ರೆಗಳತ್ತ ಹೆಜ್ಜೆ ಹಾಕುತ್ತಾರೆ. ದುಡ್ಡು ಕೊಟ್ಟು ಆರೋಗ್ಯ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ನಗರದ ಕೃಷ್ಣಮೂರ್ತಿ ಬೇಸರಿಸಿದರು.
(ತಾಲ್ಲೂಕು;ಖಾಸಗಿ ಆಸ್ಪತ್ರೆ;ಕ್ಲಿನಿಕ್)
ತುಮಕೂರು;88;152
ಗುಬ್ಬಿ;6;24
ಚಿಕ್ಕನಾಯಕನಹಳ್ಳಿ;7;12
ಕೊರಟಗೆರೆ;5;11
ಕುಣಿಗಲ್;6;39
ಮಧುಗಿರಿ;6;19
ಪಾವಗಡ;12;4
ಶಿರಾ;7;19
ತಿಪಟೂರು;22;30
ತುರುವೇಕೆರೆ;4;26
ಒಟ್ಟು;163;336
ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆ ಖಾಸಗಿ ಆಸ್ಪತ್ರೆ, ಕ್ಲಿನಿಕ್ ಸಂಖ್ಯೆ ಹೆಚ್ಚಳ ಖಾಸಗಿ ಆಸ್ಪತ್ರೆ ಮೊರೆ ಹೋಗುವ ಜನ
ಶುಲ್ಕ ಕಡಿಮೆಯಾಗಬೇಕು
ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆದವರು ಮತ್ತೊಮ್ಮೆ ವರದಿ ಪರಿಶೀಲನೆಗೆ ಹೋದಾಗ ಅವರಿಂದ ಮತ್ತೆ ಹಣ ಪಡೆಯಬಾರದು. ಚಿಕಿತ್ಸೆ ಪಡೆದು ವಾರದ ನಂತರ ಕ್ಲಿನಿಕ್‌ಗೆ ಹೋದರೆ ಮತ್ತೆ ದುಡ್ಡು ತೆಗೆದುಕೊಳ್ಳುತ್ತಾರೆ. ಇದು ನಿಲ್ಲಬೇಕು ಕ್ಲಿನಿಕ್‌ಗಳಲ್ಲಿ ದುಬಾರಿ ಶುಲ್ಕ ವಿಧಿಸಬಾರದು. ಎನ್.ಎಸ್.ಪಂಡಿತ್ ಜವಾಹರ್ ಕಾರ್ಯದರ್ಶಿ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.