ಶುಕ್ರವಾರ, ಜನವರಿ 27, 2023
26 °C
ವಿಶ್ವ ಹಿಂದೂ ಪರಿಷತ್ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ

ಶಕ್ತಿ ಪ್ರದರ್ಶನಕ್ಕಾಗಿ ತುಮಕೂರು ಬಂದ್: ಜಿ.ಕೆ.ಶ್ರೀನಿವಾಸ್ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಬಜರಂಗದಳ ಕಾರ್ಯಕರ್ಯರ ಮೇಲೆ ಹಲ್ಲೆ ನಡೆದಿರುವುದನ್ನು ಖಂಡಿಸಿ ಹಾಗೂ ಹಿಂದೂ ಸಮಾಜದ ಶಕ್ತಿ ತೋರಿಸಲು, ನಮ್ಮ ಸಂಘಟನೆ ಶಕ್ತಿ ಪ್ರದರ್ಶಿಸಲು ಶುಕ್ರವಾರ ತುಮಕೂರು ನಗರ ಬಂದ್‌ಗೆ ಕರೆ ನೀಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ಶ್ರೀನಿವಾಸ್ ಹೇಳಿದರು.

ಹಿಂದೂ ಸಮಾಜದ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸಲು ಬಿಡುವುದಿಲ್ಲ. ಹಿಂದೂಗಳಿರುವ ದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್ ಮಾಡಿಸಲಾಗುತ್ತದೆ. ವಾಣಿಜ್ಯ ವಾಹಿವಾಟು ಸ್ಥಗಿತಗೊಳ್ಳಲಿದೆ. ಆಟೊ ಚಾಲಕರ ಸಂಘದವರು, ಎಪಿಎಂಸಿ ಹಾಗೂ ಇತರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಹೊರಗಿನಿಂದ ಬಸ್ ನಿಲ್ದಾಣಕ್ಕೆ ಬಂದು ಹೋಗುವ ಬಸ್‌ಗಳ ಸಂಚಾರಕ್ಕೆ ಅಡ್ಡಿಪಡಿಸುವುದಿಲ್ಲ. ಬಂದ್ ನಗರಕ್ಕೆ ಮಾತ್ರ ಸೀಮಿತವಾಗಿರುತ್ತದೆ. ನಗರದ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ವಿವರಿಸಿದರು.

ಹಾಲು, ಪೆಟ್ರೋಲ್ ಬಂಕ್, ಆಸ್ಪತ್ರೆ, ಔಷಧಿ ಮಳಿಗೆ ಸೇರಿದಂತೆ ಅಗತ್ಯ ಸೇವೆಗಳಿಗೆ ಅಡ್ಡಿಪಡಿಸುವುದಿಲ್ಲ. ನಾವು ಯಾರನ್ನೂ ಬಲವಂತದಿಂದ ಬಂದ್ ಮಾಡಿಸುವುದಿಲ್ಲ. ಹಿಂದೂ ಸಮಾಜದವರು ಸ್ವಯಂ ಪ್ರೇರಿತರಾಗಿ ಸಹಕಾರ ಕೊಡಲಿದ್ದಾರೆ. ಬೆಂಬಲ ನೀಡುವಂತೆ ಎಲ್ಲಾ ಸಂಘಟನೆಗಳಿಗೆ ಮನವಿ ಮಾಡಲಾಗಿದೆ ಎಂದರು.

ಬಜರಂಗದಳ ಜಿಲ್ಲಾ ಸಂಚಾಲಕ ಮಂಜು ಭಾರ್ಗವ ಹಾಗೂ ಕಾರ್ಯಕರ್ತ ಕಿರಣ್ ಮೇಲೆ ತೀವ್ರವಾಗಿ ಹಲ್ಲೆ ಮಾಡಲಾಗಿದೆ. ಮಂಜು ಅವರು ಈ ಹಿಂದೆ ಅಕ್ರಮವಾಗಿ ಗೋವು ಸಾಗಣೆ ಮಾಡುವುದನ್ನು ತಡೆದಿದ್ದರು. ಕಸಾಯಿ ಖಾನೆ ವಿರುದ್ಧ ದೂರು ಸಲ್ಲಿಸಿದ್ದರು. ಇದರಿಂದ ಬೆದರಿಕೆ ಹಾಕಲಾಗಿತ್ತು. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಕ್ರಮ ಜರುಗಿಸಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ ಎಂದು ಆರೋಪಿಸಿದರು.

ಶಾಸಕ ಜ್ಯೋತಿಗಣೇಶ್, ‘ಬಂದ್‌ಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿದೆ. ಹಿಂದೂಗಳಿಗೆ ಭದ್ರತೆ, ರಕ್ಷಣೆ ಇಲ್ಲವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಪಾಕಿಸ್ತಾನ, ಬಾಂಗ್ಲಾ ದೇಶದಲ್ಲಿ ಹಿಂದೂಗಳಿಗೆ ಆಗುತ್ತಿರುವ ಗತಿ, ನಮ್ಮಲೂ ಬರಲಿದೆ. ಇತರರಿಗೆ ಹಿಂದೂಗಳನ್ನು ಕಂಡರೆ ಭಯ, ಭಕ್ತಿ ಇರಬೇಕು. ಹಿಂದೂಗಳ ಪರ ಹೋರಾಡುತ್ತೇವೆ ಎಂಬ ಸಂದೇಶ ರವಾನಿಸಲು ಬಂದ್ ಮಾಡಿಸಲಾಗುತ್ತಿದೆ’ ಎಂದು ತಿಳಿಸಿದರು.

ಗುಂಡಿಟ್ಟು ಕೊಲ್ಲಿ: ಬೈಕ್‌ನಲ್ಲಿ ವ್ಹೀಲಿಂಗ್ ಮಾಡುವವರನ್ನು ಭಯೋತ್ಪಾದಕರು ಎಂದು ಪರಿಗಣಿಸಿ ಗುಂಡಿಟ್ಟು ಕೊಲ್ಲಬೇಕು. ಕಲ್ಲು ತೆಗೆದುಕೊಂಡು ಹೊಡೆದು ಸಾಯಿಸಬೇಕು. ಇಲ್ಲವಾದರೆ ನಿಯಂತ್ರಿಸುವುದು ಸಾಧ್ಯವಾಗುವುದಿಲ್ಲ. ಪಡ್ಡೆ ಯುವಕರು ವ್ಹೀಲಿಂಗ್ ಮಾಡುತ್ತಿದ್ದರೆ ರಸ್ತೆಯಲ್ಲಿ ಜನರು ತೆರಳಲು ಭಯಪಡುತ್ತಾರೆ. ನಡೆದುಕೊಂಡು ಹೋಗುವವರಿಗೆ ಹೃದಯಾಘಾತವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿಶ್ವ ಹಿಂದೂ ಪರಿಷತ್ ಪದಾಧಿಕಾರಿಗಳಾದ ದಯಾನಂದ್, ಪ್ರತಾಪ್, ರೇಣುಕಾನಂದ ಇತರರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು